ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಭೂ ಹಗರಣ ಸರಮಾಲೆ; ಈಗ ಕೆ.ಎಸ್.ಈಶ್ವರಪ್ಪ ಸರದಿ (Ishwarappa | BJP | Yeddyurappa | Land mafia | Nelamangala | JDS)
Bookmark and Share Feedback Print
 
NRB
ಆಡಳಿತಾರೂಢ ಬಿಜೆಪಿ ಸರಕಾರದಲ್ಲಿ ಒಂದೊಂದೇ ಹಗರಣ ಬಯಲಾಗುತ್ತಿದ್ದು, ಇದೀಗ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಕುಟುಂಬ ಕೂಡ ಭೂ ಹಗರಣದಲ್ಲಿ ಶಾಮೀಲಾಗಿರುವ ಅಂಶ ಬೆಳಕಿಗೆ ಬಂದಿದೆ.

ಬೆಂಗಳೂರಿನ ಇಂಡಸ್ಟ್ರಿಯಲ್ ಕಾಂಪ್ಲೆಕ್ಸ್‌ನಲ್ಲಿರುವ ಎರಡು ಕೈಗಾರಿಕಾ ಕಟ್ಟಡಗಳನ್ನು ಈಶ್ವರಪ್ಪ ಪುತ್ರ ಕೆ.ಇ.ಕಾಂತೇಶ್‌ ಅವರಿಗೆ ಮಾರಾಟ ಮಾಡಲಾಗಿದೆ. ಇದು 7,682 ಚದರ ಅಡಿ ವಿಸ್ತೀರ್ಣ ಹೊಂದಿದೆ. ಈ ಬಗ್ಗೆ ದಾಖಲೆ ಲಭ್ಯವಾಗಿರುವುದಾಗಿ ಟಿವಿ9 ವರದಿ ವಿವರಿಸಿದೆ.

ಅದೇ ರೀತಿ ಬೆಂಗಳೂರು ಗ್ರಾಮಾಂತರ ನೆಲಮಂಗಲದ ಡಾಬಸ್‌ಪೇಟೆಯಲ್ಲಿ ಭಾರತ್ ಇಂಡಸ್ಟ್ರೀಸ್‌ಗೆ ಎರಡು ಎಕರೆ ಜಮೀನು ಕೆಐಎಡಿಬಿಯಿಂದ ನೀಡಲಾಗಿದೆ. 2009 ಜನವರಿ 6ರಂದು ಭಾರತ್ ಇಂಡಸ್ಟ್ರೀಸ್ ಕಂಪನಿ ಅಸ್ತಿತ್ವಕ್ಕೆ ಬಂದಿತ್ತು. ಜನವರಿ 12ರಂದು ತಮ್ಮ ಸಂಸ್ಥೆಗೆ ಭೂಮಿ ನೀಡಬೇಕೆಂದು ಕೋರಿ ಕೆಐಎಡಿಬಿಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ಸಲ್ಲಿಸಿದ 24 ದಿನಗಳಲ್ಲೇ ಭೂಮಿ ಮಂಜೂರಾಗಿತ್ತು. ಈ ಸಂಸ್ಥೆಗೆ ಕೆ.ಎಸ್.ಈಶ್ವರಪ್ಪ, ಪತ್ನಿ ಜಯಲಕ್ಷ್ಮಿ, ಪುತ್ರ ಕಾಂತೇಶ್, ಸೊಸೆ ಆರ್.ಶಾಲಿನಿ ಪಾಲುದಾರರಾಗಿದ್ದಾರೆ.

ಬಳ್ಳಾರಿಯ ಕುಡುತಿನಿಯಲ್ಲಿ ಕೆ.ಎಸ್.ಈಶ್ವರಪ್ಪ ಅವರ ಕುಟುಂಬಕ್ಕೆ ಕೈಗಾರಿಕೆಗಾಗಿ 11.20 ಎಕರೆ ಭೂಮಿಯನ್ನು ಮಂಜೂರು ಮಾಡಲಾಗಿದೆ. ಈಶ್ವರಪ್ಪ ಅವರ ಅಳಿಯ ಜಿ.ಎಚ್.ನಿರ್ಮಲ್ ಕುಮಾರ್ ಪಾಲುದಾರರಾಗಿರುವ ವಿಷ್ಣುಪ್ರಿಯ ಎಂಟರ್‌ಪ್ರೈಸಸ್ ಹೆಸರಿಗೆ ಭೂಮಿ ನೀಡಲಾಗಿದೆ.

ಆಡಳಿತಾರೂಢ ಬಿಜೆಪಿ ಸರಕಾರದಲ್ಲಿ ಮೊದಲು ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಪುತ್ರ ಕಟ್ಟಾ ಜಗದೀಶ್ ವಿರುದ್ಧ ಭೂ ಹಗರಣದ ಆರೋಪ, ನಂತರ ಗೃಹ ಸಚಿವ ಆರ್.ಅಶೋಕ್, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕುಟುಂಬದ ಸದಸ್ಯರು, ಇದೀಗ ಈಶ್ವರಪ್ಪ ಕುಟುಂಬದ ಭೂ ಹಗರಣ ಬಯಲಾಗತೊಡಗಿದೆ. ಹಾಗಾಗಿ ಈ ಎಲ್ಲಾ ಹಗರಣಗಳ ಬಗ್ಗೆ ಲೋಕಾಯುಕ್ತ ತನಿಖೆ ನಡೆಸುವಂತೆ ಕಾಂಗ್ರೆಸ್ ಪಕ್ಷ ಆಗ್ರಹಿಸಿದೆ.

ಪ್ರತಿಕ್ರಿಯೆಗೆ ಈಶ್ವರಪ್ಪ ನಕಾರ
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರರು ಭೂ ಹಗರಣದಲ್ಲಿ ಶಾಮೀಲಾಗಿರುವುದು ಸಾಬೀತಾದ್ರೆ ಅವರನ್ನು ಗಲ್ಲಿಗೇರಿಸಿ ಎಂದು ಟಿವಿ9 ಚಕ್ರವ್ಯೂಹ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ತಿಳಿಸಿದ್ದರು. ಆದರೆ ಭೂ ಹಗರಣದಲ್ಲಿ ಸ್ವತಃ ನಿಮ್ಮ ಕುಟುಂಬದವರೇ ಭಾಗಿಯಾಗಿದ್ದಾರಲ್ಲ ಈ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ಎಂಬ ಬಗ್ಗೆ ಅವರು ಯಾವುದೇ ಸ್ಪಷ್ಟನೆ ನೀಡದೆ ಜಾರಿಕೊಂಡರಲ್ಲದೆ, ತನಗೆ ಈ ಬಗ್ಗೆ ಏನೂ ಗೊತ್ತಿಲ್ಲ ಎಂದು ಹೇಳಿದ್ದಾರೆ.

ಕಾನೂನು ಬಾಹಿರವಾಗಿ ಭೂಮಿ ಪಡೆದಿಲ್ಲ-ಕೆ.ಇ.ಕಾಂತೇಶ್
ಬೆಂಗಳೂರಿನ ನೆಲಮಂಗಲ ಸಮೀಪ ಜಮೀನು ಇರುವುದು ಸತ್ಯ. ಆದರೆ ಅದನ್ನು ಕಾನೂನು ಬಾಹಿರವಾಗಿ ಪಡೆದುಕೊಂಡಿಲ್ಲ. ಸಾಮಾನ್ಯ ಜನರಿಗೂ ಜಮೀನು ಮಂಜೂರಾಗಿದೆ. ವಿಷ್ಣುಪ್ರಿಯ ಎಂಟರ್‌ಪ್ರೈಸಸ್ ನನ್ನ ಬಾವ ನಿರ್ಮಲ್ ಕುಮಾರ್ ಅವರಿಗೆ ಸೇರಿದೆ. ನನಗೂ ನನ್ನ ಬಾವನ ವ್ಯವಹಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಈಶ್ವರಪ್ಪ ಪುತ್ರ ಕೆ.ಇ.ಕಾಂತೇಶ್ ಭೂ ಹಗರಣದ ಆರೋಪದ ಕುರಿತು ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.

ಪೀಣ್ಯ ಕೈಗಾರಿಕಾ ಕಾಂಪ್ಲೆಕ್ಸ್‌ನಲ್ಲಿಯೂ ಕಾನೂನು ಬಾಹಿರವಾಗಿ ಯಾವುದೇ ಕಟ್ಟಡ ಪಡೆದಿಲ್ಲ. ಒಂದು ವೇಳೆ ಕಾನೂನು ಬಾಹಿರವಾಗಿದ್ದರೆ ಕಾನೂನು ಕ್ರಮ ಕೈಗೊಳ್ಳಲಿ ಎಂದು ತಿಳಿಸಿದ್ದಾರೆ.

ಬಿಜೆಪಿ ಹಗರಣಗಳ ಪುಸ್ತಕ ಪ್ರಕಟಿಸುವೆ-ಎಚ್‌ಡಿಕೆ
ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬಂದ ದಿನದಿಂದ ಭ್ರಷ್ಟಾಚಾರ ಮತ್ತು ಹಗರಣಗಳಲ್ಲಿಯೇ ಮುಳುಗಿರುವುದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಡಿಮೆ ಬೆಲೆಯಲ್ಲಿ ರೈತರ ಭೂಮಿ ಪಡೆದು ಗುಳುಂ ಮಾಡಿದ ಕೀರ್ತಿ ಬಿಜೆಪಿಗೆ ಸೇರಬೇಕು ಎಂದು ಲೇವಡಿ ಮಾಡಿದರು. ಅದೇ ರೀತಿ ಬಿಜೆಪಿ ಸರಕಾರದ ಎಲ್ಲಾ ಹಗರಣಗಳ ಪುಸ್ತಕವನ್ನು ಪ್ರಕಟಿಸುವುದಾಗಿಯೂ ಅವರು ಈ ಸಂದರ್ಭದಲ್ಲಿ ಘೋಷಿಸಿದರು.
ಸಂಬಂಧಿತ ಮಾಹಿತಿ ಹುಡುಕಿ