ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » 11 ಶಾಸಕರ ಅನರ್ಹತೆ ಪ್ರಕರಣ: ಜಡ್ಜ್‌ಗಳ ವಿಭಿನ್ನ ತೀರ್ಪು (High court | BJP | Yeddyurappa | Congress | JDS | Kumaraswmay)
Bookmark and Share Feedback Print
 
NRB
ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಹುಟ್ಟುಹಾಕಿದ್ದ ಬಿಜೆಪಿಯ 11 ಶಾಸಕರ ಅನರ್ಹತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ಖೇಹರ್ ಅವರು ವಿಧಾನಸಭಾ ಸ್ಪೀಕರ್ ಕೆ.ಜಿ.ಬೋಪಯ್ಯ ಅವರ ಆದೇಶವನ್ನು ಎತ್ತಿಹಿಡಿದರೆ, ಮತ್ತೊಬ್ಬ ನ್ಯಾಯಮೂರ್ತಿ ಎನ್.ಕುಮಾರ್ ಅವರು ಆದೇಶವನ್ನು ತಿರಸ್ಕರಿಸುವ ಮೂಲಕ ಪ್ರಕರಣ 3ನೇ ನ್ಯಾಯಮೂರ್ತಿಗೆ ವರ್ಗಾಯಿಸಿದ್ದಾರೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ

11 ಶಾಸಕರ ಅನರ್ಹತೆ ಪ್ರಕರಣದ ಕುರಿತಂತೆ ಸೋಮವಾರ ಹೈಕೋರ್ಟ್ ವಿಭಾಗೀಯ ಪೀಠದ ಮುಖ್ಯನ್ಯಾಯಮೂರ್ತಿ ಜೆ.ಎಸ್.ಖೇಹರ್ ಮತ್ತು ನ್ಯಾ.ಎನ್.ಕುಮಾರ್ ಅವರು ವಿಭಿನ್ನ ಅಭಿಪ್ರಾಯವನ್ನು ಮಂಡಿಸಿದ್ದಾರೆ.

ಶಾಸಕರ ಅನರ್ಹತೆಯ ಸ್ಪೀಕರ್ ಅವರ ಆದೇಶವನ್ನು ನ್ಯಾ.ಜೆ.ಎಸ್.ಖೇಹರ್ ಅವರು ಎತ್ತಿಹಿಡಿದಿದ್ದರೆ, ನ್ಯಾ.ಎನ್.ಕುಮಾರ್ ಅವರು ಸ್ಪೀಕರ್ ಆದೇಶವನ್ನು ತಿರಸ್ಕರಿಸಿದ್ದಾರೆ. ಆ ನಿಟ್ಟಿನಲ್ಲಿ ಇದೀಗ ಪ್ರಕರಣವನ್ನು ಮೂರನೇ ನ್ಯಾಯಮೂರ್ತಿಗೆ ವರ್ಗಾಯಿಸಿದ್ದಾರೆ. ಪ್ರಕರಣದ ವಿಚಾರಣೆಯನ್ನು ಅಕ್ಟೋಬರ್ 20ಕ್ಕೆ ಮುಂದೂಡಲಾಗಿದೆ. ಅಂದು ಮೂರನೇ ನ್ಯಾಯಮೂರ್ತಿ 11 ಮಂದಿ ಶಾಸಕರ ಅನರ್ಹತೆ ಕುರಿತಂತೆ ತಮ್ಮ ತೀರ್ಪು ನೀಡಲಿದ್ದಾರೆ ಎಂದು ವಕೀಲರು ತಿಳಿಸಿದ್ದಾರೆ.

ಇಬ್ಬರು ನ್ಯಾಯಮೂರ್ತಿಗಳಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಅಂಶಗಳಲ್ಲಿ,ಕೇವಲ ಒಂದು ಅಂಶದ ಬಗ್ಗೆ ಮಾತ್ರ ವಿಭಿನ್ನ ಅಭಿಪ್ರಾಯ ನೀಡಿದ್ದಾರೆ.

*ಒಂದನೇ ಅಂಶ-ನಿಯಮ ಉಲ್ಲಂಘನೆ(ಸ್ಪೀಕರ್ ಅವರು ನಿಯಮ ಉಲ್ಲಂಘಿಸಿಲ್ಲ ಎಂದು ಇಬ್ಬರೂ ನ್ಯಾಯಮೂರ್ತಿಗಳು ಸಹಮತ ವ್ಯಕ್ತಪಡಿಸಿದ್ದರಾರೆ)

*ಎರಡನೇ ಅಂಶ-ನೈಸರ್ಗಿಕ ನ್ಯಾಯ(ಸ್ಪೀಕರ್ ಅವರಿಂದ ನೈಸರ್ಗಿಕ ನ್ಯಾಯ ಪಾಲನೆ ಅಗಿದೆ ಎಂದು ಇಬ್ಬರೂ ನ್ಯಾಯಮೂರ್ತಿಗಳಿಂದ ಒಮ್ಮತಾಭಿಪ್ರಾಯ)

*ಮೂರನೇ ಅಂಶ-ಸ್ಪೀಕರ್ ಆದೇಶದಲ್ಲಿ ದುರುದ್ದೇಶ ವಿಚಾರ(ಸ್ಪೀಕರ್ ಅವರು ನೀಡಿರುವ ಆದೇಶದಲ್ಲಿ ಯಾವುದೇ ದುರುದ್ದೇಶವಿಲ್ಲ ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

*ನಾಲ್ಕನೇ ಅಂಶ-ಶಾಸಕರ ಅನರ್ಹತೆ ವಿಚಾರ(ಈ ಅಂಶದ ಬಗ್ಗೆ ಮಾತ್ರ ಇಬ್ಬರು ನ್ಯಾಯಮೂರ್ತಿಗಳು ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದು, ಈ ಬಗ್ಗೆ ಮೂರನೇ ನ್ಯಾಯಮೂರ್ತಿ ಅವರು ತೀರ್ಪು ನೀಡಲಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಬಂಡಾಯದ ಕಹಳೆ ಮೊಳಗಿಸಿದ್ದ 11 ಮಂದಿ ಬಿಜೆಪಿ ಶಾಸಕರು ಮತ್ತು ಐವರು ಪಕ್ಷೇತರರನ್ನು ಸದಸ್ಯತ್ವದಿಂದ ಅನರ್ಹಗೊಳಿಸಿ ಸ್ಪೀಕರ್ ಕೆ.ಜಿ.ಬೋಪಯ್ಯ ಅವರು ಅಕ್ಟೋಬರ್ 10ರಂದು ಆದೇಶ ಹೊರಡಿಸಿದ್ದರು. ಅ.11ರಂದು ಈ ಆದೇಶವನ್ನು ಪ್ರಕಟಿಸಲಾಗಿತ್ತು.

ಯಡಿಯೂರಪ್ಪ ಅವರು ಮೊದಲ ಬಾರಿ ವಿಶ್ವಾಸಮತ (ಅ.11) ಯಾಚಿಸಿದ ಅವಧಿಗಿಂತ ಕೆಲ ಕ್ಷಣಗಳ ಮುನ್ನ ಶಾಸಕರನ್ನು ಅನರ್ಹಗೊಳಿಸಿದ ವಿಚಾರ ತೀವ್ರ ಆಕ್ಷೇಪಕ್ಕೆ ಎಡೆಮಾಡಿಕೊಟ್ಟಿತ್ತು. ಆ ನೆಲೆಯಲ್ಲಿ ಸ್ಪೀಕರ್ ಆದೇಶ ಪ್ರಶ್ನಿಸಿ 11 ಮಂದಿ ಬಿಜೆಪಿ ಮತ್ತು ಐವರು ಪಕ್ಷೇತರ ಶಾಸಕರು ಅ.11ರಂದೇ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಬಿಜೆಪಿಯ 11 ಶಾಸಕರ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿದ್ದ ಮುಖ್ಯನ್ಯಾಯಮೂರ್ತಿ ಜೆ.ಎಸ್.ಖೇಹರ್ ಮತ್ತು ನ್ಯಾಯಮೂರ್ತಿ ಎನ್.ಕುಮಾರ್ ಅವರನ್ನೊಳಗೊಂಡ ರಜಾಕಾಲದ ವಿಶೇಷ ವಿಭಾಗೀಯ ಪೀಠ ತೀರ್ಪನ್ನು ಕಾಯ್ದಿರಿಸಿತ್ತು.

ಪಕ್ಷೇತರರ ಅರ್ಜಿ ವಿಚಾರಣೆ ಮುಂದಕ್ಕೆ: ಅನರ್ಹಗೊಂಡ ಐವರು ಪಕ್ಷೇತರ ಶಾಸಕರ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ವಿಭಾಗೀಯ ಪೀಠ ನವೆಂಬರ್ 2ಕ್ಕೆ ಮುಂದೂಡಿದೆ.

ರಾಜ್ಯರಾಜಕಾರಣದಲ್ಲಿನ ಹಾವು ಏಣಿ ಆಟದಲ್ಲಿ ಯಡಿಯೂರಪ್ಪ ಅವರು ಅಕ್ಟೋಬರ್ 11ರಂದು ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚಿಸಿದ್ದರು. ಈ ಸಂದರ್ಭದಲ್ಲಿ ಸ್ಪೀಕರ್ ಬೋಪಯ್ಯ ಅವರು ಕೇವಲ ಆರು ನಿಮಿಷಗಳಲ್ಲಿ ಕಲಾಪ ನಡೆಸಿ ಧ್ವನಿಮತದ ಮೂಲಕ ಮುಖ್ಯಮಂತ್ರಿಗಳು ಬಹುಮತ ಸಾಬೀತುಪಡಿಸಿದ್ದರು ಎಂದು ಘೋಷಿಸಿದ್ದರು. ಇದು ಸಾಕಷ್ಟು ಗೊಂದಲ, ಗಲಾಟೆ, ರಂಪಾಟಗಳಿಗೆ ಕಾರಣವಾಗಿತ್ತು. ತದನಂತರ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ರಾಷ್ಟ್ರಪತಿ ಆಡಳಿತ ಹೇರುವಂತೆ ರಾಷ್ಟ್ರಪತಿಗೆ ಶಿಫಾರಸು ಮಾಡಿದ್ದರು. ಈ ಬಗ್ಗೆ ಆಡಳಿತಾರೂಢ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. ಆ ಬಳಿಕ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಉಲ್ಟಾ ಹೊಡೆದ ರಾಜ್ಯಪಾಲರು ಮತ್ತೆ ಬಹುಮತ ಸಾಬೀತುಪಡಿಸುವಂತೆ ಯಡಿಯೂರಪ್ಪ ಅವರಿಗೆ ಆಹ್ವಾನ ನೀಡಿದ್ದರು.

ಆ ನಿಟ್ಟಿನಲ್ಲಿ ಅ.14ರಂದು ಎರಡನೇ ಬಾರಿ ಯಡಿಯೂರಪ್ಪ ವಿಶ್ವಾಸಮತ ಯಾಚಿಸುವ ಮೂಲಕ ಬಹುಮತ ಸಾಬೀತುಪಡಿಸಿದ್ದರು. ಆದರೆ ಐವರು ಪಕ್ಷೇತರ ಶಾಸಕರು ಅನರ್ಹತೆ ಪ್ರಕರಣದ ಕುರಿತಂತೆ ಆದೇಶ ನೀಡಿದ್ದ ಹೈಕೋರ್ಟ್, ವಿಶ್ವಾಸಮತ ಬಹುಮತ ಸಾಬೀತು ಹೈಕೋರ್ಟ್ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ ಎಂದು ತಿಳಿಸಿತ್ತು. ಹಾಗಾಗಿ ಐವರು ಪಕ್ಷೇತರರು ಮತ್ತು 11 ಮಂದಿ ಶಾಸಕರ ಅನರ್ಹತೆ ಪ್ರಕರಣ ಕುರಿತಂತೆ ಹೈಕೋರ್ಟ್ ನೀಡುವ ತೀರ್ಪು ತುಂಬಾ ಪ್ರಾಮುಖ್ಯತೆ ಪಡೆದಿದೆ.
ಸಂಬಂಧಿತ ಮಾಹಿತಿ ಹುಡುಕಿ