ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಸಂತಾಪ ಸೂಚಕದಲ್ಲೂ ರಾಜಕೀಯ; ಕಲಾಪ ಸೋಮವಾರಕ್ಕೆ (Vidhana shabhe | BJP | Congress | JDS, Bopayya)
Bookmark and Share Feedback Print
 
ವಿಧಾನಪರಿಷತ್‌ನಲ್ಲಿ ಶುಕ್ರವಾರ ಬೆಳಿಗ್ಗೆ ಕಲಾಪ ಆರಂಭವಾಗುತ್ತಿದ್ದಂತೆಯೇ ಅಗಲಿದ ಗಣ್ಯರಿಗೆ ಹಾಗೂ ಉಂಡಬತ್ತಿ ಕೆರೆ ದುರಂತದಲ್ಲಿ ಸಾವನ್ನಪ್ಪಿದವರಿಗೆ ಸಂತಾಪ ಸೂಚಿಸಲಾಯಿತು. ಆದರೆ ಸಂತಾಪ ಸೂಚಕ ವೇಳೆಯಲ್ಲೂ ರಾಜಕೀಯ ಮಾಡುತ್ತಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಆಡಳಿತಾರೂಢ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ ಕೋಲಾಹಲ ನಡೆದ ಪರಿಣಾಮ ಕಲಾಪವನ್ನು ಸಭಾಪತಿ ಸೋಮವಾರಕ್ಕೆ ಮುಂದೂಡಿದರು.

ಇತ್ತೀಚೆಗೆ ನಮ್ಮನ್ನಗಲಿದ ಶಾಸಕ ಕೆ.ಎಂ.ಕೃಷ್ಣಮೂರ್ತಿ ಹಾಗೂ ನಾನು ಅಭಿವೃದ್ಧಿಯ ಮಾನದಂಡದ ಮೇಲೆ ಚುನಾವಣೆಯಲ್ಲಿ ಮುಖಾಮುಖಿಯಾಗಿದ್ದೆವು. ಅಭಿವೃದ್ಧಿ ಎಂದರೆ ಅದು ಬಿಜೆಪಿಯ ಅಭಿವೃದ್ಧಿ ಮಂತ್ರವಲ್ಲ ಎಂದು ಜೆಡಿಎಸ್‌ನ ವೈ.ಎಸ್.ವಿ.ದತ್ತ ಸಂತಾಪ ಸೂಚಕದ ಮಾತನಾಡುತ್ತಿದ್ದಾಗ ಹೇಳಿದ ಮಾತು ಚಕಮಕಿಗೆ ಕಾರಣವಾಯಿತು.

ನಾನು ಕೈಗೊಂಡ ಅಭಿವೃದ್ಧಿ ಕೆಲಸಗಳು ಹಾಗೂ ಕೃಷ್ಣಮೂರ್ತಿ ಅವರು ಕೈಗೊಂಡ ಅಭಿವೃದ್ಧಿ ಕೆಲಸಗಳ ಮಾನದಂಡದ ಮೇಲೆ ಚುನಾವಣೆ ಎದುರಿಸಿದ್ದೆವು. ಅಭಿವೃದ್ಧಿ ಎಂದರೆ ಬಿಜೆಪಿ ಅಭಿವೃದ್ಧಿ ಮಂತ್ರವಲ್ಲ ಎಂದಿದ್ದು ಸಚಿವರಾದ ಸೋಮಣ್ಣ, ಸಿ.ಸಿ.ಪಾಟೀಲ್, ರೇಣುಕಾಚಾರ್ಯ ಅವರನ್ನು ಕೆರಳಿಸಿತು.

ದತ್ತ ಅವರು ಸಂತಾಪ ಸೂಚಕದಲ್ಲೂ ರಾಜಕಾರಣ ಮಾಡುತ್ತಿದ್ದಾರೆ ಎಂದು ಆಡಳಿತ ಪಕ್ಷದ ಸದಸ್ಯರು ಏರಿದ ಧ್ವನಿಯಲ್ಲಿ ಕೂಗಿದರೆ, ಪ್ರತಿಪಕ್ಷಗಳ ಸದಸ್ಯರು ದತ್ತ ಅವರು ಹೇಳಿರುವುದು ಸರಿಯಾಗಿದೆ ಎಂದು ವಾದಿಸತೊಡಗಿದರು. ಈ ಹಂತದಲ್ಲಿ ಯಾರು, ಯಾರಿಗೆ ಏನು ಹೇಳುತ್ತಿದ್ದಾರೆಂಬ ಗೊಂದಲದಿಂದ ಕಲಾಪ ಕೋಲಾಹಲದ ಗೂಡಾಗಿತ್ತು.

ಸಭಾಪತಿ ಡಿ.ಎಚ್.ಶಂಕರಮೂರ್ತಿಯವರು ತಾಳ್ಮೆವಹಿಸಿ, ಕಲಾಪ ಮುಂದವರಿಯಲು ಅವಕಾಶ ಮಾಡಿಕೊಡಬೇಕು ಎಂಬ ಮನವಿಗೂ ಜಗ್ಗದಿದ್ದಾಗ, ಕಲಾಪವನ್ನು ಸೋಮವಾರಕ್ಕೆ ಮುಂದೂಡಿದರು.

ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯ;
ಮತ್ತೊಂದೆಡೆ ವಿಧಾನಸಭೆಯಲ್ಲಿ ಅಗಲಿದ ಗಣ್ಯರಿಗೆ, ಉಂಡಬತ್ತಿ ಕೆರೆ ದುರಂತದಲ್ಲಿ ಸಾವನ್ನಪ್ಪಿದವರಿಗೆ ಸಂತಾಪ ಸೂಚಿಸಿದ ನಂತರ, ವಿಪಕ್ಷಗಳ ಸದಸ್ಯರು ವಿಧಾನಸಭಾ ಸ್ಪೀಕರ್ ಕೆ.ಜಿ.ಬೋಪಯ್ಯ ಅವರ ವಿರುದ್ಧ ದೂರು ದಾಖಲಾಗಿರುವ ಹಿನ್ನೆಲೆಯಲ್ಲಿ ಅವರು ಆ ಸ್ಥಾನದಲ್ಲಿ ಕೂರಲು ಅನರ್ಹರು ಎಂದು ಗದ್ದಲ ಎಬ್ಬಿಸಿದರು.

ಅಲ್ಲದೇ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವುದಾಗಿ ಸುಮಾರು 40 ಮಂದಿಯ ಸಹಿಯುಳ್ಳ ದೂರನ್ನು ವಿಧಾನಸಭಾ ಕಾರ್ಯದರ್ಶಿ ಹೆಚ್ ವಿ ಪಾಟೀಲ್ ಅವರಿಗೆ ಸಲ್ಲಿಸಿದ್ದಾರೆ.

ಸ್ಪೀಕರ್ ಕೆ.ಜಿ.ಬೋಪಯ್ಯ ಅವರು ನಿಷ್ಪಕ್ಷಪಾತವಾಗಿ ನಡೆದುಕೊಳ್ಳುತ್ತಿಲ್ಲ. ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಸ್ಪೀಕರ್ ಅವರು ವಿಫಲರಾಗಿದ್ದಾರೆ. ಅಷ್ಟೇ ಅಲ್ಲದೇ ಅವರ ವಿರುದ್ಧ ಲೋಕಾಯುಕ್ತರಲ್ಲಿ ದೂರು ದಾಖಲಾಗಿದೆ. ಹಾಗಾಗಿ ಅವರು ಸ್ಪೀಕರ್ ಸ್ಥಾನದಲ್ಲಿ ಕೂರಲು ಅನರ್ಹರು. ಹಾಗಾಗಿ ನಾವು ಅವರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸುತ್ತೇವೆ ಎಂದರು. ಈ ಸಂದರ್ಭದಲ್ಲಿ ಸದನದಲ್ಲಿ ಕೋಲಾಹಲ ಉಂಟಾಗಿ, ಸ್ಪೀಕರ್ ಕೆ.ಜಿ.ಬೋಪಯ್ಯ ಅವರು ಕಲಾಪವನ್ನು ಸೋಮವಾರಕ್ಕೆ ಮುಂದೂಡಿದರು.
ಸಂಬಂಧಿತ ಮಾಹಿತಿ ಹುಡುಕಿ