ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಭೂ ಹಗರಣದಲ್ಲಿ ಸಿಎಂ ಕುಟುಂಬ; ಉತ್ತರ ಕೊಡ್ತೇನೆ (BJP | Yeddyurappa | Raghavendra | Land scandal | Congress)
Bookmark and Share Feedback Print
 
NRB
ಭಾಗ್ಯಲಕ್ಷ್ಮಿ ಯೋಜನೆ ಕುರಿತು ವಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸುತ್ತಿರುವ ನಡುವೆಯೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕೃಪಾಕಟಾಕ್ಷದಲ್ಲಿ ಕುಟುಂಬದ ಸದಸ್ಯರ ಭೂ ಹಗರಣ ರಾಜ್ಯ ರಾಜಕೀಯದಲ್ಲಿ ಮತ್ತೊಂದು ವಿವಾದದ ಬಿರುಗಾಳಿ ಎಬ್ಬಿಸಿದೆ.

ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಇಬ್ಬರು ಪುತ್ರರು, ಪುತ್ರಿ, ಅಳಿಯಂದಿರಿಗೆ ಅಕ್ರಮವಾಗಿ ಭೂಮಿಯನ್ನು ಡಿನೋಟಿಫೈ ಮಾಡುವ ಮೂಲಕ ಸ್ವಜನ ಪಕ್ಷಪಾತ ಎಸಗಿದ್ದಾರೆ. ಹಾಗಾಗಿ ನೆರೆಯ ಮಹಾರಾಷ್ಟ್ರದಂತೆ ನಾಯಕತ್ವ ಬದಲಾಯಿಸಿ, ಹೊಸ ನಾಯಕರೊಬ್ಬರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂಬ ಅಭಿಪ್ರಾಯ ಬಿಜೆಪಿ ವಲಯದೊಳಗೆ ಕೇಳಿಬರತೊಡಗಿದೆ.

15 ದಿನದಲ್ಲೇ ಪುತ್ರರಿಗೆ ಭೂಮಿ ಮಂಜೂರು: ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಪುತ್ರರಿಗೆ ಕೇವಲ 15 ದಿನದಲ್ಲೇ ಭೂಮಿ ಮಂಜೂರು ಮಾಡಿರುವ ಪ್ರಕರಣವೊಂದು ಬಯಲಾಗಿದೆ. ರಾಘವೇಂದ್ರ ಜತೆಗೆ ಸಿಎಂ ಅವರ ಮತ್ತೊರ್ವ ಪುತ್ರ ವಿಜಯೇಂದ್ರ ಅವರಿಬ್ಬರೂ ನಿರ್ದೇಶಕರಾಗಿರುವ ಫ್ಲ್ಯುಯೆಡ್ ಪವರ್ ಟೆಕ್ನಾಲಜೀಸ್ ಪ್ರೈವೇಟ್ ಲಿ.ಸಂಸ್ಥೆಗೆ 15 ದಿನದೊಳಗೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ(ಕೆಐಎಡಿಬಿ) ವತಿಯಿಂದ ಭೂಮಿ ಹಂಚಿಕೆ ಮಾಡಿರುವುದು ತಿಳಿದು ಬಂದಿದೆ.

2007ರ ಮೇ 18ರಂದು ಈ ಸಂಸ್ಥೆ ಅಸ್ತಿತ್ವಕ್ಕೆ ಬಂದಿತ್ತು. ನಂತರ ಅದೇ ವರ್ಷದ ಜೂನ್ 2ರಂದು ಜಿಗಣಿ ಕೈಗಾರಿಕಾ ಪ್ರದೇಶದಲ್ಲಿ ವಿವಾದಕ್ಕೆ ಸಿಲುಕಿದ್ದ ಎರಡು ಎಕರೆ ಭೂಮಿಯನ್ನು ಮಂಜೂರು ಮಾಡಲಾಯಿತು. ನಂತರ ಯಡಿಯೂರಪ್ಪ ನೇತೃತ್ವದ ಸರಕಾರ ಅಧಿಕಾರದ ಗದ್ದುಗೆ ಏರಿದ ನಂತರ 2009ರ ಜೂನ್ 9ರಂದು ಡಿನೋಟಿಫೈ ಮಾಡಲಾಯಿತು. ಅಷ್ಟೇ ಅಲ್ಲ ಜೂನ್ 15ರಂದು ಭೂಮಿಯ ಸ್ವಾಧೀನ ಪತ್ರವನ್ನೂ ನೀಡಲಾಗಿತ್ತು.

ಅದೇ ರೀತಿ ನಗರದ ನಾಗಶೆಟ್ಟಿ ಹಳ್ಳಿಯಲ್ಲಿನ ಆರ್ಎಂವಿ ಎಕ್ಸ್‌ಟೆನ್ಶನ್ 2ನೇ ಘಟ್ಟದಲ್ಲಿ 33 ಗುಂಟೆ ಜಮೀನನ್ನು ಡಿನೋಟಿಫೈ ಮಾಡುವಂತೆ ಯಡಿಯೂರಪ್ಪ ಆದೇಶಿಸಿದ್ದರು.

ಅಲ್ಲದೆ ಯಡಿಯೂರಪ್ಪ ಪುತ್ರರಾದ ರಾಘವೇಂದ್ರ ಮತ್ತು ವಿಜಯೇಂದ್ರ ಪಾಲುದಾರರಾಗಿರುವ ಸಹ್ಯಾದ್ರಿ ಹೆಲ್ತ್‌ಕೇರ್ ಸಂಸ್ಥೆಗೆ ಶಿವಮೊಗ್ಗ ತಾಲೂಕಿನ ಅರಕೆರೆ ಗ್ರಾಮದ ಸಮೀಪ 5.34 ಎಕರೆ ಭೂಮಿ ಹಂಚಿಕೆ ಮಾಡಲಾಗಿದೆ. ಯಡಿಯೂರಪ್ಪ ಪುತ್ರಿ ಉಮಾದೇವಿ ಅವರಿಗೆ ಸೇರಿದ ಕ್ಯಾಂಡರ್ ಬ್ಯುಸಿನೆಸ್ ಸಲ್ಯೂಷನ್ಸ್ ಕಂಪನಿಗೆ ಕನಕಪುರ ತಾಲೂಕಿನ ಹಾರೋಹಳ್ಳಿ ಬಳಿ ಎರಡು ಎಕರೆ ಜಮೀನು ಡಿನೋಟಿಫೈ ಮಾಡಲಾಗಿದೆ.

ಭೂ ಹಗರಣದ ಆರೋಪ ಕೇಳಿ ಬಂದ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ನ್ಯಾಯಾಂಗ ತನಿಖೆ ನಡೆಸುವುದಾಗಿ ಘೋಷಿಸಿದ್ದ ಅವರು ಇದೀಗ ಮೌನಕ್ಕೆ ಶರಣಾಗಿದ್ದಾರೆ. ಸ್ವತಃ ಕುಟುಂಬದ ಸದಸ್ಯರು ಹಾಗೂ ಸಂಪುಟದ ಹಲವು ಸಚಿವರಿಗೆ ಸಂಬಂಧಿಸಿದಂತೆ ಸರಣಿ ರೂಪದಲ್ಲಿ ಭೂ ಹಗರಣಗಳನ್ನು ಪ್ರತಿಪಕ್ಷಗಳ ಮುಖಂಡರು ಹೊರಹಾಕುತ್ತಿದ್ದರು ಕೂಡ ಯಡಿಯೂರಪ್ಪ ಪ್ರತಿಕ್ರಿಯೆ ನೀಡಲು ಮೀನಮೇಷ ಎಣಿಸುತ್ತಿದ್ದಾರೆಂದು ಆರೋಪಿಸಿವೆ.

ಸೋಮವಾರ ಉತ್ತರ ಕೊಡ್ತೇನೆ-ಯಡಿಯೂರಪ್ಪ: ನನ್ನ ಕುಟುಂಬದ ಸದಸ್ಯರು ಭೂ ಹಗರಣದಲ್ಲಿ ಶಾಮೀಲಾಗಿದ್ದಾರೆ ಎಂದು ಪ್ರತಿಪಕ್ಷಗಳ ಆರೋಪಕ್ಕೆ ಸೋಮವಾರ ಮಧ್ಯಾಹ್ನ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಉತ್ತರ ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭಾನುವಾರ ತಿಳಿಸಿದ್ದಾರೆ.

ಇಂದು ತಮ್ಮ ನಿವಾಸದಲ್ಲಿ ಪಕ್ಷದ ಹಿರಿಯ ಸಚಿವರೊಂದಿಗೆ ಮೀಸಲಾತಿ ಸುಗ್ರೀವಾಜ್ಞೆ ಕುರಿತು ಸಮಾಲೋಚನೆ ನಡೆಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತ ಭೂ ಹಗರಣ ಕುರಿತ ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯಿಸಿದರು.

ಜಿಲ್ಲಾ ಪಂಚಾಯ್ತಿ ಮತ್ತು ತಾಲೂಕು ಪಂಚಾಯ್ತಿ ಚುನಾವಣೆಯನ್ನು ನಿಗದಿತ ಸಮಯದಲ್ಲೇ ನಡೆಸುವುದಾಗಿ ಅವರು ಈ ಸಂದರ್ಭದಲ್ಲಿ ಹೇಳಿದರು. ಮೀಸಲಾತಿಯಲ್ಲಿ ಅನ್ಯಾಯವಾಗಿದ್ದನ್ನು ತಪ್ಪಿಸಲು, ಹೊಸ ಮೀಸಲಾತಿ ಹೊರಡಿಸಲು ಸುಗ್ರೀವಾಜ್ಞೆ ಪ್ರಸ್ತಾಪವನ್ನು ರಾಜ್ಯಪಾಲರಿಗೆ ಕಳುಹಿಸಲಾಗಿತ್ತು. ಆದರೆ ಅವರು ಎರಡೂ ಬಾರಿಯೂ ಅಂಕಿತ ಹಾಕದೆ ವಾಪಸ್ ಮಾಡಿದ್ದಾರೆ. ಹಾಗಾಗಿ ನಾವು ಹಳೇ ಮೀಸಲಾತಿಯಲ್ಲೇ ಚುನಾವಣೆ ನಡೆಸುವುದು ಖಚಿತ ಎಂದರು.
ಸಂಬಂಧಿತ ಮಾಹಿತಿ ಹುಡುಕಿ