ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ರಾಜ್ಯಪಾಲರಿಂದಾಗಿ ಮತ್ತೆ ಹತ್ತಿರವಾದ ಯಡ್ಡಿ-ರೆಡ್ಡಿಗಳು? (Janardhana Reddy | BS Yeddyurappa | BJP | HR Bharadwaj)
Bookmark and Share Feedback Print
 
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಬಳ್ಳಾರಿ ರೆಡ್ಡಿಗಳು ಮತ್ತೆ ಹತ್ತಿರವಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ರಾಜ್ಯಪಾಲರ ವಿರುದ್ಧದ ಹೋರಾಟಕ್ಕೆ ರೆಡ್ಡಿಗಳು ಸಂಪೂರ್ಣ ಬೆಂಬಲವನ್ನು ನೀಡಿದರೆ, ಅವರಿಗೂ ಮುಖ್ಯಮಂತ್ರಿ ಸಹಕಾರ ತೋರಿಸುತ್ತಿದ್ದಾರೆ. ಇದಕ್ಕೆ ಕಾರಣ ರಾಜ್ಯಪಾಲ ಹಂಸರಾಜ್ ಭಾರದ್ವಾಜ್.

ಇದು ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಭಾರದ್ವಾಜ್ ಅನುಮತಿ ನೀಡಿದ ನಂತರ ಕಂಡು ಬರುತ್ತಿರುವ ಬೆಳವಣಿಗೆ. ರಾಜ್ಯಪಾಲರ ಕ್ರಮದಿಂದಾಗಿ ರೆಡ್ಡಿಗಳು ಮತ್ತು ಯಡಿಯೂರಪ್ಪ ಹತ್ತಿರವಾಗಿದ್ದಾರೆ.

ಮಂಗಳವಾರ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಇದರ ವಿರಾಟ್ ಪ್ರದರ್ಶನವೂ ನಡೆದಿದೆ. ಯಡಿಯೂರಪ್ಪ ಅವರು ರೆಡ್ಡಿಗಳನ್ನು ಹೊಗಳಿದರೆ, ಇದಕ್ಕೆ ಪ್ರತಿಯಾಗಿ ರೆಡ್ಡಿಗಳು ಯಡಿಯೂರಪ್ಪನವರನ್ನು ಶ್ಲಾಘಿಸಿದರು.

ಶಾಸಕರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಯಡಿಯೂರಪ್ಪ, ಹಂಪಿ ಉತ್ಸವದಲ್ಲಿ ಬಿಜೆಪಿಯ ಎಲ್ಲಾ ಶಾಸಕರೂ ಭಾಗವಹಿಸಿ. ಅಲ್ಲಿ ಜನಾರ್ದನ ರೆಡ್ಡಿಯವರು ಅತ್ಯುತ್ತಮವಾಗಿ ಕಾರ್ಯಕ್ರಮವನ್ನು ಸಂಘಟಿಸಿದ್ದಾರೆ. ಅದನ್ನು ಯಶಸ್ವಿ ಮಾಡುವ ಜವಾಬ್ದಾರಿ ನಮ್ಮದು ಎಂದರು.

ನಂತರ ಜನಾರ್ದನ ರೆಡ್ಡಿಯವರನ್ನು ಮಾತನಾಡುವಂತೆ ಯಡಿಯೂರಪ್ಪ ಪುಸಲಾಯಿಸಿದರು. ಈ ಹೊತ್ತಿನಲ್ಲಿ ಎದ್ದು ನಿಂತ ರೆಡ್ಡಿ, ರಾಜ್ಯಪಾಲರನ್ನು ವಾಚಮಾಗೋಚರವಾಗಿ ಟೀಕಿಸಿದರು. ಮುಖ್ಯಮಂತ್ರಿಯವರನ್ನು ಎತ್ತರೆತ್ತರಕ್ಕೆ ಹೊಗಳಿ ಅಟ್ಟಕ್ಕೇರಿಸಿದರು.

ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆದಾಗಿನಿಂದ ಇಂತಹ ಪ್ರಸಂಗಗಳು ಹಲವಾರು ಬಾರಿ ನಡೆದಿವೆ. ಮುಖ್ಯಮಂತ್ರಿ ಪಟ್ಟದಿಂದ ಯಡಿಯೂರಪ್ಪನವರನ್ನು ಕೆಳಗಿಳಿಸಲು ರೆಡ್ಡಿಗಳು, ರೆಡ್ಡಿಗಳನ್ನು ಸಂಪುಟದಿಂದ ಹೊರಗಿಡಲು ಯಡಿಯೂರಪ್ಪ ಯತ್ನಿಸುತ್ತಿದ್ದದ್ದು ಎಲ್ಲರಿಗೂ ಗೊತ್ತಿರುವಂತದ್ದೆ.

ಆದರೆ ಸರಕಾರ ಸಂಕಷ್ಟಕ್ಕೆ ಸಿಲುಕಿದಾಗ ಅದನ್ನೆಲ್ಲ ಮರೆತು ಸಹಕಾರ ನೀಡಿದವರು ಕೂಡ ರೆಡ್ಡಿಗಳು ಎಂಬುದನ್ನು ಮರೆಯುವಂತಿಲ್ಲ. ಅದು ವಿಶ್ವಾಸ ಮತ ಸಾಬೀತುಪಡಿಸುವ ಹೊತ್ತಿನಲ್ಲಿರಬಹುದು, ಅತೃಪ್ತ ಶಾಸಕರ ವಿಚಾರದಲ್ಲಿರಬಹುದು ಅಥವಾ ನಂತರ ವಿಶ್ವಾಸಮತ ಸಾಬೀತುಪಡಿಸುವಾಗ ಇರಬಹುದು, ಯಾವುದೇ ವಿಚಾರದಲ್ಲಿ ಯಡಿಯೂರಪ್ಪನವರನ್ನು ರೆಡ್ಡಿಗಳು ಕೈ ಬಿಟ್ಟಿರಲಿಲ್ಲ.

ಆದರೂ ರೆಡ್ಡಿಗಳು ಮತ್ತು ಯಡಿಯೂರಪ್ಪನವರ ನಡುವೆ ಇರುವ ಅಂತರ ಕಂದಕಕ್ಕಿಂತ ದೊಡ್ಡದು. ಪ್ರಸಕ್ತ ಅದು ಕೊಂಚ ಹತ್ತಿರವಾದಂತೆ ಭಾಸವಾಗುತ್ತಿದೆ. ರಾಜ್ಯಪಾಲರು ಮುಖ್ಯಮಂತ್ರಿ ಮತ್ತು ಬಳ್ಳಾರಿ ಗಣಿ -- ಎರಡರ ಬಗ್ಗೆಯೂ ಖಾರವಾಗಿ ಮಾತನಾಡುತ್ತಿರುವುದು, ಕ್ರಮಗಳಿಗೆ ಮುಂದಾಗುತ್ತಿರುವುದು, ಅತ್ತ ಸುಪ್ರೀಂ ಕೋರ್ಟ್ ಅಕ್ರಮ ಗಣಿಗಾರಿಕೆ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವ ಇರಾದೆ ವ್ಯಕ್ತಪಡಿಸಿರುವುದು ಇಂತಹ ಬೆಳವಣಿಗೆಗಳಿಗೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ