ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಜಂಗೀಕುಸ್ತಿ; 11 ಅನರ್ಹ ಶಾಸಕರ ಸ್ಥಿತಿ ಏನಾಗಿದೆ ಗೊತ್ತಾ? (BJP | Yeddyurappa | High court | By election | Congress)
Bookmark and Share Feedback Print
 
NRB
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಾಯಕತ್ವದಲ್ಲಿ ವಿಶ್ವಾಸವಿಲ್ಲ ಎಂದು ಬಂಡಾಯ ಸಾರಿದ್ದರ ಪರಿಣಾಮ ಸ್ಪೀಕರ್ ಕೆ.ಜಿ.ಬೋಪಯ್ಯ ಅವರು ಬಿಜೆಪಿಯ 11 ಮಂದಿ ಶಾಸಕರನ್ನು ಅನರ್ಹಗೊಳಿಸಿದ ಕ್ರಮವನ್ನು ಹೈಕೋರ್ಟ್ ಎತ್ತಿಹಿಡಿದಿದೆ. ಏತನ್ಮಧ್ಯೆ ಅನರ್ಹ ಶಾಸಕರು ಸುಪ್ರೀಂಕೋರ್ಟ್ ಮೊರೆ ಹೋಗುವುದಾಗಿ ಘೋಷಿಸಿದ್ದಾರೆ. ಆದರೆ ಈಗ 11 ಮಂದಿ ಅನರ್ಹ ಶಾಸಕರ ಸ್ಥಿತಿ ಏನಾಗಲಿದೆ ಗೊತ್ತಾ?

ಅನರ್ಹಗೊಂಡ ಶಾಸಕರು ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಬಹುದು. ಅಷ್ಟೇ ಅಲ್ಲ ಕಾಲಮಿತಿಯೊಳಗೆ ವಿಚಾರಣೆ ನಡೆಸುವಂತೆ ಕೋರ್ಟ್‌ಗೆ ಮನವಿ ಮಾಡಿಕೊಳ್ಳಬಹುದು. ಕೂಡಲೇ ಹೈಕೋರ್ಟ್ ತೀರ್ಪಿಗೆ ತಡೆಯಾಜ್ಞೆ ತರಲು ಪ್ರಯತ್ನಿಸಬಹುದು. ಸುಪ್ರೀಂಕೋರ್ಟ್‌ನಿಂದ ತೀರ್ಪು ಹೊರಬೀಳುವವರೆಗೆ ತಟಸ್ಥ ಧೋರಣೆ ಅನುಸರಿಸಬಹುದು. ಇದು ಸುಪ್ರೀಂ ಕಟಕಟೆಯಲ್ಲಿನ ವಿಚಾರ.

NRB
ಶಾಸಕರ ಸೌಲಭ್ಯಕ್ಕೆ ಕತ್ತರಿ: ಯಡಿಯೂರಪ್ಪ ನಾಯಕತ್ವದಲ್ಲಿ ವಿಶ್ವಾಸವಿಲ್ಲ ಎಂದು ಬಂಡಾಯ ಹೂಡಿದ್ದ 11 ಮಂದಿ ಶಾಸಕರಿಗೆ ಇದೀಗ ತ್ರಿಶಂಕು ಸ್ಥಿತಿ ಅನುಭವಿಸುವಂತಾಗಿದೆ. ಯಾಕೆಂದರೆ ಇವರು ಇನ್ನು ಮುಂದೆ ವಿಧಾನಮಂಡಲದ ಯಾವುದೇ ಸೌಲಭ್ಯಕ್ಕೆ ಅರ್ಹರಲ್ಲ. ಇನ್ನು ಮುಂದೆ ಇವರು ಬಸ್ ಮತ್ತು ರೈಲ್ವೆ ಪಾಸ್ ಸೇರಿದಂತೆ ಎಲ್ಲಾ ರೀತಿಯ ಸೌಲಭ್ಯ ಕಳೆದುಕೊಳ್ಳುತ್ತಾರೆ. ಅದೇ ರೀತಿ ವೇತನ ಪಿಂಚಣಿ, ಸಮಿತಿ ಸಭೆಗಳ ಭತ್ಯೆ, ಸಾರಿಗೆ ಭತ್ಯೆ, ವೈದ್ಯಕೀಯ, ಕೊಠಡಿ ಸೇರಿದಂತೆ ಯಾವುದೇ ಸೌಲಭ್ಯ ದೊರೆಯುವುದಿಲ್ಲ. ಅದಕ್ಕಿಂತ ಮುಖ್ಯವಾಗಿ ಇವರನ್ನು ಮಾಜಿಗಳು ಎಂದೂ ಪರಿಗಣಿಸದಿರುವುದರಿಂದ 'ಮಾಜಿ ಶಾಸಕರಿಗೆ' ದೊರೆಯುವ ಸೌಲಭ್ಯ ಕೂಡ ಕಟ್.

11 ಮಂದಿ ಶಾಸಕರಾಗಿಯೇ ಮುಂದುವರಿದಿದ್ದರೆ ತಿಂಗಳಿಗೆ 44 ಸಾವಿರ ವೇತನ, ಸಮಿತಿ ಸಭೆಗಳಿಗೆ ಭಾಗವಹಿಸಲು ಮತ್ತು ಅಧಿವೇಶನದಲ್ಲಿ ಪಾಲ್ಗೊಳ್ಳಲು ದಿನಕ್ಕೆ 600ರಂತೆ ತಿಂಗಳಿಗೆ 20 ದಿನಗಳ ಭತ್ಯೆ, ಕಡಿಮೆ ದರದಲ್ಲಿ ಶಾಸಕರ ಭವನದಲ್ಲಿ ಕೊಠಡಿ ವ್ಯವಸ್ಥೆ, ಕ್ಷೇತ್ರ ಸಂಚಾರಕ್ಕೆ ಸಾರಿಗೆ ಭತ್ಯೆ ಪಡೆಯಬಹುದಾಗಿತ್ತು. ಆದರೆ ಈಗ ಯಾವ ಸೌಲಭ್ಯವೂ ಲಭಿಸುವುದಿಲ್ಲ.

NRB
ಮತ್ತೆ ಚುನಾವಣೆ ?: 11 ಶಾಸಕರನ್ನು ಅನರ್ಹಗೊಳಿಸಿದ ಸ್ಪೀಕರ್ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿಯುವ ಮೂಲಕ ಅವರು ಪ್ರತಿನಿಧಿಸುತ್ತಿರುವ ಕ್ಷೇತ್ರಗಳು ಖಾಲಿ ಉಳಿದಿದೆ. ಹಾಗಾಗಿ ಮತ್ತೆ ಉಪ ಚುನಾವಣೆ ನಡೆಯಬೇಕಾಗಿರುವುದು ಅನಿವಾರ್ಯವಾಗಿದೆ.

ಸಂವಿಧಾನ 10ನೇ ಪರಿಚ್ಛೇದದ ಅಡಿಯಲ್ಲಿ ಶಾಸಕರನ್ನು ಅನರ್ಹಗೊಳಿಸಿದ ದಿನವೇ ಈ ಬಗ್ಗೆ ಕೇಂದ್ರ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿರುವುದಾಗಿ ವಿಧಾನಸಭೆ ಸ್ಪೀಕರ್ ಕೆ.ಜಿ.ಬೋಪಯ್ಯ ತಿಳಿಸಿದ್ದಾರೆ. ಆದರೆ ಶಾಸಕರನ್ನು ಅನರ್ಹಗೊಳಿಸಿದ ಕುರಿತು ತಮಗೆ ಈವರೆಗೂ ಯಾವುದೇ ಪತ್ರ ಬಂದಿಲ್ಲ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಿ.ಎಸ್.ಸುರಂಜನ ಪ್ರತಿಕ್ರಿಯೆ ನೀಡಿದ್ದಾರೆ.

ಯಾವುದೇ ಶಾಸಕ ರಾಜೀನಾಮೆ ನೀಡಿದ ಬಳಿಕ ಖಾಲಿ ಉಳಿಯುವ ಕ್ಷೇತ್ರಕ್ಕೆ ಆರು ತಿಂಗಳ ಒಳಗಾಗಿ ಚುನಾವಣೆ ನಡೆಸಲೇಬೇಕು ಎನ್ನುತ್ತಾರೆ ಸುಪ್ರೀಂಕೋರ್ಟ್ ಹಿರಿಯ ವಕೀಲ ಎನ್.ಕೆ.ಭಟ್. ಇದೀಗ ಅನರ್ಹಗೊಂಡಿರುವ ಸದಸ್ಯರು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿ, ಚುನಾವಣೆ ಪ್ರಕ್ರಿಯೆಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದರೆ ಚುನಾವಣಾ ಆಯೋಗ ಏನೂ ಮಾಡುವಂತಿಲ್ಲ. ಇಲ್ಲವಾದರೆ ಆರು ತಿಂಗಳೊಳಗೆ ಚುನಾವಣೆ ನಡೆಸಲೇಬೇಕಾಗುತ್ತದೆ.

ಏತನ್ಮಧ್ಯೆ ಕಾಂಗ್ರೆಸ್‌ನ ಶಾಸಕ ಬಂಗಾರಪೇಟೆಯ ನಾರಾಯಣ ಸ್ವಾಮಿ ಹಾಗೂ ಜಗಳೂರು ಕ್ಷೇತ್ರದ ರಾಮಚಂದ್ರ, ಜೆಡಿಎಸ್‌ನ ಅಶ್ವತ್ಥ್ ಈಗಾಗಲೇ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆ ನಿಟ್ಟಿನಲ್ಲಿ ಈ ಮೂರು ಕ್ಷೇತ್ರಗಳಿಗೂ ಉಪ ಚುನಾವಣೆ ನಡೆಯುವುದು ಅನಿವಾರ್ಯ. ಇದರೊಂದಿಗೆ ಐವರು ಪಕ್ಷೇತರ ಶಾಸಕರ ಅನರ್ಹತೆ ಪ್ರಕರಣದ ತೀರ್ಪು ನವೆಂಬರ್ 2ರಂದು ಹೊರಬೀಳಲಿದೆ.

ಅನರ್ಹ ಶಾಸಕರು: ಬಿಜೆಪಿಯ ಬೇಳೂರು ಗೋಪಾಲಕೃಷ್ಣ ಸಾಗರ ಕ್ಷೇತ್ರ, ಆನಂದ್ ಅಸ್ನೋಟಿಕರ್ ಕಾರವಾರ, ಸಾರ್ವಭೌಮ ಬಗಲಿ ಇಂಡಿ, ವೈ.ಸಂಪಂಗಿ ಕೆಜಿಎಫ್, ಬಾಲಚಂದ್ರ ಜಾರಕಿಹೊಳಿ ಅರಭಾವಿ, ಎಸ್.ಕೆ. ಬೆಳ್ಳುಬ್ಬಿ ಬಸವನ ಬಾಗೇವಾಡಿ, ಜಿ.ಎನ್.ನಂಜುಂಡಸ್ವಾಮಿ ಕೊಳ್ಳೇಗಾಲ, ಎಚ್.ಎಸ್. ಶಂಕರಲಿಂಗೇಗೌಡ ಚಾಮರಾಜ ಕ್ಷೇತ್ರ, ಶಿವನಗೌಡ ನಾಯಕ್ ದೇವದುರ್ಗ, ನಾಗರಾಜ-ನೆಲಮಂಗಲ, ಎಚ್.ಭರಮಗೌಡ ಕಾಗೆ ಕಾಗವಾಡ.
ಸಂಬಂಧಿತ ಮಾಹಿತಿ ಹುಡುಕಿ