ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಮುಂದಿನ ಚುನಾವಣೆಯಲ್ಲೂ ನಾನೇ ಸಿಎಂ: ಯಡಿಯೂರಪ್ಪ (BS Yeddyurappa | HR Bharadwaj | Karnataka | BJP)
Bookmark and Share Feedback Print
 
ವಕೀಲರು ಕೇಸು ದಾಖಲಿಸಿರುವುದಕ್ಕಾಗಿ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ನಾನು ಅವಧಿ ಪೂರ್ಣ ಮಾಡಿಯೇ ತೀರುತ್ತೇನೆ. ನಂತರದ ಚುನಾವಣೆಯಲ್ಲೂ ನಾನೇ ಮುಖ್ಯಮಂತ್ರಿಯಾಗಿ ಆಯ್ಕೆಯಾಗುತ್ತೇನೆ ಎಂದು ಹೇಳಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡುತ್ತಿದ್ದ ಅವರು, ಯಾವುದೇ ಕಾರಣಕ್ಕೂ ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ. ಅಂತಹ ಪ್ರಶ್ನೆಯೇ ನನ್ನ ಮುಂದಿಲ್ಲ. ಅಧಿಕಾರವಧಿ ಪೂರ್ತಿಗೊಳಿಸುತ್ತೇನೆ ಎಂದರು.

ಸ್ವಜನ ಪಕ್ಷಪಾತ, ಭೂ ಹಗರಣಗಳ ಕುರಿತು ನಿಮ್ಮ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದೆಯಲ್ಲವೇ ಎಂದು ಪತ್ರಕರ್ತರು ಪ್ರಶ್ನಿಸಿದಾಗ, ಕೇಸು ಅದರ ಪಾಡಿಗೆ ನಡೆಯುತ್ತದೆ. ಅದಕ್ಕೂ ಸರಕಾರಕ್ಕೂ ಯಾವುದೇ ಸಂಬಂಧ ಇರುವುದಿಲ್ಲ. ಅದು ಆಡಳಿತದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಅಭಿಪ್ರಾಯಪಟ್ಟರು.

ಅಲ್ಲದೆ, ಯಾರ ಮೇಲೂ ಟೀಕೆ ಮಾಡಲು ಹೆಚ್ಚಿನ ಸಮಯವನ್ನು ವ್ಯಯಿಸಲಾರೆ. ಮುಂಬರುವ ಬಜೆಟ್ ಬಗ್ಗೆ ನಾನು ಗಮನ ಹರಿಸಬೇಕಾಗಿದೆ ಎಂದು ಮುಖ್ಯಮಂತ್ರಿಯವರು ನುಡಿದರು.

ಚಹಾಕೂಟಕ್ಕೆ ಗೈರು, ಸಮರ್ಥನೆ...
ರಾಜ್ಯದ ಇತಿಹಾಸದಲ್ಲಿಯೇ ಗಣರಾಜ್ಯೋತ್ಸವದಂದು ರಾಜ್ಯಪಾಲರು ಏರ್ಪಡಿಸುವ ಚಹಾಕೂಟ ಬಹಿಷ್ಕರಿಸಿದ ಮೊದಲ ಮುಖ್ಯಮಂತ್ರಿ ಎಂಬ ಅಪಖ್ಯಾತಿ ಯಡಿಯೂರಪ್ಪನವರಿಗೆ ಅಂಟಿಕೊಂಡಿದೆ. ಇಂದು ಅವರು ಚಹಾಕೂಟದಲ್ಲಿ ಪಾಲ್ಗೊಳ್ಳುವ ಬದಲು ಮೈಸೂರಿಗೆ ತೆರಳಿದ್ದಾರೆ.

ಸಂಪ್ರದಾಯದ ಪ್ರಕಾರ ಗಣರಾಜ್ಯೋತ್ಸವ ಸೇರಿದಂತೆ ರಾಷ್ಟ್ರೀಯ ವಿಶೇಷ ದಿನಗಳಂದು ಸಂಜೆ ರಾಜ್ಯಪಾಲರು ಚಹಾಕೂಟ ಏರ್ಪಡಿಸುತ್ತಾರೆ. ಇದಕ್ಕೆ ಮುಖ್ಯಮಂತ್ರಿ, ಸಂಪುಟ ಸಹೋದ್ಯೋಗಿಗಳು ಮತ್ತು ಶಾಸಕರನ್ನು ಆಹ್ವಾನಿಸಲಾಗುತ್ತದೆ.

ಆದರೆ ಈ ಬಾರಿ ಇದರಿಂದ ಮುಖ್ಯಮಂತ್ರಿ ತಪ್ಪಿಸಿಕೊಂಡಿದ್ದಾರೆ. ಇತ್ತೀಚಿನ ರಾಜಕೀಯ ಮೇಲಾಟಗಳ ಕಾರಣಗಳಿಂದಾಗಿ ಈ ನಿರ್ಧಾರಕ್ಕೆ ಮುಖ್ಯಮಂತ್ರಿ ಬಂದಿದ್ದಾರೆ.

ಆದರೆ ಯಡಿಯೂರಪ್ಪ ಮಾತ್ರ ಬೇರೆಯೇ ಕಾರಣ ನೀಡಿದ್ದಾರೆ. ಮೈಸೂರಿನ ಕಾರ್ಯಕ್ರಮ ಮೊದಲೇ ನಿಗದಿಯಾಗಿತ್ತು. ಇದು ಪುಣ್ಯದ ಕಾರ್ಯಕ್ರಮ. ಚಹಾಕೂಟಕ್ಕೆ ಬರಲಾಗುತ್ತಿಲ್ಲ ಎಂದು ನಾನು ಮುಂಚಿತವಾಗಿ ರಾಜ್ಯಪಾಲರಿಗೆ ತಿಳಿಸಿದ್ದೇನೆ ಎಂದು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ