ರಾಹುಲ್ ಗಾಂಧಿ ಮೈಯಲ್ಲಿ ವಿದೇಶಿ ರಕ್ತ ಹರಿಯುತ್ತಿದೆ: ಈಶ್ವರಪ್ಪ
ಯಾದಗಿರಿ, ಸೋಮವಾರ, 20 ಡಿಸೆಂಬರ್ 2010( 16:12 IST )
ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಮೈಯಲ್ಲಿ ವಿದೇಶಿ ರಕ್ತ ಹರಿಯುತ್ತಿದೆ. ಅವರಿಗೆ ಹಿಂದೂ ಸಂಘಟನೆ ಮತ್ತು ಬಿಜೆಪಿಯ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದರು.
ಚುನಾವಣಾ ಪ್ರಚಾರಕ್ಕೆ ತೆರಳುವ ಮುನ್ನ ಸುದ್ದಿಗಾರರ ಜತೆಗೆ ಮಾತನಾಡಿ, ಕೇಂದ್ರದಲ್ಲಿ ಉಗ್ರಗಾಮಿ ಅಫ್ಜಲ್ ಗುರುವನ್ನು ಗಲ್ಲಿಗೆ ಹಾಕದೆ ಪಕ್ಕದಲ್ಲಿಟ್ಟುಕೊಂಡು ಇಂತಹ ಹೇಳಿಕೆ ನೀಡುವ ಅವರು ದೇಶದಲ್ಲಿನ ಹಿಂದೂ ಸಂಘಟನೆ ಛಿದ್ರಗೊಳಿಸಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಕಿಲೀಕ್ಸ್ ಕಾಂಗ್ರೆಸ್ ಪಕ್ಷದ ಹಗರಣಗಳನ್ನು ಬಹಿರಂಗಗೊಳಿಸುತ್ತಿದೆ. ತನ್ನ ಹಗರಣಗಳನ್ನು ಮುಚ್ಚಿ ಹಾಕಲು ದೆಹಲಿಯಲ್ಲಿ ಮಹಾ ಅಧಿವೇಶನ ನಡೆಸುತ್ತಿದೆ. ಇದರಿಂದ ಯಾವುದೇ ಉಪಯೋಗವಿಲ್ಲ. ಮೊದಲು ಬಿಜೆಪಿ ವಿರುದ್ಧ ಹೇಳಿಕೆ ನೀಡುವುದು ನಿಲ್ಲಿಸಲಿ ಎಂದು ಸಲಹೆ ನೀಡಿದರು.
ರಾಜ್ಯಪಾಲರು ಸಂವಿಧಾನಬದ್ಧವಾಗಿ ನಡೆದುಕೊಳ್ಳದೆ ಒಂದು ಪಕ್ಷದ ಕಾರ್ಯಕರ್ತರಾಗಿ ನಡೆದುಕೊಳ್ಳುತ್ತಿರುವುದು ವಿಷಾದ. ಅವರು ರಾಜ್ಯದಲ್ಲಿ ಪ್ರತಿ ಪಕ್ಷದ ನಾಯಕರಂತೆ ನಡೆದುಕೊಳ್ಳುತ್ತಿದ್ದು, ಸಿದ್ದರಾಮಯ್ಯನವರನ್ನು ನಿಷ್ಕ್ರೀಯಗೊಳಿಸಿದ್ದಾರೆ ಎಂದು ಆರೋಪಿಸಿದ ಈಶ್ವರಪ್ಪ, ಇದೇ ನಡವಳಿಕೆ ಮುಂದುವರಿಸಿದಲ್ಲಿ ರಾಜ್ಯವ್ಯಾಪ್ತಿ ಅವರ ವಿರುದ್ಧ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.