ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಫೆವಿಕಾಲ್ ಹಾಕಿದರೂ ಸಿಎಂ ಕುರ್ಚಿ ಉಳಿಯಲ್ಲ: ಕಾಂಗ್ರೆಸ್ (Congress | BJP | BS Yeddyurapa | G Parameshwar)
Bookmark and Share Feedback Print
 
ಕರ್ನಾಟಕ ಬಿಜೆಪಿ ಸರಕಾರದ ಪಾಪದ ಕೊಡ ತುಂಬಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಪ್ಪರಲಾಗ ಹಾಕಿದರೂ ಅದನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ. ಮುಂದಿನ ಆರೇ ತಿಂಗಳಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ನಡೆಯಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಭವಿಷ್ಯ ನುಡಿದಿದ್ದಾರೆ.

ಜಿಲ್ಲಾ ಪಂಚಾಯತ್ - ತಾಲೂಕು ಪಂಚಾಯತ್ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ಮಾತನಾಡುತ್ತಿದ್ದ ಅವರು, ಮೂರೇ ತಿಂಗಳಲ್ಲಿ ಸರಕಾರ ಪತನವಾಗುತ್ತದೆ. ಆರು ತಿಂಗಳೊಳಗೆ ಚುನಾವಣೆ ನಡೆಯುತ್ತದೆ ಎಂದರು.

ಮುಖ್ಯಮಂತ್ರಿ ತನ್ನ ಕುರ್ಚಿಗೆ ಫೆವಿಕಾಲ್ ಅಂಟಿಸಿಕೊಂಡು ಕುಳಿತರೂ ಯಡಿಯೂರಪ್ಪ ಸರಕಾರ ಉಳಿಯದು. ಇದನ್ನು ಭವಿಷ್ಯ ಎಂದು ಬೇಕಾದರೂ ಪರಿಗಣಿಸಿ. ಸಾಕಷ್ಟು ಆರೋಪಗಳನ್ನು ಎದುರಿಸುತ್ತಿರುವ ಯಡಿಯೂರಪ್ಪ ಶೀಘ್ರದಲ್ಲೇ ರಾಜೀನಾಮೆ ನೀಡಲೇಬೇಕಾದ ಅನಿವಾರ್ಯತೆ ಎದುರಾಗಲಿದೆ ಎಂದು ಅಭಿಪ್ರಾಯಪಟ್ಟರು.

ಮುಖ್ಯಮಂತ್ರಿ ರಾಷ್ಟ್ರ ರಾಜಕಾರಣದ ಮಾತುಗಳನ್ನಾಡಿರುವುದನ್ನು ಲೇವಡಿ ಮಾಡಿರುವ ಪರಮೇಶ್ವರ್, ಅಲ್ಲಿ ಹೋಗಿ ಮಾಡುವುದಕ್ಕೇನೂ ಇಲ್ಲ. ಪಕ್ಷದ ಕೆಲಸ ಮಾಡಬೇಕಷ್ಟೇ ಎಂದರು.

ಇತ್ತೀಚಿನ ಭೂ ಹಗರಣಗಳು, ಸ್ವಜನ ಪಕ್ಷಪಾತ ಆರೋಪಗಳನ್ನು ಉಲ್ಲೇಖಿಸಿ ಬಿಜೆಪಿ ಸರಕಾರದ ಮೇಲೆ ವಾಗ್ದಾಳಿ ನಡೆಸಿದ ಅವರು, ಕೈಗಾರಿಕಾ ಉದ್ದೇಶಗಳಿಗಾಗಿ ನೀವು ರೈತರ 1.50 ಲಕ್ಷ ಎಕರೆ ಫಲವತ್ತಾದ ಭೂಮಿಯನ್ನು ವಶಕ್ಕೆ ತೆಗೆದುಕೊಂಡದ್ದು ಯಾಕೆ? ವಿಧಾನಸೌಧವನ್ನು ನೀವು ರಿಯಲ್ ಎಸ್ಟೇಟ್ ದಂಧೆಯ ಕೇಂದ್ರವೆಂದು ಕೊಂಡಿದ್ದೀರಾ ಎಂದು ಪ್ರಶ್ನಿಸಿದರು.

ವಿಧಾನ ಪರಿಷತ್ ಪ್ರತಿಪಕ್ಷದ ನಾಯಕಿ ಮೋಟಮ್ಮ ಕೂಡ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು. ಯಾತ್ರೆ, ಜಾತ್ರೆ, ಹಿಂದುತ್ವದ ಮೂಲಕ ಕಾಲಹರಣ ಮಾಡುತ್ತಿರುವ ಬಿಜೆಪಿಯವರದ್ದು ಕಳ್ಳರ ಸರಕಾರ ಎಂದು ಟೀಕಿಸಿದರು.

ರಾಜ್ಯ ಬಿಜೆಪಿಯದ್ದು ರಾಮರಾಜ್ಯವಲ್ಲ, ಬಕಾಸುರ ಸರಕಾರ ಎಂದು ಹಿಗ್ಗಾಮುಗ್ಗಾ ಝಾಡಿಸಿದ್ದು ಬಿ.ಕೆ. ಹರಿಪ್ರಸಾದ್. ಬಿಜೆಪಿ ಮಹಿಳೆಯರ ಬಗ್ಗೆ ಗೌರವವೇ ಇಲ್ಲ. ಅದು ಸಾಕಷ್ಟು ಪ್ರಕರಣಗಳಿಂದ ಸಾಬೀತಾಗಿದೆ. ಇಂತಹ ಭ್ರಷ್ಟ ಸರಕಾರಕ್ಕೆ ಜನತೆ ಸರಿಯಾದ ಬುದ್ಧಿ ಕಲಿಸಬೇಕು ಎಂದು ಕರೆ ನೀಡಿದರು.
ಸಂಬಂಧಿತ ಮಾಹಿತಿ ಹುಡುಕಿ