ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಭೂ ಹಗರಣ; ಜೆಡಿಎಸ್ ಬಂಡವಾಳ ಬಯಲು-ಸಿಎಂ ಉತ್ತರ (BJP | Kumaraswamy | Yeddyurappa | JDS | Congress | Bangalore)
Bookmark and Share Feedback Print
 
PTI
ನನ್ನ ಮಕ್ಕಳು ಭೂ ಹಗರಣದಲ್ಲಿ ಭಾಗಿಯಾಗಿದ್ದಾರೆಂದು ಕೆಲವು ದಿನಗಳಿಂದ ಸತ್ಯಕ್ಕೆ ದೂರವಾದ ಮಾಹಿತಿ ನೀಡಿ ಜನರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನದಲ್ಲಿ ಪ್ರತಿಪಕ್ಷಗಳು ನಿರತರಾಗಿರುವುದಾಗಿ ಆರೋಪಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೋಮವಾರ ಗೃಹ ಕಚೇರಿ ಕೃಷ್ಣಾದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಜಾತಕವನ್ನು ಬಿಚ್ಚಿಟ್ಟರು.

ಪುತ್ರ ರಾಘವೇಂದ್ರನಿಗೆ ಸಂಸದರ ಕೋಟಾದಲ್ಲಿ ನಿವೇಶನ ಕೊಟ್ಟಿದ್ದೇನೆ. ಅಷ್ಟೇ ಅಲ್ಲ ಕಾಂಗ್ರೆಸ್, ಜೆಡಿಎಸ್‌ನ ಒಬ್ಬಿಬ್ಬರು ಹೊರತು ಪಡಿಸಿ ಎಲ್ಲರಿಗೂ ಬಿಡಿಎ ಸೈಟ್ ಕೊಟ್ಟಿದ್ದೇನೆ. ನಾನು ನನ್ನ ಮಗ ಎಂಬ ಕುರುಡು ವ್ಯಾಮೋಹದಲ್ಲಿ ಕಾನೂನು ಉಲ್ಲಂಘನೆ ಮಾಡಿ ನಿವೇಶನ ಕೊಟ್ಟಿಲ್ಲ ಎಂದು ಸ್ಪಷ್ಟಪಡಿಸುತ್ತೇನೆ ಎಂದರು.

ಅದೇ ರೀತಿ ಪೀಣ್ಯ ಇಂಡಸ್ಟ್ರೀಯಲ್ ಪ್ರದೇಶದಲ್ಲಿರುವ ಫ್ಲೂಯೆಡ್ ಟೆಕ್ನಾಲಜೀಸ್ ಕಂಪನಿಗೆ ನನ್ನ ಪುತ್ರರಾದ ರಾಘವೇಂದ್ರ, ವಿಜಯೇಂದ್ರ ಸೇರಿದಂತೆ ಎಂಟು ಮಂದಿ ಪಾಲುದಾರರಿದ್ದಾರೆ. ತಮ್ಮ ಕಂಪನಿಗೆ ಸ್ಥಳದ ಅಭಾವ ಇರುವುದರಿಂದ ಎರಡು ಎಕರೆ ಭೂಮಿ ಬೇಕಾಗಿತ್ತು ಎಂದು ಅರ್ಜಿ ಸಲ್ಲಿಸಿದ್ದರು. ಅದನ್ನೂ ನಿಯಮಾನುಸಾರ ಜಿಗಣಿಯಲ್ಲಿ ಎರಡು ಎಕರೆ ಜಮೀನನ್ನು ಮಂಜೂರು ಮಾಡಲಾಗಿತ್ತು.

ಈ ಮೊದಲಿನಿಂದಲೂ ನಾನು ಶೈಕ್ಷಣಿಕ ಮತ್ತು ವೈದ್ಯಕೀಯಕ್ಕೆ ಹೆಚ್ಚಿನ ಒತ್ತು ಕೊಡಬೇಕೆಂಬ ಆಸೆ ಹೊಂದಿದ್ದೆ. ಅದಕ್ಕಾಗಿ ಶಿವಮೊಗ್ಗದಲ್ಲಿ ಸಹ್ಯಾದ್ರಿ ಹೆಲ್ತ್ ಕೇರ್ ಲಿಮಿಟೆಡ್ ಸಂಸ್ಥೆ ಸ್ಥಾಪಿಸಿದ್ದೇವು. ಅದಕ್ಕೆ ಐದು ಎಕರೆ ಜಮೀನನ್ನು ರೈತರ ಮನವೊಲಿಸಿ, ನಿಯಮಾನುಸಾರವಾಗಿಯೇ ಜಮೀನು ವಶಪಡಿಸಿಕೊಳ್ಳಲಾಗಿತ್ತು. ಇದನ್ನು ಕೆಐಎಡಿಬಿ ಮುಖಾಂತರ ಸ್ವಾಧೀನ ಮಾಡಿಕೊಳ್ಳಲಾಗಿತ್ತು. ಇಷ್ಟಾದರೂ ವಿಪಕ್ಷ ಮಿತ್ರರು ನನ್ನ ಮೇಲೆ ಗೂಬೆ ಕೂರಿಸಿ ಅಪಪ್ರಚಾರ ಮಾಡಲಾಗುತ್ತಿದೆ ಎಂದು ದೂರಿದರು.

ನನ್ನ ಮಗಳು ಉಮಾದೇವಿ 12 ವರ್ಷಗಳ ಕಾಲ ಬಿಪಿಎಲ್‌ ಉದ್ಯೋಗಿಯಾಗಿದ್ದರು. ಆಕೆ ತನಗೆ ಭೂಮಿ ಬೇಕೆಂದು ಕೆಐಎಡಿಬಿಗೆ ಅರ್ಜಿ ಸಲ್ಲಿಸಿದ್ದರು. ಉಮಾ ಹಾರೋಹಳ್ಳಿಯಲ್ಲಿ ಕ್ಯಾನ್‌ಡೋರ್ ಕಂಪನಿ (ಬ್ಯುಸಿನೆಸ್ ಸೋಲ್ಯುಷನ್ಸ್ ಬಿಪಿಓ)ಗೆ ಜಾಗ ಬೇಕೆಂದು ಕೇಳಿದ್ದರು. ಅದಕ್ಕೆ 2007ರಲ್ಲಿ ಎರಡು ಎಕರೆ ಜಮೀನು ಪಡೆದುಕೊಂಡಿರುವುದು ಸತ್ಯ. ಇದು ಬೆಂಗಳೂರಿನಿಂದ ಐವತ್ತು ಕಿಲೋ ಮೀ. ದೂರದಲ್ಲಿದೆ. ನನ್ನ ಪ್ರಭಾವ ಬಳಿಸಿಕೊಂಡಿದ್ದರೆ, ಬೆಂಗಳೂರು ನಗರದಲ್ಲಿಯೇ ಜಾಗ ದೊರಕುತ್ತಿತ್ತು ಎಂದು ಸಮಜಾಯಿಷಿ ನೀಡಿ. ಪ್ರತಿಪಕ್ಷಗಳು ಮಾಡಿರುವ ಎಲ್ಲಾ ಆರೋಪ ಸತ್ಯಕ್ಕೆ ದೂರವಾದದ್ದು ಎಂದರು.

PTI
ಹತ್ತು ದಿನದಲ್ಲಿ 145 ಎಕರೆ ಡಿನೋಟಿಫೈ ಮಾಡಿದ್ದು ಎಚ್‌ಡಿಕೆ :
ನಾನು ಮುಖ್ಯಮಂತ್ರಿಯಾದ ಮೇಲೆ ಮಾತ್ರ ಡಿನೋಟಿಫೈ ಮಾಡುತ್ತಿರುವುದಲ್ಲ ಎಂದ ಮುಖ್ಯಮಂತ್ರಿಗಳು, ಈ ಹಿಂದಿನ ಮುಖ್ಯಮಂತ್ರಿಗಳು ತಮ್ಮ ಅಧಿಕಾರಾವಧಿಯಲ್ಲಿ ಡಿನೋಟಿಫೈ ಮಾಡಿದ್ದಾರೆ ಎಂದು ವಿವರ ನೀಡಿದರು. ಎಸ್.ಎಂ.ಕೃಷ್ಣರ (2003) ಅವಧಿಯಲ್ಲಿ 633 ಎಕರೆ 23 ಗುಂಟೆ, ಧರಂಸಿಂಗ್ ಕಾಲದಲ್ಲಿ (2004-2006) 110 ಎಕರೆ, ಕುಮಾರಸ್ವಾಮಿ ಅವಧಿ(2006-07)ಯಲ್ಲಿ 346 ಎಕರೆ 23 ಗುಂಟೆ, ರಾಷ್ಟ್ರಪತಿ ಆಳ್ವಿಕೆ (2007-08) ಅವಧಿಯಲ್ಲೂ 124 ಎಕರೆ, 2008ರಿಂದ ಇಲ್ಲಿಯವರೆಗಿನ ನನ್ನ ಅವಧಿಯಲ್ಲಿ 219 ಎಕರೆ 12 ಗುಂಟೆ ಜಮೀನು ಡಿನೋಟಿಫೈ ಮಾಡಿರುವುದಾಗಿ ಹೇಳಿದರು.

ಅವೆಲ್ಲಕ್ಕಿಂತ ಮುಖ್ಯವಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಅಧಿಕಾರಾವಧಿಯ ಕೊನೆಯ ಹತ್ತು ದಿನಗಳಲ್ಲಿಯೇ 145 ಎಕರೆ ಡಿನೋಟಿಫೈ ಮಾಡಿದ್ದಾರೆ ಎಂದು ದಾಖಲಾತಿ ನೀಡಿದರು.

ನನ್ನ ಮಕ್ಕಳಿಗೆ ಮಾತ್ರವಲ್ಲ, ದೇಶಪಾಂಡೆ ಮಗ, ಸಿದ್ದು ಸಂಬಂಧಿಗೂ ಜಾಗ;
ಮುಖ್ಯಮಂತ್ರಿ ಮಕ್ಕಳಿಗೆ ನಿವೇಶನ ನೀಡಿದ್ದಾರೆ ಎಂದು ಪ್ರತಿಪಕ್ಷದವರು ಬೊಬ್ಬೆ ಹೊಡೆಯುತ್ತಾರಲ್ಲ, ನಾನು ಕೇವಲ ನನ್ನ ಮಗನಿಗೆ ಮಾತ್ರವಲ್ಲ, ಕೆಪಿಸಿಸಿ ಮಾಜಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ಪುತ್ರ ಪ್ರಸನ್ನ.ಆರ್.ದೇಶಪಾಂಡೆ, ಮಹಿಮಾ ಪಟೇಲ್, ಜಿ.ಪರಮೇಶ್ವರ್, ಟಿ.ಬಾಲಕೃಷ್ಣೇ ಗೌಡ, ಪ್ರಭಾಕರ್ ಅವರಿಗೂ ನಿವೇಶನ ಕೊಟ್ಟಿದ್ದೇನೆ. ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಅವರ ಸಂಬಂಧಿ ಮಲ್ಲಿಕಾರ್ಜುನ ಸ್ವಾಮಿ ಎಂಬವರಿಗೆ ಕೆಂಚನಾಪುರ ಗ್ರಾಮದಲ್ಲಿ ಆರು ಎಕರೆ ಜಮೀನು ಡಿನೋಟಿಫೈ ಮಾಡಿಕೊಡಬೇಕೆಂದು ಕೇಳಿದ್ದರು. ಅದನ್ನು 2010ರಲ್ಲಿ ಡಿನೋಟಿಫೈ ಮಾಡಿಕೊಟ್ಟಿದ್ದೇನೆ ಎಂದು ವಿವರಿಸಿದರು.

ಸಹೋದರನಿಗೆ ಎಚ್‌ಡಿಕೆಯಿಂದ 6 ಎಕರೆ ಡಿನೋಟಿಫೈ:
ರಾಚೇನಹಳ್ಳಿ ಗ್ರಾಮದಲ್ಲಿಯೂ ಜೆಡಿಎಸ್ ಶಾಸಕ ತಿಮ್ಮೇರಾಯ ಕೊಟ್ಟ ಮನವಿ ಮೇರೆಗೆ ಐದು ಎಕರೆ ಭೂಮಿಯನ್ನು ಕುಮಾರಸ್ವಾಮಿ ಡಿನೋಟಿಫೈ ಮಾಡಿದ್ದಾರೆ. ಅಷ್ಟೇ ಅಲ್ಲ 2007ರಲ್ಲಿ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಸಹೋದರ ಬಾಲಕೃಷ್ಣ ಗೌಡರಿಗೆ ಆರು ಎಕರೆ ಜಮೀನು ಮಂಜೂರು ಮಾಡಿದ್ದರು. ಫೆರಿಫೆರಲ್ ರಿಂಗ್ ರಸ್ತೆಯಲ್ಲಿ 20 ಎಕರೆ, ಚಿಕ್ಕಗುಬ್ಬಿಯಲ್ಲಿ 40 ಎಕರೆ ಜಮೀನನ್ನು ಗೌಡರು ಹೊಂದಿದ್ದಾರೆ. ಅವೆಲ್ಲಕ್ಕಿಂತ ಮುಖ್ಯವಾಗಿ ಕುಮಾರಸ್ವಾಮಿ ತಮ್ಮ ಅಧಿಕಾರಾವಧಿಯಲ್ಲಿ ಹಲವರ ಆಸ್ತಿಯನ್ನು ಉಳಿಸಲು ರಿಂಗ್ ರಸ್ತೆಯ ನಕ್ಷೆಯನ್ನೇ ಬದಲಿಸಿರುವುದಾಗಿ ಆರೋಪಿಸಿದರು.

ಪತ್ರಕರ್ತರ ವಿರುದ್ಧ ಗರಂ ಆದ ಸಿಎಂ
ಭೂ ಹಗರಣ ಕುರಿತಂತೆ ಪತ್ರಿಕಾಗೋಷ್ಠಿ ಮುಗಿಯುತ್ತಿರುವಂತೆಯೇ ಮಾಧ್ಯಮ ಪ್ರತಿನಿಧಿಗಳು ಮುಖ್ಯಮಂತ್ರಿಗಳಿಗೆ, ಪುತ್ರ ರಾಘವೇಂದ್ರ ಅವರು ಸುಳ್ಳು ಮಾಹಿತಿ ನೀಡಿ ನಿವೇಶನ ಪಡೆದುಕೊಂಡಿದ್ದಾರಲ್ಲ ಎಂದು ಪ್ರಶ್ನಿಸಿದಾಗ, ನೋಡ್ರಿ ನಾನು ಸಿಎಂ ಹೇಳುತ್ತಿದ್ದೇನೆ. ಆ ರೀತಿ ಸುಳ್ಳು ಮಾಹಿತಿ ಕೊಟ್ಟು ನಿವೇಶನ ಪಡೆದುಕೊಂಡಿಲ್ಲ ಎಂದು ಸ್ಪಷ್ಟನೆ ನೀಡಿದರು. ಆದರೆ ಪಟ್ಟು ಬಿಡದ ಮಾಧ್ಯಮದವರು ಮತ್ತೆ, ಮತ್ತೆ ಅದೇ ಪ್ರಶ್ನೆಯನ್ನು ಕೇಳಿದಾಗ ಮುಖ್ಯಮಂತ್ರಿಗಳು ತಾಳ್ಮೆ ಕಳೆದುಕೊಂಡ ಘಟನೆ ಕೂಡ ನಡೆಯಿತು. ಅಲ್ಲದೇ, ಹಗರಣದ ಕುರಿತು ಕೇಳಿದ ಪ್ರಶ್ನೆಗಳಿಗೆ ಸಮಂಜಸ ಉತ್ತರ ನೀಡದೆ ಜಾರಿಕೊಂಡರು.
ಸಂಬಂಧಿತ ಮಾಹಿತಿ ಹುಡುಕಿ