ಬೆಂಗಳೂರು: ಹೇಗಾದರೂ ವಿಶ್ವಾಸಮತ ಸಾಬೀತುಪಡಿಸಿಯೇ ಸಿದ್ಧ ಎಂದು ಹೇಳಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸರಕಾರ, ಕೊನೆಗೂ ಗದ್ದಲ, ಕೂಗಾಟ, ಕಿತ್ತಾಟ ಮುಂತಾದ ರಣಾಂಗಣದ ನಡುವೆಯೇ ಧ್ವನಿಮತದ ಮೂಲಕ ವಿಶ್ವಾಸಮತ ಗೆದ್ದುಕೊಂಡಿದೆ.
ಯಡಿಯೂರಪ್ಪ ಅವರು ವಿಶ್ವಾಸಮತದ ಗೊತ್ತುವಳಿ ಮಂಡಿಸಿದ ತಕ್ಷಣವೇ ಸೋಮವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ಸ್ಪೀಕರ್ ಅವರು ಧ್ವನಿಮತದ ಮೂಲಕ ಅದನ್ನು ಅಂಗೀಕರಿಸಿ, ಸದನವನ್ನು ಮುಂದೂಡಿದ್ದಾರೆ. ಮೂಲಗಳ ಪ್ರಕಾರ, ಸರಕಾರದ ಪರವಾಗಿ 106 ಮತಗಳು ಹಾಗೂ ವಿರುದ್ಧ ಶೂನ್ಯ ಮತಗಳು ಎಂದು ಘೋಷಿಸಲಾಗಿದೆ.
ಗದ್ದಲ, ಕೂಗಾಟ ಮುಂತಾದ ಅಸಾಂವಿಧಾನಿಕ ಚಟುವಟಿಕೆಗಳನ್ನು ವೀಕ್ಷಿಸಿದ ರಾಜ್ಯಪಾಲರು, ವಿಧಾನಮಂಡಲ ಅಮಾನತಿಗೇನಾದರೂ ಕ್ರಮ ಕೈಗೊಳ್ಳುವರೇ, ರಾಷ್ಟ್ರಪತಿಗೆ, ಕೇಂದ್ರಕ್ಕೆ ವರದಿ ಸಲ್ಲಿಸುವರೇ ಎಂಬುದು ಮತ್ತು ಮುಂದೇನು ಕ್ರಮ ಕೈಗೊಳ್ಳುತ್ತಾರೆ ಎಂಬುದು ಇದೀಗ ಎಲ್ಲರ ಕುತೂಹಲಕ್ಕೆ ಕಾರಣವಾಗಿರುವ ಅಂಶ.
ಧ್ವನಿಮತದಿಂದ ಬಹುಮತ ಸಾಬೀತು ಅಂತ ಸ್ಪೀಕರ್ ಕೆ.ಜಿ.ಬೋಪಯ್ಯ ಅವರು ಘೋಷಿಸಿ, ಬಹುಮತದ ನಿರ್ಣಯವನ್ನು ಅಂಗೀಕರಿಸಿ ಸದನವನ್ನು ಮುಂದೂಡಿದ್ದಾರೆ.