ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಯಡಿಯೂರಪ್ಪ ಡೋಂಗಿ, ಲಜ್ಜೆಗೆಟ್ಟ ಸಿಎಂ: ಸಿದ್ದರಾಮಯ್ಯ (Siddaramaiah | Yeddyurappa | Congress | KPCC | BJP)
Bookmark and Share Feedback Print
 
ಬಿಜೆಪಿಯಂತಹ ಕೆಟ್ಟ ಸರಕಾರವನ್ನು ನಾನೆಂದೂ ನೋಡಿಲ್ಲ. ಸೋಗಲಾಡಿ, ಡೋಂಗಿ, ಭ್ರಷ್ಟ, ಲಜ್ಜೆಗೆಟ್ಟ ಮುಖ್ಯಮಂತ್ರಿ ಅಂದ್ರೆ ಅದು ಬಿ.ಎಸ್.ಯಡಿಯೂರಪ್ಪ. ಆ ನಿಟ್ಟಿನಲ್ಲಿ ಈ ಕೋಮುವಾದಿ ಭ್ರಷ್ಟ ಸರಕಾರವನ್ನು ಕಿತ್ತು ಒಗೆಯುವವರೆಗೂ ಕಾರ್ಯಕರ್ತರ ಜತೆಗೂಡಿ ಹೋರಾಟ ಮುಂದುವರಿಸುವುದಾಗಿ ವಿಧಾನಸಭೆ ವಿರೋಧ ಪಕ್ಷದ ಮುಖಂಡ ಸಿದ್ದರಾಮಯ್ಯ ಎಂದಿನಂತೆ ವಾಗ್ದಾಳಿ ನಡೆಸಿದರು.

ಬುಧವಾರ ತುಮಕೂರಿನ ಟೌನ್ ಹಾಲ್ ಮೈದಾನದಲ್ಲಿ ನಡೆದ ಕಾಂಗ್ರೆಸ್ ನೂತನ ಸಾರಥಿ ಡಾ.ಪರಮೇಶ್ವರ್ ಅವರ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಕೇಂದ್ರದಲ್ಲಿ ಭ್ರಷ್ಟಚಾರ ಆರೋಪ ಹೊತ್ತಿರುವ ಕಾಂಗ್ರೆಸ್ ಮುಖಂಡರು ರಾಜೀನಾಮೆ ನೀಡಿದ್ದಾರೆ. ಆ ನಿಟ್ಟಿನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ನೈತಿಕತೆ ಇದ್ದರೆ ರಾಜ್ಯ ಸರಕಾರದಲ್ಲಿರುವ ಭ್ರಷ್ಟ ಸಚಿವರು ಕೂಡಲೇ ರಾಜೀನಾಮೆ ನೀಡಲಿ ಎಂದು ತಿರುಗೇಟು ನೀಡಿದರು.

ಬಿಜೆಪಿ ಸರಕಾರಕ್ಕೆ ತತ್ವ ಸಿದ್ದಾಂತವೇ ಇಲ್ಲ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಚುನಾವಣೆಗೆ ಬರುವಂತೆ ಸವಾಲು ಹಾಕಿದರು. ಈ ರಾಜ್ಯದಲ್ಲಿನ ಭ್ರಷ್ಟ ಸರಕಾರವನ್ನು ಕಿತ್ತೊಗೆಯಬೇಕು, ಅಲ್ಲದೇ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪರಮೇಶ್ವರ ವಾಗ್ದಾಳಿ
ತವರು ಜಿಲ್ಲೆಯಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು, ಬಿಜೆಪಿ ಸರಕಾರ ಪತನವಾಗುವ ಮುನ್ಸೂಚನೆಯಾಗಿ ಮುಖ್ಯಮಂತ್ರಿಗಳು ಸೀರೆ ಹಂಚುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿ ಶಾಸಕರನ್ನು ಹರಾಜು ಹಾಕುತ್ತಿದೆ. ಬಳ್ಳಾರಿಯಲ್ಲಿ ಸಾಂಕ್ರಾಮಿಕ ರೋಗ ತಡೆಗೆ ಸರಕಾರ ಇನ್ನೂ ಕ್ರಮ ಕೈಗೊಂಡಿಲ್ಲ, ಅಷ್ಟೇ ಅಲ್ಲ ಮುಖ್ಯಮಂತ್ರಿಗಳು ಇನ್ನೂ ರೋಗ ಪೀಡಿತ ಜಿಲ್ಲೆಗೆ ಭೇಟಿ ನೀಡಿಲ್ಲ. ಇದೊಂದು ಭ್ರಷ್ಟ, ನೀಚ ಸರಕಾರ ಇದಾಗಿದೆ ಎಂದು ಕಿಡಿಕಾರಿದರು. ಆ ನೆಲೆಯಲ್ಲಿ ಈ ಭ್ರಷ್ಟ ಸರಕಾರದ ವಿರುದ್ಧ ಎಲ್ಲರೂ ಒಗ್ಗಟ್ಟಾಗಿ ಹೋರಾಟ ನಡೆಸಬೇಕು ಎಂದು ಕರೆ ನೀಡಿದರು.

ಸಿದ್ದುವನ್ನು ತರಾಟೆಗೆ ತೆಗೆದುಕೊಂಡ ಮೋಟಮ್ಮ!
ಕಡೂರು ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಕೆಂಪರಾಜು ಅವರು ಸೋತಿದ್ದಾರೆ. ಚುನಾವಣೆ ಸಂದರ್ಭದಲ್ಲಿನ ಮಾತುಕತೆ ಪ್ರಕಾರ ಕೆಂಪರಾಜು ಅವರು ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ಇನ್ನೂ ರಾಜೀನಾಮೆ ನೀಡಿಲ್ಲ ಯಾಕೆ ? ಎಂದು ಪರಮೇಶ್ವರ್ ಅವರ ಅಭಿನಂದನಾ ಸಭೆಯಲ್ಲಿ ಬಹಿರಂಗವಾಗಿ ವಿಧಾನಪರಿಷತ್ ವಿಪಕ್ಷ ನಾಯಕಿ ಮೋಟಮ್ಮ ನೇರ ವಾಗ್ದಾಳಿ ನಡೆಸಿದರು.

ಯಾರೂ ಕೂಡ ಪಕ್ಷದ ಶಿಸ್ತನ್ನು ಉಲ್ಲಂಘಿಸಬಾರದು, ಹಾಗಾಗಿ ಕೆಂಪರಾಜು ಅವರು ಇನ್ನೂ ಯಾಕೆ ರಾಜೀನಾಮೆ ಕೊಟ್ಟಿಲ್ಲ ಅಂತ ನಾನು ವೇದಿಕೆಯಲ್ಲಿದ್ದ ಸಿದ್ದರಾಮಯ್ಯನವರನ್ನೇ ಕೇಳುತ್ತೇನೆ ಎಂದರು. ಜಿ.ಪಂ. ಅಧ್ಯಕ್ಷ ಸ್ಥಾನಕ್ಕೆ ಕಾಟಾಚಾರಕ್ಕೆ ರಾಜೀನಾಮೆ ಕೊಟ್ಟು, ಮತ್ತೆ ವಾಪಸ್ ಪಡೆದಿದ್ದಾರೆ. ಇದರಿಂದ ಮತ್ತೊಬ್ಬರು ಅಧ್ಯಕ್ಷರಾಗುವುದು ತಪ್ಪಿದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಒಟ್ಟಾರೆ ನೂತನ ಅಧ್ಯಕ್ಷರ ಅಭಿನಂದನಾ ಸಮಾರಂಭದಲ್ಲಿ ಮೋಟಮ್ಮ ಅವರು ಕೆಂಪರಾಜು ವಿಷಯದಲ್ಲಿ ವಾಗ್ದಾಳಿ ನಡೆಸಿರುವುದು ಕಾಂಗ್ರೆಸ್ ಮುಖಂಡರನ್ನು ಇರಿಸುಮುರಿಸಿಗೆ ಸಿಲುಕಿಸಿದಂತಾಯಿತು. ಸಿದ್ದರಾಮಯ್ಯ ಕೂಡ ಯಾವುದೇ ಪ್ರತಿಕ್ರಿಯೆ ನೀಡದೆ ಮೌನಕ್ಕೆ ಶರಣಾಗಿದ್ದರು.
ಸಂಬಂಧಿತ ಮಾಹಿತಿ ಹುಡುಕಿ