ರಾಜ್ಯದಲ್ಲಿ 2011ಕ್ಕೆ ಮಧ್ಯಂತರ ಚುನಾವಣೆ ನಡೆಯಲಿದ್ದು, ಇದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಭವಿಷ್ಯ ನುಡಿದಿದ್ದಾರೆ.
ಜಾತ್ಯತೀತ ಜನತಾದಳದ ರಾಜ್ಯ ಮಂಡಳಿಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ನಂತರ ಪಕ್ಷದ ಮುಖಂಡರು, ನಾಯಕರು ಮತ್ತು ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಹಿರಿಯ ಶಾಸಕ ಶ್ರೀನಿವಾಸ್ ಪ್ರಸಾದ್, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕುರಿತ ಹೇಳಿಕೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಕಾಂಗ್ರೆಸ್ ಪಕ್ಷವನ್ನು ನಾವೇನು ಹಾಳು ಮಾಡುತ್ತಿಲ್ಲ ಅಥವಾ ದುರ್ಬಲಗೊಳಿಸುತ್ತಿಲ್ಲ, ಬದಲಿಗೆ ಆ ಪಕ್ಷದವರೇ ದುರ್ಬಲಗೊಳಿಸಿ ಪಕ್ಷವನ್ನು ಹಾಳು ಮಾಡುತ್ತಿದ್ದಾರೆ ಎಂದು ತಿಳಿಸಿದರು.
ರಾಜ್ಯದಲ್ಲಿರುವ ಬಿಜೆಪಿ ಸರಕಾರ ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತದಿಂದ ಕೂಡಿದ್ದು ಈ ಸರಕಾರವನ್ನು ಕಿತ್ತೊಗೆಯುವುದೇ ನಮ್ಮ ಧ್ಯೇಯ ಎಂದರು. ಪಕ್ಷವನ್ನು ರಾಜ್ಯಾದ್ಯಂತ ತಳಮಟ್ಟದಿಂದ ಸಂಘಟಿಸಿ ಅಧಿಕಾರಕ್ಕೆ ತರಬೇಕೆಂದು ಕುಮಾರಸ್ವಾಮಿ ಕಾರ್ಯಕರ್ತರಿಗೆ ಮತ್ತು ಮುಖಂಡರಿಗೆ ಕರೆ ನೀಡಿದರು.
ರಾಜ್ಯದಲ್ಲಿ ಬಿಜೆಪಿಗೆ ಪ್ರತಿಪಕ್ಷವಾಗಿ ಕೆಲಸ ಮಾಡುತ್ತಿರುವುದು ಜೆಡಿಎಸ್, ಕಾಂಗ್ರೆಸ್ ಹೋರಾಟ ಗೌಣವಾಗಿದ್ದು, ಅದು ಎಂದೂ ಪ್ರತಿಪಕ್ಷದಂತೆ ಹೋರಾಟ ನಡೆಸಿಲ್ಲ ಎಂದು ದೂರಿದರು. ಆಪರೇಷನ್ ಕಮಲದ ಬಳಿಕ ಎಲ್ಲಾ ಉಪ ಚುನಾವಣೆಗಳಲ್ಲಿ ಜೆಡಿಎಸ್ ಪ್ರಬಲವಾಗಿ ಕೆಲ ಸ್ಥಾನಗಳನ್ನು ಪಡೆದಿದೆ. ಆದರೆ ಕಾಂಗ್ರೆಸ್ ಸಾಧನೆ ಮಾತ್ರ ಶೂನ್ಯ ಎಂದರು.