ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಸಿಎಂ ಪುತ್ರರ ಖಾತೆಗೆ ಕೋಟ್ಯಂತರ ರೂ.ಹಣ ಎಲ್ಲಿಂದ ಬಂತು? (BJP | Yeddyurappa | Congress | JDS | Kumaraswamy | Deve gowda)
Bookmark and Share Feedback Print
 
PR
ಭೂಹಗರಣದಲ್ಲಿ ಸಿಲುಕಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕುಟುಂಬ ಜಮೀನು ವಾಪಸ್ ನೀಡಿರುವ ಬೆನ್ನಿಗೆ ಇದೀಗ ಪುತ್ರರ ಬ್ಯಾಂಕ್ ಖಾತೆಗಳಿಗೆ ಬಳ್ಳಾರಿಯ ತೋರಣಗಲ್‌ನ ಸೌತ್ ವೆಸ್ಟ್ ಗಣಿ ಕಂಪನಿಯಿಂದ ಕೋಟ್ಯಂತರ ರೂಪಾಯಿ ಹಣ ಸಂದಾಯವಾಗಿರುವ ಅಂಶವೊಂದು ಬೆಳಕಿಗೆ ಬಂದಿದೆ.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಯಡಿಯೂರಪ್ಪ ಪುತ್ರ, ಸಂಸದ ರಾಘವೇಂದ್ರ ಅವರ ಶಿಕಾರಿಪುರದಲ್ಲಿ ಇರುವ ಮೈಸೂರು ಬ್ಯಾಂಕ್ ಅಕೌಂಟ್ ಖಾತೆಗೆ ಆ.11ರಂದು ಐದು ಕೋಟಿ ರೂಪಾಯಿ ಜಮೆಯಾಗಿದೆ. ನಂತರ ಆ.25, 31ರಂದು ತಲಾ ಎರಡೂವರೆ ಕೋಟಿ ರೂ.ಸೇರಿರುವುದಾಗಿ ವಿಜಯಕರ್ನಾಟಕ ದೈನಿಕ ವರದಿ ಮಾಡಿದೆ.

ಅದೇ ರೀತಿ ಮತ್ತೊಬ್ಬ ಪುತ್ರ ವಿಜಯೇಂದ್ರ ಬ್ಯಾಂಕ್ ಖಾತೆಗೂ ಒಮ್ಮೆ ಎರಡೂವರೆ ಕೋಟಿ ರೂ. ಹಾಗೂ ಮತ್ತೆ ಎರಡು ಬಾರಿ ತಲಾ 1.25 ಕೋಟಿ ರೂ. ಜಮೆಯಾಗಿದೆ. ಇನ್ನು ಅಳಿಯ ಸೋಹನ್ ಕುಮಾರ್ ಬೆಂಗಳೂರಿನ ವಿಜಯನಗರ ಎರಡನೇ ಹಂತದಲ್ಲಿರುವ ಮೈಸೂರು ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದಾರೆ.

ಅವರ ಖಾತೆಗೂ ಆ.11ರಂದು 2.50 ಕೋಟಿ ರೂ., 25 ಹಾಗೂ 31ರಂದು ತಲಾ 1.25 ಕೋಟಿ ರೂ. ಜಮೆಯಾಗಿದೆ. ಈ ಹಣ ಬಂದಿರುವುದು ಗಣಿ ಕಂಪನಿಯಿಂದ. ಇದರಿಂದಾಗಿ ಯಡಿಯೂರಪ್ಪ ಮತ್ತು ಪುತ್ರರು ಗಣಿಧಣಿಗಳ ಜತೆ ಶಾಮೀಲಾಗಿ ಕೋಟಿ, ಕೋಟಿ ಹಣ ಬಾಚಿಕೊಳ್ಳುತ್ತಿದ್ದಾರೆ ಎಂದು ವಿಪಕ್ಷ ಮುಖಂಡರು ಆರೋಪಿಸಿದ್ದಾರೆ.

ನನಗೂ, ಮಕ್ಕಳ ವ್ಯವಹಾರಕ್ಕೂ ಸಂಬಂಧವಿಲ್ಲ-ಸಿಎಂ
ಬಳ್ಳಾರಿಯ ತೋರಣಗಲ್ ಗಣಿ ಕಂಪನಿಯಿಂದ ಮಕ್ಕಳ ಖಾತೆಗೆ ಕೋಟಿ, ಕೋಟಿ ಹಣ ಜಮೆಯಾಗಿರುವ ಪ್ರಶ್ನೆಗೆ ನವದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ನನ್ನ ಇಬ್ಬರು ಮಕ್ಕಳು ಮತ್ತು ಅಳಿಯ ತಮ್ಮ ಜಾಗವನ್ನು ಸೌತ್ ವೆಸ್ಟ್ ಗಣಿ ಕಂಪನಿಗೆ ಮಾರಾಟ ಮಾಡಿದ್ದಾರೆ. ಆ ಹಣವನ್ನು ಕಂಪನಿ ಖಾತೆಗೆ ಜಮೆ ಮಾಡಿದೆ ಎಂದು ಸಮಜಾಯಿಷಿ ನೀಡಿದ್ದಾರೆ.

ಮಗ, ಅಳಿಯ ಕಂಪನಿ ಜತೆ ಮಾರಾಟದ ಒಪ್ಪಂದ ಮಾಡಿಕೊಂಡು ಹಣ ಪಡೆದಿದ್ದಾರೆ. ಆದರೆ ನನ್ನ ಮಕ್ಕಳ ವ್ಯವಹಾರಕ್ಕೂ ನನಗೂ ಸಂಬಂಧವಿಲ್ಲ. ಅಷ್ಟೇ ಅಲ್ಲ ಮುಖ್ಯಮಂತ್ರಿ ಮಕ್ಕಳು ಬೇರೆ, ಬೇರೆ ವ್ಯವಹಾರ ಮಾಡಬಾರದು ಅಂತ ಎಲ್ಲಿಯೂ ಹೇಳಿಲ್ಲ. ಅದಕ್ಕಾಗಿಯೇ ನಾನು ದೆಹಲಿಗೆ ಆಗಮಿಸಿದ್ದು, ಎಲ್ಲ ಆರೋಪಗಳ ಬಗ್ಗೆ ಪಕ್ಷದ ವರಿಷ್ಠರಿಗೆ ಮಾಹಿತಿ ನೀಡುತ್ತೇನೆ ಎಂದರು.

ಅಪ್ಪ-ಮಕ್ಕಳ ಬಣ್ಣ ಬಯಲು ಮಾಡ್ತೇನೆ
ರಾಜ್ಯರಾಜಕಾರಣದಲ್ಲಿ ಮಾಜಿ ಪ್ರಧಾನಿ ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅನಾವಶ್ಯಕವಾಗಿ ಟೀಕೆ ಮಾಡುತ್ತಿದ್ದಾರೆ. ದೇವೇಗೌಡನಿಗಾದರೂ ಬುದ್ದಿಬೇಡವೇ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದ ಯಡಿಯೂರಪ್ಪ, ಈ ಅಪ್ಪ-ಮಕ್ಕಳ ಬಣ್ಣ ಬಯಲು ಮಾಡುತ್ತೇನೆ.

ಇನ್ನೂ ಎರಡು ವರ್ಷಗಳ ಕಾಲ ಯಡಿಯೂರಪ್ಪ ಅಧಿಕಾರದಲ್ಲಿ ಇದ್ದರೆ, ತಾವು ಇನ್ನು ಇಪ್ಪತ್ತು ವರ್ಷಗಳ ಕಾಲ ವಿಪಕ್ಷದಲ್ಲೇ ಇರಬೇಕಲ್ಲ ಎಂಬ ಭಯದಿಂದ ಆರೋಪ ಹೊರಿಸುತ್ತಿದ್ದಾರೆ. ಆದರೆ ದೇವೇಗೌಡ, ಕುಮಾರಸ್ವಾಮಿ ಹಗರಣ ಜನರ ಮುಂದೆ ಇಡುತ್ತೇನೆ. ರಾಜ್ಯದಲ್ಲಿ ಜೆಡಿಎಸ್ ತಲೆಎತ್ತದಂತೆ ಮಾಡುವುದಾಗಿ ಈ ಸಂದರ್ಭದಲ್ಲಿ ಶಪಥ ಮಾಡಿದರು.

ಕಾಂಗ್ರೆಸ್ ಪಕ್ಷದ ಜತೆ ಸೇರಿಕೊಂಡು ಆಡಳಿತಾರೂಢ ಬಿಜೆಪಿ ಸರಕಾರವನ್ನು ಉರುಳಿಸುವ ಸಂಚು ನಡೆಸಿರುವ ಅಪ್ಪ-ಮಕ್ಕಳು ಈಗ ಹಗರಣಗಳನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ. ಅದಕ್ಕೆಲ್ಲ ಬಗ್ಗುವ ಪ್ರಶ್ನೆಯೇ ಇಲ್ಲ, ಇನ್ನು ಎರಡೂವರೆ ವರ್ಷಗಳ ಕಾಲ ನಾನೇ ಮುಖ್ಯಮಂತ್ರಿ ಎಂದು ಪುನರುಚ್ಚರಿಸಿದರು.
ಸಂಬಂಧಿತ ಮಾಹಿತಿ ಹುಡುಕಿ