ಅಕ್ರಮ ಗಣಿ-ರೆಡ್ಡಿ ಬ್ರದರ್ಸ್ ಸಂಪತ್ತನ್ನು ಮುಟ್ಟುಗೋಲು ಹಾಕಿ
ಬೆಂಗಳೂರು, ಭಾನುವಾರ, 16 ಜನವರಿ 2011( 10:18 IST )
ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿರುವ ಓಬಳಾಪುರಂ ಹಾಗೂ ಇತರೆ ಕಂಪನಿಗಳ ಪರವಾನಿಗೆ ರದ್ದುಪಡಿಸಬೇಕು. ಅಕ್ರಮ ಗಣಿಗಾರಿಕೆಯಿಂದ ಸಂಪಾದಿಸಿರುವ ಸಂಪತ್ತನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು, ಅಕ್ರಮ ನಡೆಸಿದವರ ಹಾಗೂ ಸಹಕರಿಸಿದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕೆಂದು ಆಗ್ರಹಿಸಿ ಜ.25ರಂದು ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿ ಎದುರು ನೈಸರ್ಗಿಕ ಸಂಪನ್ಮೂಲ ಸಂರಕ್ಷಣಾ ರಾಷ್ಟ್ರೀಯ ಸಮಿತಿ ಪ್ರತಿಭಟನೆ ಹಮ್ಮಿಕೊಂಡಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿವಿಧ ಸಂಘಟನೆಗಳ ಮುಖಂಡರು ಅಕ್ರಮ ಗಣಿಗಾರಿಕೆಗೆ ಪ್ರೋತ್ಸಾಹ ನೀಡಿರುವ ಮುಖ್ಯಮಂತ್ರಿ ಯಡಿಯೂರಪ್ಪ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.
ಕೇಂದ್ರ ಉನ್ನತಾಧಿಕಾರ ಸಮಿತಿ ನೀಡಿರುವ ವರದಿಯಲ್ಲಿ ಓಬಳಾಪುರಂ ಮೈನಿಂಗ್ ಕಂಪನಿ, ಬಳ್ಳಾರಿ ಐರನ್ ಓರ್ ಕಂಪನಿ, ವೈ.ಎಂ.ಮಹಾಬಲೇಶ್ವರ ಅಂಡ್ ಸನ್ಸ್ ಹಾಗೂ ಅನಂತಪುರಂ ಮೈನಿಂಗ್ ಕಂಪನಿಗಳ ಪರವಾನಿಗೆ ರದ್ದುಪಡಿಸುವಂತೆ ಮತ್ತು ದಂಡ ವಿಧಿಸುವಂತೆಯೂ ಶಿಫಾರಸು ಮಾಡಿದೆ.
ಕೂಡಲೇ ಶಿಫಾರಸನ್ನು ಸುಪ್ರೀಂಕೋರ್ಟ್ ಅನುಷ್ಠಾನಗೊಳಿಸಬೇಕು, ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿರುವ ಎಲ್ಲ ಕಂಪನಿಗಳ ಹಾಗೂ ಸಹಕರಿಸಿರುವ ಅರಣ್ಯ, ಕಂದಾಯ, ಸಾರಿಗೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕೆಂದು ಮುಖಂಡರು ಒತ್ತಾಯಿಸಿದ್ದಾರೆ.