ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬಿಎಸ್‌ವೈಗೆ ಹುಚ್ಚು-ಎಚ್‌ಡಿಕೆ: ಅಪ್ಪ-ಮಕ್ಕಳು ರಾಜ್ಯಕ್ಕೆ ಶಾಪ; ಸಿಎಂ (Yeddyurappa | Deve gowda | BJP | JDS | Kumaraswmy)
Bookmark and Share Feedback Print
 
PTI
'ಅಪ್ಪ-ಮಕ್ಕಳು ರಾಜ್ಯಕ್ಕೆ ಶಾಪವಾಗಿದ್ದಾರೆ. ಹಾಗಾಗಿ ಅಪ್ಪ-ಮಕ್ಕಳ ಕರ್ಮಕಾಂಡವನ್ನು ಪ್ರತಿನಿತ್ಯ ರಾಜ್ಯದ ಆರೂವರೆ ಕೋಟಿ ಜನರಿಗೆ ತಿಳಿಸುತ್ತೇನೆ' ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕುಮಾರಸ್ವಾಮಿ ವಿರುದ್ಧ ಬಹಿರಂಗವಾಗಿ ಗುಡುಗಿದ್ದಾರೆ. ಇದಕ್ಕೆ ಪ್ರತಿಯಾಗಿ ಕುಮಾರಸ್ವಾಮಿಯೂ ಕೂಡ ತಿರುಗೇಟು ನೀಡುವ ಮೂಲಕ ರಾಜಕೀಯ ಕೆಸರೆರಚಾಟ ತಾರಕಕ್ಕೇರಿದಂತಾಗಿದೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ

ಒಬ್ಬೊಬ್ಬ ಶಾಸಕರಿಗೆ 20-30 ಕೋಟಿ ರೂಪಾಯಿ ಹಣ ಕೊಟ್ಟು ಖರೀದಿಸಲು ಇವರ ಆದಾಯ ಮೂಲ ಯಾವುದೆಂಬುದನ್ನು ನಾಡಿನ ಜನರಿಗೆ ತಿಳಿಸುವ ಕೆಲಸಕ್ಕೆ ಮುಂದಾಗಿದ್ದೇನೆ. ರಾಜ್ಯದ ವಿವಿಧೆಡೆ ಗೌಡರ ಕುಟುಂಬ ಅಕ್ರಮವಾಗಿ ಸುಮಾರು ನಾಲ್ಕು ಸಾವಿರ ಎಕರೆ ಜಮೀನನ್ನು ಮಾಡಿಕೊಂಡಿದ್ದು, ಅವೆಲ್ಲವನ್ನೂ ಪತ್ತೆ ಹಚ್ಚಿ ಸರಕಾರ ವಾಪಸ್ ಪಡೆದು ರಾಜ್ಯದ ಅಭಿವೃದ್ಧಿಗೆ ಬಳಸಿಕೊಳ್ಳುವುದಾಗಿಯೂ ಮುಖ್ಯಮಂತ್ರಿಗಳು ಘೋಷಿಸಿದರು.

ರಾಜ್ಯರಾಜಕೀಯದಲ್ಲಿನ ಕ್ಷಿಪ್ರ ಬೆಳವಣಿಗೆ ಹಿನ್ನೆಲೆಯಲ್ಲಿ ಸಚಿವ ಸಂಪುಟ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಮಾತಿನುದ್ದಕ್ಕೂ ಕುಮಾರಸ್ವಾಮಿ ಮತ್ತು ಗೌಡರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಗೌಡರ ಕುಟುಂಬದ ಅಕ್ರಮವನ್ನು ಪತ್ತೆ ಹಚ್ಚಿ ರಾಜ್ಯದ ಜನರ ಮುಂದಿಡಲು ಸಚಿವರು, ಶಾಸಕರಿಗೆ ಸೂಚನೆ ನೀಡಿದ್ದೇನೆ ಎಂಬುದಾಗಿ ಈ ಸಂದರ್ಭದಲ್ಲಿ ಹೇಳಿದರು.

ಅಷ್ಟೇ ಅಲ್ಲ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನನ್ನ ಸಹಿ ಬಗ್ಗೆ ವಿಕೃತವಾಗಿ ಮಾತನಾಡಿದ್ದಾರೆ. ಅದು ನನ್ನದೇ ಸಹಿ ಎಂದು ಒಪ್ಪಿದ ಮೇಲೆಯೂ ಕುಮಾರಸ್ವಾಮಿ ನನ್ನ ಮೇಲೆ ಗೂಬೆ ಕೂರಿಸಿದ್ದಾರೆ. ಅದೇ ರೀತಿ ಕುಮಾರಸ್ವಾಮಿ ಕೂಡ ಮುಖ್ಯಮಂತ್ರಿಯಾಗಿದ್ದಾಗ ಸಣ್ಣ ಸಹಿ, ದೊಡ್ಡ ಸಹಿ ಮಾಡಿದ್ದಾರಲ್ಲ?ಹಾಗಾದರೆ ಈ ಸಹಿಯನ್ನು ಅಪ್ಪ ಮಾಡಿದ್ದೋ, ಅಣ್ಣನೋ ಎಂಬುದು ಗೊತ್ತಿಲ್ಲ. ಯಾಕೆಂದರೆ ಅವರ ಫೈಲ್ ನೋಡುತ್ತಿದ್ದದ್ದು ಅಪ್ಪ-ಮಕ್ಕಳೇ. ಹಾಗಾಗಿ ಅವರ ಸಹಿ ಮೇಲೆ ನನಗೆ ಅನುಮಾನ ಇದೆ. ಇದನ್ನು ರಾಜ್ಯದ ಜನತೆಗೆ ಸ್ಪಷ್ಟಪಡಿಸಬೇಕು ಎಂದು ಸಲಹೆ ನೀಡಿದರು.

ಜೆಡಿಎಸ್-ಬಿಜೆಪಿ ಮೈತ್ರಿ ಸರಕಾರ ಮುರಿದು ಬಿದ್ದ ನಂತರವೂ ಕುಮಾರಸ್ವಾಮಿ 43 ಎಕರೆ 38ಗುಂಟೆ ಜಮೀನು ಭೂ ಸ್ವಾಧೀನ ಕೈಬಿಟ್ಟಿರುವುದಕ್ಕೆ ಸಹಿ ಹಾಕಿದ್ದಾರೆ. ಅಷ್ಟೇ ಅಲ್ಲ ಬೆಂಗಳೂರು ಪೂರ್ವ ತಾಲೂಕಿನ ಚಿಕ್ಕಗುಬ್ಬೆ ಗ್ರಾಮದಲ್ಲಿ ಕುಮಾರಸ್ವಾಮಿ ಸಹೋದರ ಬಾಲಕೃಷ್ಣೇಗೌಡರ ಪತ್ನಿ ಕವಿತಾ ಅವರ ಬೇನಾಮಿ ಹೆಸರಿನಲ್ಲಿ 34ಎಕರೆ 1 ಗುಂಟೆ ಭೂಮಿ ಖರೀದಿಸಲಾಗಿದೆ. ಅವರ ಸಂಬಂಧಿ ಮಧು ರಾಘವೇಂದ್ರ ಹೆಸರಿನಲ್ಲಿಯೂ 15 ಎಕರೆ ಭೂಮಿ ಲಪಟಾಯಿಸಿದ್ದಾರೆ ಎಂದು ಸಿಎಂ ಆರೋಪಿಸಿದರು.

NRB
ಸಿಎಂಗೆ ಹುಚ್ಚು ಹಿಡಿದಿದೆಯಾ?-ಎಚ್‌ಡಿಕೆ ತಿರುಗೇಟು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಮ್ಮ ಕುಟುಂಬದ ವಿರುದ್ಧ ಆಧಾರ ರಹಿತ ಆರೋಪಗಳನ್ನು ಮಾಡಿರುವುದಾಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸಿಎಂಗೆ ಹುಚ್ಚು ಹಿಡಿದಿದೆಯಾ ಅಂತ ಪರೀಕ್ಷಿಸಿಕೊಳ್ಳಲಿ. ಯಡಿಯೂರಪ್ಪ ಮಹಾನ್ ಸುಳ್ಳುಗಾರ ಎಂಬುದನ್ನು ನಾನೂ ಕೂಡ ರಾಜ್ಯದ ಜನತೆಗೆ ಸಾಬೀತುಪಡಿಸಿ ತೋರಿಸುತ್ತೇನೆ ಎಂದು ತಿರುಗೇಟು ನೀಡಿದ್ದಾರೆ.

ಮುಖ್ಯಮಂತ್ರಿಗಳು ಗೌಡರ ಕುಟುಂಬದ ಬಗ್ಗೆ ಆರೋಪಗಳ ಸುರಿಮಳೆಗೈದ ನಂತರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಯಡಿಯೂರಪ್ಪನವರು ಮತ್ತೆ ಅದೇ ಹಳೆಯ ಗ್ರಾಮಾಫೋನ್ ಅನ್ನೇ ಹಾಕಿದ್ದಾರೆ. ನಮ್ಮ ಕುಟುಂಬದ ಬಗ್ಗೆ ಲಘುವಾಗಿ ಮಾತನಾಡಿದ್ದು, ಹೆಂಡದ ಅಂಗಡಿ ಮುಂದೆ ಕುಳಿತು ಮಾತನಾಡುತ್ತಾರಲ್ಲ ಆ ರೀತಿ ಬಾಯಿಗೆ ಬಂದಂತೆ ಮಾತನಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾವು ಅಪ್ಪ-ಮಕ್ಕಳು ಈ ರಾಜ್ಯಕ್ಕೆ ಶಾಪವಲ್ಲ,ಯಡಿಯೂರಪ್ಪ ಮತ್ತು ಮಕ್ಕಳು ಕೆರೆ-ಕಟ್ಟೆಗಳನ್ನು ನುಂಗಿ ನೀರು ಕುಡಿದಿದ್ದಾರೆ. ಆದರೆ ಗೌಡರ ಕುಟುಂಬ ಕೆರೆ, ಕಟ್ಟೆ ನುಂಗಿ ನೀರು ಕುಡಿದಿಲ್ಲ ಎಂದು ಕಿಡಿಕಾರಿದರು.

ಅಲ್ಲದೆ, ನಾಗರಬಾವಿ ಜಮೀನು ಡಿನೋಟಿಫೈ ನಾನು ಮಾಡಿರುವುದಾಗಿ ಸಾಬೀತುಪಡಿಸಿದರೆ ರಾಜಕೀಯವಾಗಿ ನಿವೃತ್ತಿಯಾಗುತ್ತೇನೆ ಎಂದು ಕುಮಾರಸ್ವಾಮಿ ಬಹಿರಂಗವಾಗಿ ಸವಾಲು ಹಾಕಿದರು. ನನ್ನ ಸಹಿಗಳ ಬಗ್ಗೆ ವಿಧಿವಿಜ್ಞಾನ ಪರೀಕ್ಷೆಯಾಗಲಿ, ಮುಖ್ಯಮಂತ್ರಿಗಳು ಇದಕ್ಕೆ ತಯಾರಾಗಿದ್ದಾರಾ ಎಂದು ಪ್ರಶ್ನಿಸಿದರು.

ನಮ್ಮ ಬೇನಾಮಿ ಆಸ್ತಿ ಹುಡುಕಿ ವಶಪಡಿಸಿಕೊಳ್ಳುತ್ತಾರಂತೆ? ಅಲ್ಲಾ ಮುಖ್ಯಮಂತ್ರಿಗಳಿಗೆ ಏನಾದ್ರೂ ಜವಾಬ್ದಾರಿ ಇದೆಯಾ? ನಾವು ಇವರ ಹಾಗೆ ಯಾವ ಬೇನಾಮಿ ಆಸ್ತಿಯನ್ನೂ ಮಾಡಿಲ್ಲ. ಬೇಕಾದರೆ ನಮ್ಮ ಬೇನಾಮಿ ಆಸ್ತಿ ಹುಡುಕಲು ಬಚ್ಚೇಗೌಡರಿಗೆ ಪ್ರತ್ಯೇಕ ಖಾತೆ ಕೊಡಲಿ ಎಂದು ವ್ಯಂಗ್ಯವಾಡಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪಾಪದ ಕೊಡ ತುಂಬಿದೆ. ಮುಖ್ಯಮಂತ್ರಿಗಳ ದುರಾಡಳಿತದಿಂದ ಜನ ರೋಸಿ ಹೋಗಿದ್ದು, ಜನ ಅವರನ್ನು ದೂರ ಮಾಡುವ ಕಾಲ ಸಮೀಪದಲ್ಲಿಯೇ ಇದೆ ಎಂದು ಭವಿಷ್ಯ ನುಡಿದರು.
ಸಂಬಂಧಿತ ಮಾಹಿತಿ ಹುಡುಕಿ