ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಕುತಂತ್ರ ರಾಜಕಾರಣ; ಕುಮಾರಸ್ವಾಮಿಗೆ ಮೊದಲ ಸೋಲು (Karnataka govt | BJP | BS Yeddyurappa | HD Kumaraswamy)
Bookmark and Share Feedback Print
 
ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಎಚ್.ಡಿ. ಕುಮಾರಸ್ವಾಮಿ ಸರಕಾರವೊಂದನ್ನು ಉರುಳಿಸುವ ಮೂರನೇ ಯತ್ನದಲ್ಲಿ ವಿಫಲರಾಗಿ ನೆಲ ಕಚ್ಚಿದ್ದಾರೆ!

ಹೌದು, ಈ ಹಿಂದೆ ಎರಡು ಸರಕಾರಗಳನ್ನು ಇದೇ ಕುಮಾರಸ್ವಾಮಿ ಉರುಳಿಸಿದ್ದರು. ಎರಡೂ ಬಾರಿ ಅವರು ಅನುಸರಿಸಿದ್ದು ಕುತಂತ್ರದ ಹಾದಿ. ಅದರಲ್ಲಿ ಯಶಸ್ವಿಯೂ ಆಗಿದ್ದರು. ಈಗ ಬಿ.ಎಸ್. ಯಡಿಯೂರಪ್ಪನವರ ಬಿಜೆಪಿ ಸರಕಾರವನ್ನು ಪತನಗೊಳಿಸಲು ಕೂಡ ಅವರು ಹಿಡಿದದ್ದು ಅಡ್ಡಹಾದಿ. ಆದರೆ ಅವರಿಗೀಗ ಹತಾಶೆಯಾಗಿದೆ.

2004ರಲ್ಲಿ ಜೆಡಿಎಸ್ ಬೆಂಬಲದೊಂದಿಗೆ ಕಾಂಗ್ರೆಸ್‌ನ ಧರಂ ಸಿಂಗ್ ಮುಖ್ಯಮಂತ್ರಿಯಾಗಿದ್ದರು. ಆ ಸರಕಾರವು ಎರಡು ವರ್ಷ ಪೂರೈಸುವುದರೊಳಗೆ ಆಟ ಶುರು ಮಾಡಿದ್ದು ಅದುವರೆಗೆ ತೆರೆಮರೆಯಲ್ಲಿದ್ದ ಎಚ್.ಡಿ. ಕುಮಾರಸ್ವಾಮಿ.
PTI

ತನ್ನ ಅಣ್ಣ ಎಚ್.ಡಿ. ರೇವಣ್ಣರನ್ನು ಮೆಟ್ಟಿ ನಿಂತ ಕುಮಾರಸ್ವಾಮಿ, ಬಿಜೆಪಿ ಜತೆ ಸೇರಿಕೊಂಡು ಸರಕಾರ ರಚಿಸುವ ಪ್ರಸ್ತಾಪವನ್ನು ಮುಂದಿಟ್ಟಿದ್ದರು. ಅದರಂತೆ 2006ರ ಜನವರಿಯಲ್ಲಿ ಧರಂ ಸರಕಾರವನ್ನು ಉರುಳಿಸಿದ ಕುಖ್ಯಾತಿ ಕುಮಾರಸ್ವಾಮಿಯವರ ಬೆನ್ನಿಗೆ ಅಂಟಿಕೊಂಡಿತ್ತು.

ಬಿಜೆಪಿ-ಜೆಡಿಎಸ್ ಮೈತ್ರಿ ಸರಕಾರದಲ್ಲಿ ಮುಖ್ಯಮಂತ್ರಿ ಗದ್ದುಗೆಯನ್ನೇರಿದ ಕುಮಾರಸ್ವಾಮಿ, ಕೊಟ್ಟ ವಚನದಂತೆ ಯಡಿಯೂರಪ್ಪನವರಿಗೆ ಗದ್ದುಗೆ ಹಸ್ತಾಂತರಿಸುವ ಬದಲು ಮತ್ತೆ ಕ್ಯಾತೆ ತೆಗೆದರು. ಬಿಜೆಪಿಗೆ ಅಧಿಕಾರದ ಹುಚ್ಚು ಎಂದರು, ಆತುರಪಡುತ್ತಿರುವುದು ಯಾಕೆ ಎಂದು ಪ್ರಶ್ನಿಸಿದರು.

ಕುಮಾರಸ್ವಾಮಿ ಅಧಿಕಾರ ಹಸ್ತಾಂತರಿಸುವ ಲಕ್ಷಣಗಳು ಕಾಣಿಸದೇ ಇದ್ದುದರಿಂದ ನಿರಾಸೆಗೊಂಡ ಬಿಜೆಪಿಯು ಸರಕಾರದಿಂದ ಬೆಂಬಲವನ್ನು ವಾಪಸ್ ಪಡೆದುಕೊಂಡಿತು. 2007ರ ಅಕ್ಟೋಬರ್ ತಿಂಗಳಲ್ಲಿ ಕುಮಾರಸ್ವಾಮಿ ಮುಖಮಂತ್ರಿ ಪದವಿಯನ್ನು ಕಳೆದುಕೊಂಡರು. ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಾಯಿತು.

ಬಿಜೆಪಿಗೆ ಜೆಡಿಎಸ್ ಮೋಸ ಮಾಡಿತು, ಕುಮಾರಸ್ವಾಮಿ ವಚನ ಭ್ರಷ್ಟ, ಯಡಿಯೂರಪ್ಪರಿಗೆ ಕೈಕೊಟ್ಟರು ಎಂಬಂತಹ ಟೀಕೆಗಳು ಬಂದ ಹಿನ್ನೆಲೆಯಲ್ಲಿ ರಿಪೇರಿ ಯತ್ನಕ್ಕೆ ಮುಂದಾದ ಜೆಡಿಎಸ್, ತಾನು ಬಿಜೆಪಿಗೆ ಬೆಂಬಲ ನೀಡಲು ಸಿದ್ಧ ಎಂದು ಘೋಷಿಸಿತು. ರಾಜ್ಯಪಾಲರಿಗೆ ಈ ಸಂಬಂಧ ಮನವಿಗಳನ್ನೂ ಮಾಡಲಾಯಿತು. 2007ರ ನವೆಂಬರಿನಲ್ಲಿ ರಾಷ್ಟ್ರಪತಿ ಆಡಳಿತ ತೆರವುಗೊಂಡು, ಜೆಡಿಎಸ್ ನೆರವಿನಿಂದ ಯಡಿಯೂರಪ್ಪ ಮುಖ್ಯಮಂತ್ರಿಯಾದರು.

ಸುಮ್ಮನಿರದ ಕುಮಾರಸ್ವಾಮಿ ಮತ್ತೆ ಕ್ಯಾತೆ ತೆಗೆದದ್ದು ಖಾತೆ ಹಂಚಿಕೆಯಲ್ಲಿ. ಜೆಡಿಎಸ್ ಶಾಸಕರಿಗೆ ಅನ್ಯಾಯವಾಗಿದೆ ಎಂದು ಅಲವತ್ತುಕೊಂಡ ಅವರು ಯಡಿಯೂರಪ್ಪನವರನ್ನು ಸಿಎಂ ಕುರ್ಚಿಯಲ್ಲಿ 10 ದಿನವೂ ಕುಳಿತುಕೊಳ್ಳಲು ಅವಕಾಶ ನೀಡಲಿಲ್ಲ. ಸರಕಾರ ಬಿದ್ದು ಹೋಯಿತು. ಮತ್ತೆ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಾಯಿತು.

ನಂತರದ ಚುನಾವಣೆಯಲ್ಲಿ ಕುಮಾರಸ್ವಾಮಿಯವರ ಜೆಡಿಎಸ್ ಮಾಡಿದ ವಿಶ್ವಾಸ ದ್ರೋಹವನ್ನೇ ಮುಂದಿಟ್ಟುಕೊಂಡ ಬಿಜೆಪಿ ರಾಜ್ಯದಲ್ಲಿ ಜಯಭೇರಿ ಬಾರಿಸಿತು. ಏಕಾಂಗಿಯಾಗಿ 110 ಸ್ಥಾನಗಳನ್ನು ಗೆದ್ದ ಬಿಜೆಪಿ, ಪಕ್ಷೇತರರ ಸಹಕಾರದಿಂದ ಸರಕಾರವನ್ನು ರಚಿಸಿತು. ಯಡಿಯೂರಪ್ಪ ಮುಖ್ಯಮಂತ್ರಿಯಾಗಿಯೂ ಆಯ್ಕೆಯಾದರು.

ತೀವ್ರ ಮುಖಭಂಗಕ್ಕೀಡಾದ ಕುಮಾರಸ್ವಾಮಿ ನಂತರದ ದಿನಗಳಲ್ಲಿ ರಾಷ್ಟ್ರ ರಾಜಕಾರಣದತ್ತ ಗಮನ ಹರಿಸಿದರೂ, ರಾಜ್ಯದಲ್ಲಿ ಜೆಡಿಎಸ್ ಪುನಶ್ಚೇತನಕ್ಕೆ ತನ್ನ ಯತ್ನವನ್ನು ಮುಂದುವರಿಸಿದ್ದರು. ಈ ನಡುವೆ ಹಲವು ಜೆಡಿಎಸ್ ಶಾಸಕರು ಬಿಜೆಪಿಯ ಕುಖ್ಯಾತ ಅನೈತಿಕ ಆಪರೇಷನ್ ಕಮಲಕ್ಕೆ ಒಳಗಾದರು.

ಆದರೂ ಉಪಚುನಾವಣೆಯಲ್ಲಿ ಕಾಂಗ್ರೆಸ್‌ಗಿಂತ ಹೆಚ್ಚು ಸ್ಥಾನಗಳನ್ನು ಪಡೆಯುವಲ್ಲಿ ಜೆಡಿಎಸ್ ಯಶಸ್ವಿಯಾಯಿತು. ಮತ್ತೆ ಧೂಳು ಕೆಡವಿ ಎದ್ದುನಿಂತ ಕುಮಾರಸ್ವಾಮಿ ಜನಮನ ಗೆಲ್ಲಲು ಯತ್ನಿಸಿದರು.

ಆದರೆ ಮತ್ತೆ ಅಧಿಕಾರಕ್ಕೆ ಬರಬೇಕೆನ್ನುವ ಹಪಾಹಪಿ ಅವರನ್ನು ಕೊಂಡೊಯ್ದದ್ದು ಅದೇ ಅಡ್ಡ ದಾರಿಯ ಮೂಲಕ. ಬಿಜೆಪಿ ನಡೆಸಿದ ಅನೈತಿಕ ಆಪರೇಷನ್ ಕಮಲವನ್ನು ತೀವ್ರವಾಗಿ ಟೀಕಿಸಿದ್ದ ಜೆಡಿಎಸ್ ಮತ್ತು ಕಾಂಗ್ರೆಸ್‌ಗಳು, ಅದೇ ರೀತಿಯ ತಂತ್ರಗಳನ್ನು ಅನುಸರಿಸುವ ಮೂಲಕ ಆಡಳಿತ ಪಕ್ಷ ಮತ್ತು ಸರಕಾರದ ಬೆಂಬಲಿತ ಪಕ್ಷೇತರ ಶಾಸಕರನ್ನು ಆಮಿಷ ಒಡ್ಡಿ ಸೆಳೆದುಕೊಂಡವು.

ಸ್ವತಃ ಕುಮಾರಸ್ವಾಮಿಯೇ ಮುಂದೆ ನಿಂತು ಬಿಜೆಪಿ ಮತ್ತು ಪಕ್ಷೇತರ ಶಾಸಕರನ್ನು ಸರಕಾರದಿಂದ ಬೆಂಬಲ ಹಿಂದಕ್ಕೆ ಪಡೆದುಕೊಳ್ಳುವಂತೆ ನೋಡಿಕೊಂಡರು. ಇದಕ್ಕೆ ಕಾಂಗ್ರೆಸ್ ತನ್ನದೇ ಆದ ರೀತಿಯಲ್ಲಿ ಸಹಕಾರ ನೀಡುತ್ತಾ ಹೋಯಿತು. ಬಿಜೆಪಿಯ ಹತ್ತಾರು ಶಾಸಕರಿಗೆ ಫೋನ್ ಕರೆ ಮಾಡಿ ಕೋಟಿಗಟ್ಟಲೆ ಆಫರುಗಳನ್ನು ಕುಮಾರಸ್ವಾಮಿ ಕೊಟ್ಟರು ಎಂದೂ ಕೇಸರಿ ಪಕ್ಷವು ಆರೋಪಿಸಿತು.

ಇಷ್ಟೆಲ್ಲ ನಡೆದರೂ ಕುಮಾರಸ್ವಾಮಿ ತಂತ್ರ ಯಶಸ್ವಿಯಾಗಲಿಲ್ಲ. ತಾನು ಕೇಂದ್ರ ಸಚಿವನಾಗುವುದು, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುವುದು ಮತ್ತು ಸಹೋದರ ರೇವಣ್ಣ ಉಪಮುಖ್ಯಮಂತ್ರಿಯಾಗುವುದು -- ಅದಕ್ಕಿಂತಲೂ ಹೆಚ್ಚಾಗಿ ಬಿಜೆಪಿ ಸರಕಾರವನ್ನು ಉರುಳಿಸುವ ಯತ್ನದಲ್ಲಿ ಕುಮಾರಣ್ಣನಿಗೆ ಮೊದಲ ಬಾರಿ ಸೋಲುಂಟಾಗಿದೆ.

ಕೊನೆಗೂ 'ನೂಲಿನಂತೆ ಸೀರೆ, ತಾಯಿಯಂತೆ ಮಗಳು' ಎಂಬುದು ಕುಮಾರಸ್ವಾಮಿಯವರ ವಿಚಾರದಲ್ಲಿ ಸಾಬೀತಾಗಿದೆ. ಒಮ್ಮೆ ಸೋತರೂ ಸೋಲೆಂದು ಒಪ್ಪಿಕೊಳ್ಳದೆ ಧೂಳಿನಿಂದ ಎದ್ದು ಬರುವ ಛಾತಿ ಅವರ ತಂದೆ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರದ್ದು. ಅದೇ ರೀತಿ ಕುಮಾರಸ್ವಾಮಿ ಮರಳಿ ಯತ್ನವನ್ನು ಮಾಡದೆ ಸುಮ್ಮನಿರಲಾರರು ಎಂದೇ ಹೇಳಲಾಗುತ್ತಿದೆ.

ಪ್ರಸಕ್ತ ಚೆಂಡು ರಾಜ್ಯಪಾಲರ ಅಂಗಳದಲ್ಲಿದೆ. ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕು.
ಸಂಬಂಧಿತ ಮಾಹಿತಿ ಹುಡುಕಿ