ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ರಾಜ್ಯ ರಾಜಕೀಯದಲ್ಲಿ ನಿನ್ನೆ ನಡೆದ ಮಸಾಲೆ ಸಂಗತಿಗಳಿವು (Karnataka govt | BJP | Congress | Worst politics)
Bookmark and Share Feedback Print
 
PR
ರಾಜ್ಯ ರಾಜಕೀಯದಲ್ಲಿ ನಿನ್ನೆಯ ದಿನ ನಡೆದು ಹೋದ ನಾಟಕಗಳಲ್ಲಿ ಹತ್ತು ಹಲವು ದೃಶ್ಯಗಳಿದ್ದವು. ಆಡಳಿತ ಪಕ್ಷ ಬಿಜೆಪಿ ಮತ್ತು ಪ್ರತಿಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್‌ಗಳು ಹೆಣೆದ ತಂತ್ರಗಳು ಅಷ್ಟಿಷ್ಟಲ್ಲ. ಅವುಗಳಲ್ಲಿ ಗಮನ ಸೆಳೆದ, ನಗು ತರಿಸಿದ ಕೆಲವು ಮಸಾಲೆ ಪ್ರಸಂಗಗಳು ಇಲ್ಲಿವೆ, ಓದಿಕೊಳ್ಳಿ.

ಸುಧಾಕರ್ ಓಡಿ ಹೋಗಿದ್ದು ಗೊತ್ತಾ?
ನಿನ್ನೆ ವಿಧಾನಸಭೆಯಲ್ಲಿ ಅನರ್ಹಗೊಂಡ ಮಾಜಿ ಸಚಿವ, ಪಕ್ಷೇತರ ಶಾಸಕ ಡಿ. ಸುಧಾಕರ್ ಮತ್ತು ನರೇಂದ್ರ ಸ್ವಾಮಿ ಅಬ್ಬರಿಸಿದ್ದನ್ನು ಎಲ್ಲರೂ ನೋಡಿರುತ್ತೀರಿ. ಅನರ್ಹಗೊಂಡಿದ್ದರಿಂದ ಪೊಲೀಸರು ವಿಧಾನಸಭೆ ಪ್ರವೇಶಿಸದಂತೆ ತಡೆದಾಗ ಸುಧಾಕರ್ ಪಿತ್ತ ನೆತ್ತಿಗೇರಿತ್ತು.

ಅಷ್ಟರಲ್ಲಿ ಸೌಮ್ಯ ಸ್ವಭಾವದ ಗೃಹಸಚಿವ ಆರ್. ಅಶೋಕ್ ಅವರು ಎದುರಿಗೆ ಸಿಕ್ಕಿದ್ದರು. ತನ್ನ ಕೋಪವನ್ನು ಅಶೋಕ್ ಮೇಲೆ ಹರಿಸಿದ ಸುಧಾಕರ್, ಮನಬಂದಂತೆ ಅವಾಚ್ಯ ಶಬ್ದಗಳನ್ನು ಬಳಕೆ ಮಾಡಿ ನಿಂದಿಸಲಾರಂಭಿಸಿದರು.

ತಾಳ್ಮೆ ಕಳೆದುಕೊಂಡ ಅಶೋಕ್ ಮತ್ತು ಸಚಿವ ಶ್ರೀರಾಮುಲು ಕೋಪೋದ್ರಿಕ್ತರಾದರು. 'ನಮ್ಮ ಬಗ್ಗೆ ಏನು ಮಾತಾಡ್ತಿದ್ದೀಯಾ..' ಎಂದು ದೌಡಾಯಿಸುತ್ತಿದ್ದಂತೆ ಸುಧಾಕರ್ ಪರಾರಿ. ಎಲ್ಲಿ ತನಗೆ ಗೂಸಾ ಬೀಳುತ್ತದೋ ಎಂದು ತಪ್ಪಿಸಿಕೊಂಡು ಪ್ರತಿಪಕ್ಷಗಳ ಗ್ಯಾಲರಿಯಲ್ಲಿ ಸುಮ್ಮನೆ ಸೇರಿಕೊಂಡಿದ್ದರು.

ಮಾರ್ಷಲ್‌ಗಳಿಗೆ ಭಕ್ಷೀಸು ಕೊಟ್ಟರು...
ತಾವು ಜನಪ್ರತಿನಿಧಿಗಳೆಂಬುದನ್ನೂ ಮರೆತು ಕಾಂಗ್ರೆಸ್, ಜೆಡಿಎಸ್ ಮತ್ತು ಬಂಡಾಯ ಶಾಸಕರುಗಳು ಮಾರ್ಷಲ್‌ಗಳ ಮೇಲೆ ಹಲ್ಲೆ ನಡೆಸಿದ್ದು ಮೊದಲನೆ ಹಂತ. ಇದು ಟೀವಿಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಧರೆಗಿಳಿದ ಪ್ರತಿಪಕ್ಷಗಳು, ಅವರನ್ನು ಸಮಾಧಾನ ಪಡಿಸುವ ಕೆಲಸಕ್ಕೂ ಇಳಿದಿದ್ದವು.

ಅದರಂತೆ ಜೆಡಿಎಸ್‌ನ ನಾಯಕ ರೇವಣ್ಣ ಅವರು ಕೆಲವು ಮಾರ್ಷಲ್‌ಗಳ ಕಿಸೆಗೆ ಒಂದಷ್ಟು ರೊಕ್ಕ ಸುರಿದರು. ಎಷ್ಟೆಷ್ಟು ಮತ್ತು ಯಾರಿಗೆಲ್ಲ ಹಣ ಕೊಟ್ಟಿದ್ದಾರೆ ಎಂಬುದು ಬಹಿರಂಗವಾಗಿಲ್ಲ. ಬೆನ್ನಿಗೆ ನಡೆದಿರುವ ಘಟನೆಗೆ ಕ್ಷಮೆ ಕೂಡ ಕೇಳಿದ್ದಾರಂತೆ.

ಗೂಳಿ ಕಾಳಗ...
ಕುಮಾರಣ್ಣನ ತಂತ್ರಗಳು ವಿಫಲವಾಯಿತೆಂದಾಗ ತೀವ್ರ ಹತಾಶೆಗೊಳಗಾದ ಅನರ್ಹಗೊಂಡ ಪಕ್ಷೇತರ ಶಾಸಕ ಗೂಳಿಹಟ್ಟಿ ಶೇಖರ್ ಅಂಗಿ ಹರಿದುಕೊಂಡದ್ದು, ಬಾಯಿ ಬಾಯಿ ಬಡಿದುಕೊಂಡು ಲಬೋ ಲಬೋ ಎಂದು ಅತ್ತಿದ್ದು ಗೊತ್ತೇ ಇದೆ.
PR

ಇದಾದ ಸ್ವಲ್ಪವೇ ಹೊತ್ತಿನಲ್ಲಿ ಹೊರಗಡೆ ಕಾಣಿಸಿಕೊಂಡ ಗೂಳಿಹಟ್ಟಿಯವರ ಮೈಮೇಲೆ ಹರಿದ ಅಂಗಿಯಿರಲಿಲ್ಲ. ಬದಲಿಗೆ ಹೊಸ ಅಂಗಿಯನ್ನು ಧರಿಸಿದ್ದರು.

ಗಾಜು ಪುಡಿ ಮಾಡಿ ಪೋಸ್ ಕೊಟ್ಟರು...
ನಿನ್ನೆಯ ದಿನ ಶಾಸಕ ಎಚ್.ಸಿ. ಮಹದೇವಪ್ಪ ಅವರು ತನ್ನ ಕೈಗೆ ಗಾಯವಾಗಿರುವುದನ್ನು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ ಗೆದ್ದಿರುವಂತೆ ಎತ್ತೆತ್ತಿ ತೋರಿಸಿರುವುದನ್ನು ಎಲ್ಲರೂ ನೋಡಿದ್ದಾರೆ. ಬಹುಶಃ ಯಾರೋ ಹಲ್ಲೆ ಮಾಡಿರಬೇಕು ಎಂದು ಅಂದುಕೊಂಡಿದ್ದರೆ ಅದು ತಪ್ಪು.

ಥೇಟ್ ಗೂಂಡಾಗಳಂತೆ ವರ್ತಿಸಿದ್ದ ಶಾಸಕ ಸ್ವಯಂ ಮಾಡಿಕೊಂಡಿರುವ ಗಾಯವಿದು. ಮಹದೇವಪ್ಪ ಅವರು ವಿಧಾನಸಭೆಯೊಳಗೆ ಗಾಜನ್ನು ಒಡೆಯುವ ಸಾಹಸ ಪ್ರದರ್ಶನಕ್ಕಿಳಿದಿದ್ದರು. ಇದನ್ನೇ ಪತ್ರಿಕಾ ಛಾಯಾಗ್ರಾಹಕರಿಗೆ ಎತ್ತೆತ್ತಿ ತೋರಿಸುತ್ತಾ, ಇದು ಬಿಜೆಪಿ ಸರಕಾರದ ಕೊಡುಗೆ ಎಂಬಂತೆ ತೋರಿಸುತ್ತಿದ್ದುದು ಗಮನ ಸೆಳೆದಿತ್ತು.

ಅಭಯಚಂದ್ರ ಜೈನ್ ಕೆಂಡಾಮಂಡಲ...
ಮೂಡಬಿದಿರೆ ಶಾಸಕ ಹಾಗೂ ಕಾಂಗ್ರೆಸ್ ಸಚೇತಕ ಅಭಯಚಂದ್ರ ಜೈನ್ ಮೊದಲಿನಿಂದಲೂ ತನ್ನ ಉರಿ ಕೋಪಕ್ಕೆ ಹೆಸರಾದವರು. ಬೆಳ್ತಂಗಡಿ ಕಾಂಗ್ರೆಸ್ ಶಾಕ ವಸಂತ ಬಂಗೇರ ಕೂಡ ಇದೇ ಸಾಲಿನವರು.

ಆದರೆ ನಿನ್ನೆ ಮಾರ್ಷಲ್‌ಗಳ ಮೇಲೆ ಜೈನ್ ಹಲ್ಲೆ ನಡೆಸಿದಾಗ ಬಿಡಿಸಿದ್ದು ಬಂಗೇರ. ಕೋಪೋದ್ರಿಕ್ತರಾಗಿದ್ದ ಜೈನ್ ಮಾರ್ಷಲ್ ಒಬ್ಬನ ಕಾಲರ್ ಪಟ್ಟಿ ಹಿಡಿದು ಹಿಗ್ಗಾಮುಗ್ಗಾ ಝಾಡಿಸುತ್ತಿದ್ದರು. ಕೆಳಗೆ ಹಾಕಿ ತುಳಿಯುತ್ತಿದ್ದರು. ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಬಂಗೇರ ಅವರು ಜೈನ್‌ರನ್ನು ಸಮಾಧಾನ ಪಡಿಸಿದರು. ಅಷ್ಟರಲ್ಲಿ ಬಿದರಿ ಕೂಡ ಮಾರ್ಷಲ್ ರಕ್ಷಣೆಗೆ ಧಾವಿಸಿದ್ದರು.

ಹೇಗಿದೆ ಪ್ರತಿಪಕ್ಷಗಳ ಶಾಸಕರ ಗೂಂಡಾ ವರ್ತನೆ?

ಮುಖ್ಯಮಂತ್ರಿಯವರ ನಾಯಿ ಪ್ರೀತಿ...
ಮೊನ್ನೆ ಮೊನ್ನೆ ಕೆಲ ಬಿಜೆಪಿ ಮತ್ತು ಪಕ್ಷೇತರ ಶಾಸಕರು ಸರಕಾರದಿಂದ ಬೆಂಬಲ ಹಿಂದಕ್ಕೆ ಪಡೆದುಕೊಂಡ ನಂತರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನಾಯಿಗಳ ಬಗ್ಗೆ ಮಾತನಾಡಿದ್ದರು. ನಿನ್ನೆ ವಿಶ್ವಾಸ ಮತ ಗೆದ್ದ ನಂತರವೂ ತನ್ನ ಮಾತಿಗೆ ನಾಯಿಗಳನ್ನು ಎಳೆದು ತಂದರು.

ನಾಯಿಗಾದರೂ ನಿಷ್ಠೆ ಇರುತ್ತದೆ. ಆದರೆ ಮನುಷ್ಯರಲ್ಲಿ ಈಗೀಗ ನಿಷ್ಠೆ ಕಡಿಮೆಯಾಗುತ್ತಿದೆ ಎಂದು ಯಡಿಯೂರಪ್ಪ ಹೇಳಿದ್ದರು. ನಿನ್ನೆ ಪ್ರತಿಪಕ್ಷಗಳ ವರ್ತನೆಯ ಬಗ್ಗೆ ಅಸಹನೆ ವ್ಯಕ್ತಪಡಿಸುತ್ತಾ, 'ಇವರ ಈ ವರ್ತನೆಯನ್ನು ಕಂಡು ಬೀದಿ ನಾಯಿ ಕೂಡ ಬೊಗಳದು' ಎಂದಿದ್ದಾರೆ.

ಪ್ರಾಣಿ ದಯಾ ಸಂಘದವರೇನಾದರೂ ಕೇಳಿಸಿಕೊಂಡರೆ ನಾಯಿಗಳಿಗೆ ಅವಮಾನ ಮಾಡಲಾಗುತ್ತಿದೆ ಎಂದು ಸಿಎಂ ಮೇಲೆ ಕೇಸು ಹಾಕುತ್ತಾರೇನೋ?!

ಹಲೋ.. ವರ್ತೂರು ಇದ್ದಾರಾ?
ಅಹಿಂದ ಮುಖಂಡ ಎಂದು ಹೇಳುತ್ತಾ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರ ಹಿಂದೆ ಸುತ್ತುತ್ತಿದ್ದ ಕೋಲಾರದ ಪಕ್ಷೇತರ ಶಾಸಕ ವರ್ತೂರು ಪ್ರಕಾಶ್ ನಂತರ ತನ್ನ ಗುರುವಿಗೆ ತಿರುಗಿ ಬಿದ್ದದ್ದು ಹಳೆ ವಿಚಾರ. ಆರಂಭದಿಂದಲೂ ಸುದ್ದಿಯಲ್ಲಿದ್ದ ಅವರು, ಕೆಲ ದಿನಗಳಿಂದ ಯಾರ ಗಮನವನ್ನೂ ಸೆಳೆದಿರಲಿಲ್ಲ.
PR

ಆದರೆ ಅವರು ಬೀಸೋ ದೊಣ್ಣೆಯಿಂದ ಮಾತ್ರ ತಪ್ಪಿಸಿಕೊಂಡಿದ್ದಾರೆ. ಇತರ ಐವರು ಪಕ್ಷೇತರರು ಬಿಜೆಪಿ ವಿಪ್ ಸ್ವೀಕರಿಸಿ, ಶಾಸಕಾಂಗ ಪಕ್ಷದ ನಡವಳಿಕೆಗಳಿಗೆ ಸಹಿ ಹಾಕುವ ಮೂಲಕ ಬಿಜೆಪಿಯ ಸಹ ಸದಸ್ಯರಾಗಿದ್ದರು. ಅದೇ ಈಗ ಅವರಿಗೆ ಮುಳುವಾಗಿದ್ದು.

ಈ ಗಂಡಾಂತರದಿಂದ ವರ್ತೂರು ಪಾರಾಗಿದ್ದಾರೆ. ಇವರು ಬಿಜೆಪಿಯ ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗಿದ್ದೇ ಎರಡು ಬಾರಿ. ಆದರೆ ಯಾವತ್ತೂ ಸಹಿ ಹಾಕಿರಲಿಲ್ಲ. ಹಾಕಿ ಎಂದು ಕೇಳಿದವರಿಗೇ ಗದರಿಸಿದ್ದರು. ಒಂದೇ ಒಂದು ವಿಪ್ ಕೂಡ ಸ್ವೀಕರಿಸಿರಲಿಲ್ಲ.

ಪ್ಲೀಸ್, ವರ್ತೂರು ಚಾಣಾಕ್ಷ ರಾಜಕಾರಣಿ ಎಂದು ಒಪ್ಪಿಕೊಳ್ಳಿ.

ಸ್ಪೀಕರ್ ಲೋಫರಾ?
ಗೊತ್ತಿಲ್ಲ, ಆದರೆ ನಿನ್ನೆ ಪ್ರತಿಪಕ್ಷದ ಶಾಸಕರು ಸ್ಪೀಕರ್ ಕೆ.ಜಿ. ಬೋಪಯ್ಯ ಅವರನ್ನು ನಿಂದಿಸಲು ಬಳಸಿದ ಭಾಷೆಯಿದು. ಸರಕಾರದ ಚೇಲಾ, ಲೋಫರ್ ಸೇರಿದಂತೆ ಇನ್ನೂ ಕರ್ಮಠ ಪದಗಳನ್ನು ಬಳಸಿ ತಮ್ಮ ಕೋಪವನ್ನು ಪ್ರದರ್ಶಿಸಿದರು. ಸ್ವತಃ ಸಿದ್ಧರಾಮಯ್ಯ ಸೇರಿದಂತೆ ಪ್ರತಿಪಕ್ಷಗಳ ಮುಖಂಡರು ಕೈಕೈ ಮಿಲಾಯಿಸಿದ್ದು ಕೇವಲ ಆರೋಪವಲ್ಲ, ವೀಡಿಯೋ ಕ್ಯಾಮರಾಗಳಲ್ಲೇ ದಾಖಲಾಗಿದೆ.

ರೌಡಿಸಂ ಪ್ರದರ್ಶಿಸುತ್ತಿದ್ದ ಇವರನ್ನೆಲ್ಲ ನಿಯಂತ್ರಿಸಲು ಬಂದ ಮಾರ್ಷಲ್‌ಗಳನ್ನಂತೂ ಸೂ.. ಮಗನೇ, ಸೂ.. ಮಕ್ಕಳಾ ಎಂದೆಲ್ಲ ಬಾಯಿಗೆ ಬಂದಂತೆ ನಿಂದಿಸಲಾಯಿತು. ಸ್ವತಃ ರೇವಣ್ಣ ತಮ್ಮ ಎಂದಿನ ಭಾಷೆಯಲ್ಲಿ ಬೈಗುಳ ಸುರಿಸುತ್ತಾ ಸದನದ ತುಂಬಾ ಮೆರೆದಾಡಿದರು.

ಬದುಕಿದ ಸ್ಪೀಕರ್...
ನಿನ್ನೆಯ ದಿನ ಇಂತಹ ಗದ್ದಲಗಳು, ಗಲಾಟೆಗಳು ನಡೆಯಬಹುದು ಎಂಬುದನ್ನು ಮೊದಲೇ ಊಹಿಸಿದ್ದ ಸ್ಪೀಕರ್ ಕೆ.ಜಿ. ಬೋಪಯ್ಯ ಅವರು, ಸದನದ ಒಳಗಡೆ ಸುಲಭವಾಗಿ ಕೈಗೆ ಸಿಗುವ ಎಲ್ಲಾ ವಸ್ತುಗಳನ್ನು ಇಡದಂತೆ ಸೂಚನೆ ನೀಡಿದ್ದರು.

ಅದರಂತೆ ಸಾಮಾನ್ಯವಾಗಿ ಶಾಸಕರ ಟೇಬಲ್ ಮೇಲಿರುವ ಮೈಕ್, ಪೇಪರ್ ವೈಟ್ ಮುಂತಾದುವುಗಳನ್ನು ತಪ್ಪಿಸಿ ಇಡಲಾಗಿತ್ತು. ಅವೆಲ್ಲ ಶಾಸಕರ ಕೈ ಅಳತೆಯಲ್ಲಿ ಇದ್ದಿದ್ದರೆ ಖಂಡಿತಾ ಅದರಿಂದಲೇ ಬಡಿಯುತ್ತಿದ್ದರೋ ಏನೋ?
ಸಂಬಂಧಿತ ಮಾಹಿತಿ ಹುಡುಕಿ