ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಜಾಗತೀಕರಣದ ನಡುವೆಯೂ ಕನ್ನಡ ಬೆಳೆಯುತ್ತಿದೆ: ವೀರಭದ್ರಪ್ಪ (Veerabdrappa | Globalaization | Kannada Langauage | Davanagere)
Bookmark and Share Feedback Print
 
ಪ್ರಪಂಚದಲ್ಲಿ ಅತ್ಯುತ್ತಮ ಸಾಹಿತ್ಯ ಕೃತಿಗಳನ್ನು ಕೊಟ್ಟಿರುವ ಕನ್ನಡ ಭಾಷೆ ಜಾಗತೀಕರಣ ಸಂದರ್ಭದಲ್ಲೂ ಮತ್ತಷ್ಟು ಸುಸಂಪನ್ನ ಆಗುತ್ತಿದೆ ಎಂದು ಖ್ಯಾತ ಸಾಹಿತಿ ಕುಂ. ವೀರಭದ್ರಪ್ಪ ಅಭಿಪ್ರಾಯಪಟ್ಟರು.

ನಗರದ ರೋಟರಿ ಬಾಲಭವನದಲ್ಲಿ ಸಾಹಿತಿ ಸಿ.ಟಿ. ಶಾಂತರಾಜ್ ಅವರ 'ಅನನ್ಯ' ಕಾದಂಬರಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಜಗತ್ತಿನ ಯಾವುದೇ ಭಾಷೆಯಲ್ಲಿ ರಚನೆಯಾಗದಷ್ಟು ಉತ್ಕೃಷ್ಟ ಸಾಹಿತ್ಯ ಕನ್ನಡದಲ್ಲಿದೆ. ಪಂಪ, ಕುಮಾರವ್ಯಾಸರಂತಹ ಕಾವ್ಯಗಳು ಟಾಲ್‌ಟಾಯ್ಸ್, ಮಾರ್ಕ್ವಿಜ್‌ನಂತಹ ಲೇಖಕರ ಕೃತಿಗಳಿಗಿಂತ ನೂರು ಪಾಲು ಉತ್ತಮವಾಗಿವೆ. ಕನ್ನಡದಲ್ಲಿ ಸಮೃದ್ಧ ಸಾಹಿತ್ಯ ನಿರ್ಮಾಣವಾಗಿದೆ ಎಂದರು.

ಮತ್ತಷ್ಟು ಬೆಳೆಸುವ ಹೊಣೆ ಯುವ ಸಾಹಿತಿಗಳದಾಗಬೇಕು. ಪಂಪನ ಕಾಲದಲ್ಲೂ ಕನ್ನಡ ಭಾಷೆ ನಾಶವಾಗುತ್ತದೆಂಬ ಆತಂಕ ಎದುರಾಗಿತ್ತು. ಈಗಲೂ ಅಂತಹ ಮಾತು ಕೇಳಿ ಬರುತ್ತಿದೆ. ಅನ್ಯ ಭಾಷೆ ಪದಗಳ ತತ್ಸಮ, ತದ್ಬವ ಮಾಡಿಕೊಂಡು ಅರಗಿಸಿಕೊಂಡು ವಿಸ್ತಾರವಾಗುವ ಸಾಮರ್ಥ್ಯವಿರುವ ಕನ್ನಡಕ್ಕೆ ಯಾವ ಕಾಲದಲ್ಲಿಯೂ ಆತಂಕ ಎದುರಾಗದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕವಿ, ಲೇಖಕನಿಗೆ ಬದುಕಿನ ಗಾಢ ಅನುಭವ ಇದ್ದಾಗ ಮಾತ್ರ ಉತ್ತಮ ಸಾಹಿತ್ಯ ಸೃಷ್ಟಿ ಮಾಡಲು ಸಾಧ್ಯ. ಕತೆ, ಕಾದಂಬರಿಗಳ ಅಧ್ಯಯನ ಉತ್ತಮ ಸಾಹಿತ್ಯ ಕೃಷಿಗೆ ನೆರವಾಗುತ್ತದೆ. ಲೇಖಕ ಕೂತಲ್ಲಿಯೇ ಜಗತ್ತು ಗ್ರಹಿಸುವ ಸಾಮರ್ಥ್ಯ ಪಡೆದುಕೊಳ್ಳಬೇಕು. ಸೃಜನಶೀಲ ಲೇಖಕರಿಗೆ ಇತರೆ ಸಾಹಿತಿಗಳ ಸಾಹಿತ್ಯ ಓದುವ ಸ್ಥಾಯಿಗುಣ ಪ್ರಧಾನವಾಗಿರಬೇಕು ಎಂದು ಕಿವಿಮಾತು ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ