ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » 11 ಶಾಸಕರ ಅನರ್ಹತೆ: ಸ್ಪೀಕರ್ ಆದೇಶಕ್ಕೆ ನ್ಯಾ.ಸಭಾಹಿತ್ ಅಸ್ತು (High court | Sabhahith | JDS | Congress | BJP | Yeddyurappa)
Bookmark and Share Feedback Print
 
NRB
ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಬಿಜೆಪಿ 11 ಶಾಸಕರ ಅನರ್ಹ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪೀಕರ್ ಕೆ.ಜಿ.ಬೋಪಯ್ಯ ಅವರು ನೀಡಿರುವ ಆದೇಶವನ್ನು ಹೈಕೋರ್ಟ್ ಏಕಸದಸ್ಯ ಪೀಠದ ನ್ಯಾಯಮೂರ್ತಿ ವಿ.ಜಿ.ಸಭಾಹಿತ್ ಅವರು ಎತ್ತಿಹಿಡಿಯುವ ಮೂಲಕ ಅನರ್ಹ ಶಾಸಕರಿಗೆ ಮುಖಭಂಗವಾದಂತಾಗಿದೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ

ಸರಕಾರದಿಂದ ಬೆಂಬಲ ವಾಪಸ್ ಪಡೆದುಕೊಂಡಿರುವ ಬಿಜೆಪಿಯ 11 ಮಂದಿ ಭಿನ್ನಮತೀಯರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿ ಸ್ಪೀಕರ್ ಕೆ.ಜಿ.ಬೋಪಯ್ಯ ಅವರು ಅ.10ರಂದು ಆದೇಶ ಹೊರಡಿಸಿದ್ದರು.

ತದನಂತರ ಶಾಸಕ ಸ್ಥಾನದಿಂದ ಅನರ್ಹಗೊಂಡಿರುವ ಬಿಜೆಪಿಯ 11 ಸದಸ್ಯರು ಸ್ಪೀಕರ್ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಮೊದಲು ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ಜೆ.ಎಸ್.ಕೇಹರ್ ಹಾಗೂ ನ್ಯಾಯಮೂರ್ತಿ ಎನ್.ಕುಮಾರ್ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತ್ತು. ಆದರೆ ಸ್ಪೀಕರ್ ಅವರ ನಿರ್ಧಾರದ ಬಗ್ಗೆ ಉಭಯ ನ್ಯಾಯಮೂರ್ತಿಗಳು ವಿಭಿನ್ನ ನಿಲುವು ವ್ಯಕ್ತಪಡಿಸಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ವಿಭಾಗೀಯ ಪೀಠದಲ್ಲಿ ಒಮ್ಮತದ ತೀರ್ಪು ಪ್ರಕಟವಾಗದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಮೂರನೇ ನ್ಯಾಯಮೂರ್ತಿ ಸಭಾಹಿತ್ ಅವರಿಗೆ ವಹಿಸಿಕೊಡಲಾಗಿತ್ತು. ಅವರು ಅ.20, 21ರಂದು ಅರ್ಜಿಯ ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿದ್ದರು.

ಅನರ್ಹಗೊಂಡ ಶಾಸಕರು: ಬಿಜೆಪಿಯ ಬೇಳೂರು ಗೋಪಾಲಕೃಷ್ಣ - ಸಾಗರ ಕ್ಷೇತ್ರ, ಆನಂದ್ ಅಸ್ನೋಟಿಕರ್ - ಕಾರವಾರ, ಸಾರ್ವಭೌಮ ಬಗಲಿ -ಇಂಡಿ, ವೈ.ಸಂಪಂಗಿ - ಕೆಜಿಎಫ್, ಬಾಲಚಂದ್ರ ಜಾರಕಿಹೊಳಿ - ಅರಭಾವಿ, ಎಸ್.ಕೆ. ಬೆಳ್ಳುಬ್ಬಿ - ಬಸವನ ಬಾಗೇವಾಡಿ, ಜಿ.ಎನ್.ನಂಜುಂಡಸ್ವಾಮಿ - ಕೊಳ್ಳೇಗಾಲ, ಎಚ್.ಎಸ್. ಶಂಕರಲಿಂಗೇಗೌಡ - ಚಾಮರಾಜ ಕ್ಷೇತ್ರ, ಶಿವನಗೌಡ ನಾಯಕ್ - ದೇವದುರ್ಗ, ನಾಗರಾಜ-ನೆಲಮಂಗಲ, ಎಚ್.ಭರಮಗೌಡ ರಾಜು ಕಾಗೆ ಕಾಗವಾಡ.

ಅನರ್ಹ ಶಾಸಕರನ್ನು ರಕ್ಷಿಸಲೇ ಬೇಕಾಗಿದೆ-ಎಚ್‌ಡಿಕೆ: 11 ಶಾಸಕರ ಅನರ್ಹ ಪ್ರಕರಣದ ಕುರಿತು ಹೈಕೋರ್ಟ್ ಸ್ಪೀಕರ್ ಆದೇಶವನ್ನು ಎತ್ತಿ ಹಿಡಿದಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಕೋರ್ಟ್ ಆದೇಶಕ್ಕೆ ತಲೆಬಾಗಲೇಬೇಕು. ಆದರೂ ಅನರ್ಹ ಶಾಸಕರನ್ನು ನಾನು ರಕ್ಷಿಸಲೇಬೇಕಾಗಿದೆ. ಅವರ ಶಾಸಕತ್ವ ಉಳಿಯುವವರೆಗೂ ಅವರ ಜತೆಗೆ ಇರುವುದಾಗಿ ಹೇಳಿದ್ದಾರೆ.

ಅನರ್ಹಗೊಂಡ ಶಾಸಕರು ಸುಪ್ರೀಂಕೋರ್ಟ್ ಮೊರೆ ಹೋಗಲಿದ್ದಾರೆ ಎಂದು ಕುಮಾರಸ್ವಾಮಿ ತಿಳಿಸಿದ್ದು, ಭ್ರಷ್ಟ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧದ ಹೋರಾಟಕ್ಕೆ ನನ್ನ ಬೆಂಬಲ ಇದ್ದೇ ಇದೆ. ರಾಜಕಾರಣದಲ್ಲಿ ಹಿನ್ನಡೆ-ಮುನ್ನಡೆ ಶಾಶ್ವತವಲ್ಲ ಎಂದು ಈ ಸಂದರ್ಭದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.

ಸುಪ್ರೀಂಕೋರ್ಟ್ ಮೆಟ್ಟಿಲೇರುತ್ತೇವೆ-ಬೇಳೂರು: ಬಿಜೆಪಿ ಶಾಸಕರ ಅನರ್ಹ ಆದೇಶಕ್ಕೆ ಹೈಕೋರ್ಟ್ ಅಸ್ತು ನೀಡಿದ ಹಿನ್ನೆಲೆಯಲ್ಲಿ, ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗುವುದಾಗಿ ಅನರ್ಹಗೊಂಡಿರುವ ಶಾಸಕ ಬೇಳೂರು ಗೋಪಾಲಕೃಷ್ಣ ತಿಳಿಸಿದ್ದಾರೆ. ಅದೇ ರೀತಿ ಬಾಲಚಂದ್ರ ಜಾರಕಿಹೊಳಿ ಕೂಡ, ಅನರ್ಹಗೊಂಡ ಶಾಸಕರೆಲ್ಲ ಒಗ್ಗಟ್ಟಾಗಿದ್ದು, ನಮ್ಮ ಮುಂದಿನ ಹೋರಾಟ ಸುಪ್ರೀಂಕೋರ್ಟ್‌ನಲ್ಲಿ ಮುಂದುವರಿಸುವುದಾಗಿ ತಿಳಿಸಿದ್ದಾರೆ.

ಇದು ಸತ್ಯಕ್ಕೆ ಸಂದ ಜಯ-ಬಿಜೆಪಿ: ಸ್ಪೀಕರ್ ಕೆ.ಜಿ.ಬೋಪಯ್ಯ ಅವರು 11 ಮಂದಿ ಶಾಸಕರನ್ನು ಅನರ್ಹಗೊಳಿಸಿರುವ ಆದೇಶವನ್ನು ಹೈಕೋರ್ಟ್ ಏಕಸದಸ್ಯ ಪೀಠದ ನ್ಯಾ.ಸಭಾಹಿತ್ ಅವರು ಎತ್ತಿಹಿಡಿದಿರುವುದು ಸತ್ಯಕ್ಕೆ ಸಿಕ್ಕ ಜಯ ಎಂದು ಬಿಜೆಪಿ ಮುಖಂಡ ಧನಂಜಯ್ ಕುಮಾರ್ ತಿಳಿಸಿದ್ದಾರೆ.

ಇದು ನಿಜಕ್ಕೂ ಸತ್ಯಕ್ಕೆ ದೊರೆತ ಜಯವಾಗಿದೆ. ಆದರೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಅಪಪ್ರಚಾರ ಮಾಡುತ್ತಿದ್ದಾರೆ. ಅವರಿಂದಾಗಿ ಪ್ರಜಾಪ್ರಭುತ್ವ, ಸಂವಿಧಾನಕ್ಕೆ ಅಪಚಾರವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಆ ನಿಟ್ಟಿನಲ್ಲಿ ಕುಮಾರಸ್ವಾಮಿ ಅವರು ರಾಜಕೀಯ ಜೀವನದಿಂದ ನಿವೃತ್ತಿಯಾಗುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ.

[ ವೆಬ್‌ದುನಿಯಾದ ಎಲ್ಲ ಕಾಮೆಂಟಿಗರಲ್ಲಿ ಮನವಿ: ಅಶ್ಲೀಲ, ಅಸಭ್ಯ, ಹೊಲಸು ಪದಗಳು ಬೇಡವೇ ಬೇಡ. ಅದರೊಂದಿಗೆ ಕಾಪಿ ಪೇಸ್ಟ್ ಮಾಡುವ ಕೆಟ್ಟ ಚಾಳಿಯೂ ಬೇಡ. ತಮ್ಮ ಹೆಸರು ಬರೆಯುವ ಧೈರ್ಯವಿಲ್ಲದೆ ಬೇರೆಯವರ ಹೆಸರಲ್ಲಿ ಕೊಳಕು ಬರೆಯುವುದೂ ಬೇಡ. ಇಂಥದ್ದು ಕಂಡರೆ, ಓದುಗರು ದಯವಿಟ್ಟು ಕೂಡಲೇ ರಿಪೋರ್ಟ್ ಅಬ್ಯೂಸ್ ದಯವಿಟ್ಟು ಚರ್ಚೆಗೆ ಈ ವೇದಿಕೆಯನ್ನು ಬಳಸಿಕೊಳ್ಳಿ. ]
ಸಂಬಂಧಿತ ಮಾಹಿತಿ ಹುಡುಕಿ