ರಾಜ್ಯದ ಕಾರಾಗೃಹಗಳಲ್ಲಿರುವ ಸನ್ನಡತೆ ಹೊಂದಿದ ಕೈದಿಗಳನ್ನು ಕೂಡಲೇ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಹೋರಾಟ ನಡೆಸಲಾಗುವುದೆಂದು ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ.
ಕಳೆದ ನಾಲ್ಕು ವರ್ಷಗಳಿಂದ ರಾಜ್ಯ ಸರಕಾರ ಸನ್ನಡತೆ ಹೊಂದಿರುವ ಕೈದಿಗಳ ಬಿಡುಗಡೆಗೆ ಕ್ರಮ ಕೈಗೊಳ್ಳುತ್ತಿಲ್ಲ. ಉತ್ತಮ ನಡೆದ ಹೊಂದಿರುವ 600 ಕೈದಿಗಳು ಜೈಲಿನಲ್ಲಿ ನೋವು ಅನುಭವಿಸುತ್ತಾ ಕಣ್ಣೀರಿನಲ್ಲಿ ಬದುಕು ಸವೆಸುತ್ತಿದ್ದಾರೆ. ಕಳೆದ ವರ್ಷ ಬಂಧಿಖಾನೆ ಸಚಿವರು ಕೈದಿಗಳ ಬಿಡುಗಡೆಗೆ ಪ್ರಯತ್ನಿಸಿದ್ದರು. ರಾಜ್ಯಪಾಲರು ಅಡ್ಡಿಪಡಿಸಿದರು. ಕೇರಳ, ಆಂಧ್ರಪ್ರದೇಶ, ತಮಿಳುನಾಡು ರಾಜ್ಯ ಸರಕಾರ ಗಣರಾಜ್ಯೋತ್ಸವದಂದು ಸಾಕಷ್ಟು ಕೈದಿಗಳನ್ನು ಬಿಡುಗಡೆ ಮಾಡಿದೆ. ರಾಜ್ಯ ಸರಕಾರ ಈ ಬಗ್ಗೆ ಚಿಂತನೆ ನಡೆಸದಿರುವುದು ಖಂಡನೀಯ ಎಂದು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
ಬಂಧಿಖಾನೆ ಸಚಿವರು ಕೈದಿಗಳ ಬಿಡುಗಡೆಗೆ ಸಂಬಂಧಿಸಿದಂತೆ ಸಲ್ಲಿಸಿದ್ದ ಮನವಿಯನ್ನು ರಾಜ್ಯಪಾಲರು ಕೈದಿಗಳ ಮಾಹಿತಿ ಇಲ್ಲ ಎಂದು ತಿರಸ್ಕರಿಸಿದ್ದಾರೆ. ನಂತರ ರಾಜ್ಯ ಸರಕಾರ ಕೈದಿಗಳ ಮಾಹಿತಿ ನೀಡುವ ಗೋಜಿಗೆ ಹೋಗಿಲ್ಲ. ಸಮಿತಿಯೊಂದನ್ನು ರಚಿಸಿ ಕೈದಿಗಳನ್ನು ಬಿಡುಗಡೆ ಮಾಡಲು ಅವಕಾಶವಿದೆ ಎಂಬ ಪರಿಜ್ಞಾನ ಸರಕಾರಕ್ಕೆ ಇಲ್ಲವೇ? ಕಾಂಗ್ರೆಸ್ ಆಡಳಿತದ ಆಂಧ್ರಪ್ರದೇಶದಲ್ಲಿ 305 ಕೈದಿಗಳನ್ನು ಬಿಡುಗಡೆ ಮಾಡಲಾಗಿದೆ ಎಂಬ ಅರಿವು ರಾಜ್ಯಪಾಲರಿಗೆ ಇರಬೇಕು ಎಂದು ವಾಗ್ದಾಳಿ ನಡೆಸಿದರು.
ಶಬರಿಮಲೆಯಲ್ಲಿ ಕಾಲ್ತುಳಿತದಿಂದ ಮೃತಪಟ್ಟ ಕುಟುಂಬಕ್ಕೆ ಕೇರಳ ಸರಕಾರ 5 ಲಕ್ಷ ರೂ. ಪರಿಹಾರ ನೀಡಿದೆ. ರಾಜ್ಯ ಸರಕಾರ ಕೇವಲ 1 ಲಕ್ಷ ರೂ. ಮಾತ್ರ ನೀಡಿದೆ. ಈ ಮೊತ್ತವನ್ನು 5 ಲಕ್ಷಕ್ಕೆ ಏರಿಕೆ ಮಾಡಬೇಕು. ಮೃತರ ಕುಟುಂಬ ವರ್ಗದವರಿಗೆ ಉದ್ಯೋಗ ಕಲ್ಪಿಸಬೇಕು. ಮಕರ ಜ್ಯೋತಿಯ ಕುರಿತು ಅನಗತ್ಯ ವಿವಾದ ಹುಟ್ಟುಹಾಕುವುದು ಸರಿಯಲ್ಲ. ಮಕರ ಜ್ಯೋತಿಯ ಬಗ್ಗೆ ಮಾತನಾಡುವವರು ಜಮ್ಮುವಿನಲ್ಲಿರುವ ಹಜರತ್ ಬಾಲ್‌ನ ವಿಶ್ವಾಸರ್ಹತೆಯ ಕುರಿತು ಏಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.