ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಈಗ ಬಿಜೆಪಿ ಶಾಸಕ ನಾಪತ್ತೆ; ಜೆಡಿಎಸ್ ತೆಕ್ಕೆಯೊಳಗೆ! (Bangalore | Karnataka BJP | BJP Dissidence | Karnataka Government | Devegowda | JDS | Congress)
Bookmark and Share Feedback Print
 
ಕಮಲದ ಕಲಹ ಮತ್ತೊಂದು ರಂಗು ಪಡೆದುಕೊಂಡಿದ್ದು, ಇತ್ತೀಚಿನ ಸುದ್ದಿಯ ಪ್ರಕಾರ, ಬಿಜೆಪಿಯ ಲಿಂಗಸುಗೂರು ಶಾಸಕ ಮಾನಪ್ಪ ವಜ್ಜಲ್ ಅವರು ದಿಢೀರ್ ನಾಪತ್ತೆಯಾಗಿರುವುದು ರಿವರ್ಸ್ ಆಪರೇಶನ್ ಕಮಲದ ಶಂಕೆ ಮೂಡಿಸಿದೆ.

ಅವರು ಜೆಡಿಎಸ್ ಪಾಳಯದಲ್ಲಿ ಗುರುತಿಸಿಕೊಂಡಿದ್ದಾರೆ ಎಂಬ ಕುರಿತು ಮಾಹಿತಿ ದೊರಕಿದೆ. ಅವರ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಅವರು ಬಿಜೆಪಿ ಜತೆಗೆ ಸಂಪರ್ಕ ಕಡಿದುಕೊಂಡಿದ್ದಾರೆಯೇ ಅಥವಾ ಸಂಬಂಧವನ್ನೇ ಕಡಿದುಕೊಳ್ಳುತ್ತಿದ್ದಾರೆಯೇ ಎಂಬುದಿನ್ನೂ ಸ್ಪಷ್ಟವಾಗಬೇಕಿದೆ.

ಅವರು ಒಂದು ದಿನದಿಂದ ನಾಪತ್ತೆಯಾಗಿದ್ದು, ಕೇಂದ್ರದ ಮಾಜಿ ಸಚಿವ ಬಸವರಾಜ ಪಾಟೀಲ್ ಅನ್ವರಿ ಅವರೊಂದಿಗೆ ಬೆಂಗಳೂರಿನ ರೆಸಾರ್ಟ್ ಒಂದರಲ್ಲಿ ತಂಗಿದ್ದಾರೆ ಎಂಬ ಮಾಹಿತಿ ದೊರಕಿದೆ.

ಶಾಸಕರ ಹಕ್ಕು ಹರಣ - ದೇವೇಗೌಡರ ಕಿಡಿಕಿಡಿ
ರಾಜ್ಯದ ರಾಜಕೀಯ ಅಲ್ಲೋಲ ಕಲ್ಲೋಲ ಕುರಿತು ಶುಕ್ರವಾರ ಸಂಜೆ ಪ್ರತಿಕ್ರಿಯೆ ನೀಡಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಜೆಡಿಎಸ್ ಶಾಸಕರ ಮೇಲೆ ಒತ್ತಡ ಹೇರಲಾಗುತ್ತಿದ್ದು, ಬಿಜೆಪಿಯು ಎಲ್ಲ ಎಲ್ಲೆಗಳನ್ನು ಮೀರಿದ ರಾಜಕೀಯ ಪ್ರದರ್ಶಿಸುತ್ತಿದೆ. ಈ ಬಗ್ಗೆ ರಾಜ್ಯಪಾಲರಿಗೆ ದೂರು ನೀಡುವುದಾಗಿ ಹೇಳಿದ್ದಾರೆ. ಈ ನಡುವೆ ಮಗದೊಂದು ಮಹತ್ವದ ಬೆಳವಣಿಗೆಯಲ್ಲಿ, ಬಿಜೆಪಿಯಿಂದಲೇ ಒಬ್ಬ ಶಾಸಕ ನಾಪತ್ತೆಯಾಗಿರುವುದು 'ರಿವರ್ಸ್ ಆಪರೇಶನ್ ಕಮಲ'ದ ವಾಸನೆ ಮೂಡಿಸಿದೆ.

ಮೌರ್ಯ ಹೋಟೆಲ್‌ನಲ್ಲಿ ಜೆಡಿಎಸ್ ಶಾಸಕರ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೇವೇಗೌಡರು, ಬಿಜೆಪಿಯು ಗೌರವಾನ್ವಿತ ಸ್ಪೀಕರ್ ಅವರ ದಾರಿ ತಪ್ಪಿಸಿ ಶಾಸಕರಿಗೆ ನೋಟೀಸ್ ಜಾರಿ ಮಾಡುವ ಮೂಲಕ ಶಾಸಕರ ಹಕ್ಕಿನ ಹರಣ ಮಾಡುವ ಪ್ರಯತ್ನ ಮಾಡಿದೆ. ಇದು ನನ್ನ ರಾಜಕೀಯ ಜೀವನದಲ್ಲಿ ಹಿಂದೆಂದೂ ಕಂಡರಿಯದಂತಹಾ, ದಾರಿ ತಪ್ಪಿದ ಮತ್ತು ಎಲ್ಲ ಎಲ್ಲೆಗಳನ್ನು ಮೀರಿ ಏನೇ ಆದರೂ ಅಧಿಕಾರ ಉಳಿಸಿಕೊಳ್ಳುತ್ತೇವೆ ಎಂಬ ಭಂಡ ವರ್ತನೆಯಾಗಿದೆ ಎಂದು ಆರೋಪಿಸಿದರು.

ಸಂವಿಧಾನಕ್ಕೆ ಅಪಚಾರ ಮಾಡಿ, ಶಾಸಕರಿಗೆಲ್ಲ ನೋಟೀಸ್ ಜಾರಿ ಮಾಡಲಾಗಿದೆ ಎಂದ ಅವರು, ಅಪ್ಪ ಮಕ್ಕಳು ರಾಜ್ಯಕ್ಕೆ ಶಾಪ ಎಂಬ ಸಿಎಂ ಯಡಿಯೂರಪ್ಪ ಹೇಳಿಕೆಗಳಿಗೆ ಪ್ರತಿಕ್ರಿಯಿಸುತ್ತಾ, ಶಾಪ ಹಾಕಿದ್ದಕ್ಕೆ ಆಭಾರಿಯಾಗಿದ್ದೇನೆ. ಆದರೆ ರಾಜ್ಯದ ಜನತೆಯೇ ಈ ಪಕ್ಷಕ್ಕೆ ಓಟು ಕೊಟ್ಟು ನಾವು ತಪ್ಪು ಮಾಡಿದ್ದೇವೆ ಅಂತ ಹೇಳಿ ಶಪಿಸುತ್ತಾ ಇದ್ದಾರೆ.

ನಾಳೆ ಚನ್ನಪಟ್ಟಣ ಬಂದ್
ಈ ಮಧ್ಯೆ, ಜೆಡಿಎಸ್ ಶಾಸಕ ಅಶ್ವತ್ಥ್ ನಾಪತ್ತೆ ಪ್ರಕರಣದ ಹಿನ್ನೆಲೆಯಲ್ಲಿ, ಆಕ್ರೋಶಿತಗೊಂಡಿರುವ ಜೆಡಿಎಸ್ ಕಾರ್ಯಕರ್ತರು ಶನಿವಾರ ಚನ್ನಪಟ್ಟಣ ಬಂದ್‌ಗೆ ಕರೆ ನೀಡಿದ್ದಾರೆ. ಅಶ್ವತ್ಥ್ ಅವರು ಆಪರೇಶನ್ ಕಮಲಕ್ಕೆ ಬಲಿಯಾಗುತ್ತಿದ್ದು, ಜೆಡಿಎಸ್ ತೊರೆಯದಂತೆ ಕಾರ್ಯಕರ್ತರು ಅವರ ಕಚೇರಿ ಮತ್ತು ಮನೆ ಮುಂದೆ ಶುಕ್ರವಾರ ಪ್ರತಿಭಟನೆ ಮಾಡಿದ್ದರು.

ವಿಶ್ರಾಂತಿಗಾಗಿ, ಸ್ನೇಹಿತರ ಭೇಟಿಗೆ ಬಂದೆ ಎಂದ ಕುಮಾರ...
ಈ ನಡುವೆ, ಗೋವಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್.ಡಿ.ಕುಮಾರಸ್ನಾಮಿ, ಕುದುರೆ ವ್ಯಾಪಾರಕ್ಕೆ ತಾನಿಲ್ಲಿಗೆ ಬಂದಿಲ್ಲ, ಹಳೆಯ ಸ್ನೇಹಿತರನ್ನು ಭೇಟಿಯಾಗಲು ಬಂದೆ ಎಂದು ಒಮ್ಮೆ ಹೇಳಿದರೆ, ಮತ್ತೊಮ್ಮೆ, ತಾನು ವಿಶ್ರಾಂತಿಗಾಗಿ ಇಲ್ಲಿಗೆ ಬಂದೆ ಎಂದರು. ತನ್ನ ಪ್ರಯತ್ನ ತನಗೆ ತೃಪ್ತಿ ತಂದಿದೆ ಎಂದೂ ಮಗದೊಮ್ಮೆ ಹೇಳಿದ ಅವರು, ಏನೇ ಆದರೂ ಅ.11ಕ್ಕೆ ಸ್ಪಷ್ಟ ಚಿತ್ರಣ ದೊರಕಲಿದೆ ಎಂದಷ್ಟೇ ಹೇಳಿ ಅವರು ಹೆಚ್ಚಿನ ವಿವರ ನೀಡಲು ನಿರಾಕರಿಸಿದರು. ಅವರು ಶುಕ್ರವಾರ ಸಂಜೆಯೇ ಬೆಂಗಳೂರಿಗೆ ವಾಪಸಾಗುತ್ತಿದ್ದಾರೆ.

ಕಾಂಗ್ರೆಸ್‌ನಿಂದ ಪುಣೆ ಪ್ರವಾಸ...
ಈ ನಡುವೆ, ಆಪರೇಶನ್ ಕಮಲಕ್ಕೆ ತುತ್ತಾಗದಂತೆ ತನ್ನ ಶಾಸಕರನ್ನು ರಕ್ಷಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ತಂಡ ತಂಡವಾಗಿ ಪುಣೆಯ ಲೋಣಾವಲದಲ್ಲಿರುವ ಆಂಬಿ ವ್ಯಾಲಿ ರೆಸಾರ್ಟ್‌ಗೆ ತೆರಳುತ್ತಿದೆ.

ಈ ನಡುವೆ, ಜೆಡಿಎಸ್ ಶಾಸಕರು ಕೂಡ ಮಗದೊಂದು ರೆಸಾರ್ಟ್‌ಗೆ (ಬಿಡದಿಯ ಬಳಿ ಇರುವ ಈಗಲ್ಟನ್ ರೆಸಾರ್ಟ್) ವರ್ಗಾವಣೆಯಾಗುತ್ತಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ