ಭೂ ಹಗರಣಗಳ ಸುಳಿಗೆ ಸಿಲುಕಿ ಕೊನೆಗೂ ಪಕ್ಷದ ಹೈಕಮಾಂಡ್‌ನಿಂದ ಜೀವದಾನ ಪಡೆದು ಬಂದಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಇದೀಗ ಮತ್ತೆ ರೆಡ್ಡಿ ಸಹೋದರರು ತಿರುಗಿ ಬಿದ್ದಿದ್ದಾರೆ. ಅಲ್ಲದೇ ರೆಡ್ಡಿ ಬ್ರದರ್ಸ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಲು ತೀರ್ಮಾನಿಸಿದ್ದಾರೆ ಎಂಬ ವದಂತಿ ದಟ್ಟವಾಗಿ ಹಬ್ಬಿದೆ.
ಸಚಿವರಾದ ಜನಾರ್ದನ ರೆಡ್ಡಿ, ಕರುಣಾಕರ ರೆಡ್ಡಿ ಹಾಗೂ ಶ್ರೀರಾಮುಲು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಶುಕ್ರವಾರ ರಾತ್ರಿ ತಮ್ಮ ಬೆಂಬಲಿಗ ಶಾಸಕರ ಜತೆ ರಹಸ್ಯ ಸಭೆ ನಡೆಸಿದ ರೆಡ್ಡಿ ಪಡೆಯ ಪ್ರಮುಖರು ಯಡಿಯೂರಪ್ಪ ಅವರ ಸಚಿವ ಸಂಪುಟದಲ್ಲಿ ಮಂತ್ರಿಗಳಾಗಿ ಮುಂದುವರಿಯುವುದು ಸರಿಯಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದಾರೆ ಎಂದು ಮೂಲವೊಂದು ತಿಳಿಸಿದೆ.
ಆದರೆ ಈ ವಿಷಯಕ್ಕೆ ಸಂಬಂಧಿಸಿದಂತೆ ಹೈಕಮಾಂಡ್ ವರಿಷ್ಠರನ್ನು ಭೇಟಿ ಮಾಡಿ ಚರ್ಚಿಸಲಿರುವ ಈ ಮೂವರು ಸಚಿವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಲಿದ್ದಾರೆ ಎಂದು ಮೂಲಗಳು ಹೇಳಿವೆ. ಯಡಿಯೂರಪ್ಪ ಅವರ ಸ್ವಯಂಕೃತಾಪರಾಧದಿಂದ ಸರಕಾರ ಪದೇ ಪದೇ ಗಂಡಾಂತರಕ್ಕೆ ಸಿಲುಕಿದಾಗಲೆಲ್ಲ ಅವರನ್ನು ಬಚಾವು ಮಾಡಲು ನಾವು ಶ್ರಮಿಸಿದ್ದೇವೆ.
ಆದರೆ ಸಂಕಷ್ಟ ಕಾಲ ಬಂದಾಗ ತಮ್ಮ ನೆರವು ಪಡೆಯುವ ಮುಖ್ಯಮಂತ್ರಿ ಯಡಿಯೂರಪ್ಪ ತದನಂತರ ಅದನ್ನು ಮರೆತೇ ಬಿಡುತ್ತಾರೆ. ಸಾಲದೆಂಬಂತೆ ನಮ್ಮನ್ನೇ ತುಳಿಯುವ ಪ್ರಯತ್ನಕ್ಕೆ ಇಳಿಯುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿಗಳು ಪ್ರತಿಯೊಂದು ವಿಷಯದಲ್ಲೂ ನಮಗೆ ಕಿರಿ, ಕಿರಿ ಮಾಡುತ್ತಿದ್ದಾರೆ. ಇಂತಹ ಮುಖ್ಯಮಂತ್ರಿಗಳ ಜತೆ ಕೆಲಸ ಮಾಡಲು ನಮಗೆ ಇಷ್ಟವಿಲ್ಲ. ಒಂದೋ ಅವರನ್ನು ಬದಲಿಸಿ, ಇಲ್ಲವೇ ನಮ್ಮ ರಾಜೀನಾಮೆ ಪಡೆಯಿರಿ ಎಂದು ಪಕ್ಷದ ವರಿಷ್ಠರನ್ನು ಕೋರಲು ಗಣಿರೆಡ್ಡಿಗಳ ಪಡೆ ನಿರ್ಧರಿಸಿದೆ.