ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಜಿ.ಪಂ. ಅಖಾಡ; ಅತ್ತಿಗೆ ಕಾಂಗ್ರೆಸ್, ನಾದಿನಿ ಬಿಜೆಪಿ ಹುರಿಯಾಳು! (BJP | Yeddyurappa | Congress | JDS | Hassan | Deve gowda)
Bookmark and Share Feedback Print
 
ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಮೊದಲ ಹಂತದ ಚುನಾವಣಾ ಪ್ರಚಾರದ ಅಬ್ಬರಕ್ಕೆ ತೆರೆ ಬಿದ್ದಿದೆ. ಆದರೆ ಈ ಬಾರಿ ಜಿಲ್ಲೆಯಲ್ಲಿ ಕುಟುಂಬ ರಾಜಕಾರಣಕ್ಕೆ ಹೆಚ್ಚು ಒತ್ತು ಕೊಟ್ಟ ಹಿನ್ನೆಲೆಯಲ್ಲಿ ಅಖಾಡ ಹೆಚ್ಚು ರಂಗೇರಿದೆ.

ಮಾಜಿ ಶಾಸಕರ ಆರು ಮಂದಿ ಸಂಬಂಧಿಗಳು ಈ ಬಾರಿ ಜಿಲ್ಲಾ ಪಂಚಾಯ್ತಿ ಅಖಾಡದಲ್ಲಿದ್ದಾರೆ. ಹೊಳೆನರಸೀಪುರ ತಾಲೂಕಿನಲ್ಲಿ ಒಂದೇ ಕುಟುಂಬದ ಇಬ್ಬರು ಮಹಿಳೆಯರು, ಒಂದೇ ಕ್ಷೇತ್ರದಲ್ಲಿ ಬೇರೆ, ಬೇರೆ ಪಕ್ಷಗಳಿಂದ ಕಣಕ್ಕೆ ಇಳಿದಿರುವುದು ಹೆಚ್ಚಿನ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ಹೊಳೆನರಸೀಪುರ ತಾಲೂಕು ನೀಡೋಣಿ ಜಿ.ಪಂ.ಕ್ಷೇತ್ರದಿಂದ ಮಾಜಿ ಶಾಸಕ ದೊಡ್ಡೇಗೌಡ ಅವರ ಪುತ್ರಿ ರಾಜಮ್ಮ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಅದೇ ಕ್ಷೇತ್ರದಿಂದ ದೊಡ್ಡೇಗೌಡ ಸೊಸೆ (ಮಗನ ಪತ್ನಿ) ಶೋಭಾರಾಣಿ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ.

ಚನ್ನರಾಯಪಟ್ಟಣದ ಡಿ.ಕಾಳೇನಹಳ್ಳಿ ಕ್ಷೇತ್ರ ಜಿಲ್ಲೆಯ ಮೂವರು ಪ್ರಭಾವಿ ರಾಜಕಾರಣಿಗಳ ಕುಟುಂಬದ ಮಹಿಳೆಯರ ಸ್ಪರ್ಧಾ ಕಣವಾಗಿದೆ.
ಮಾಜಿ ಸಚಿವ ಎಚ್.ಸಿ.ಶ್ರೀಕಂಠಯ್ಯ ಅವರ ಸೊಸೆ, ಮಾಜಿ ಸಚಿವ, ದಿ.ಜಿ.ಪುಟ್ಟಸ್ವಾಮಿಗೌಡರ ಪುತ್ರಿ ರಾಜೇಶ್ವರಿ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ. ಇವರ ಪ್ರತಿಸ್ಪರ್ಧಿಯಾಗಿ ಮಾಜಿ ಪ್ರಧಾನಿ ದೇವೇಗೌಡರ ಸಂಬಂಧಿ, ಎಚ್‌ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಿ.ಎನ್.ಬಾಲಕೃಷ್ಣ ಅವರ ಪತ್ನಿ ಕುಸುಮಾರಾಣಿ (ಜೆಡಿಎಸ್) ಕಣದಲ್ಲಿದ್ದಾರೆ.

ಬೇಲೂರು ತಾಲೂಕಿನ ಕೋಗಿಲೆಮನೆ ಕ್ಷೇತ್ರದಿಂದ ಬೇಲೂರು ಕ್ಷೇತ್ರದ ಶಾಸಕ ವೈ.ಎನ್.ರುದ್ರೇಶ್ ಗೌಡ ಅವರ ಸಹೋದರ ವೈ.ಎನ್.ಕೃಷ್ಣಕುಮಾರ್ ಸ್ಪರ್ಧಿಸಿದ್ದಾರೆ. ಟಿಎಂಪಿಸಿಎಂಎಸ್ ಮಾಜಿ ಅಧ್ಯಕ್ಷ ಬಿ.ಡಿ.ಚಂದ್ರೇಗೌಡ ಜೆಡಿಎಸ್‌ನಿಂದ ಮತ್ತು ಆಲೂಗಡ್ಡೆ ವ್ಯಾಪಾರಿ ಆನಂದಪ್ಪ ಬಿಜೆಪಿಯಿಂದ ಇವರಿಗೆ ಎದುರಾಳಿಯಾಗಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ