ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಎಲ್ಲಾ ಅಕ್ರಮ ಬಯಲಿಗೆಳೆಯುವೆ-ಬೆದರಿಕೆಗೆ ಹೆದರಲ್ಲ: ಶೋಭಾ (Shobha karandlaje | Gas mafia | Threat call | BJP | Ration Card)
NRB
ಅಕ್ರಮ ಪಡಿತರ ಚೀಟಿ ಮತ್ತು ಗ್ಯಾಸ್ ಸಿಲಿಂಡರ್ ಮಾಫಿಯಾದ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾದ ಹಿನ್ನೆಲೆಯಲ್ಲಿ ತನಗೆ ಜೀವ ಬೆದರಿಕೆ ಕರೆ ಬಂದಿರೋದು ನಿಜ ಎಂದು ಇಂಧನ ಹಾಗೂ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವೆ ಶೋಭಾ ಕರಂದ್ಲಾಜೆ ಬುಧವಾರ ಖಚಿತಪಡಿಸಿದ್ದಾರೆ.

ಇಂತಹ ಬೆದರಿಕೆ ಕರೆಗಳಿಗೆ ಹೆದರುವ ಪ್ರಶ್ನೆಯೇ ಇಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲಾ ಅಕ್ರಮಗಳನ್ನು ಬಯಲಿಗೆಳೆಯುವೆ ಎಂದು ತಿಳಿಸಿದ್ದಾರೆ. ಅಲ್ಲದೇ ಬೆದರಿಕೆ ಕರೆ ಕುರಿತು ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಶೀಘ್ರದಲ್ಲೇ ದೂರು ದಾಖಲಿಸುವುದಾಗಿ ಹೇಳಿದರು.

ಅಡುಗೆ ಅನಿಲ ವಿತರಣೆಯಲ್ಲಿ ಭಾರಿ ಪ್ರಮಾಣದಲ್ಲಿ ಅವ್ಯವಹಾರ ನಡೆದಿರುವುದು ಇಲಾಖೆಯ ಗಮನಕ್ಕೆ ಬಂದಿದೆ. ಇದರಿಂದಾಗಿ ಸರಕಾರದ ಬೊಕ್ಕಸಕ್ಕೆ ಸುಮಾರು 150 ಕೋಟಿ ರೂಪಾಯಿ ನಷ್ಟ ಉಂಟಾಗುತ್ತಿದೆ. ಇದನ್ನು ತಡೆಯುವುದೇ ನಮ್ಮ ಗುರಿ. ಹಾಗಾಗಿ ಯಾವುದೇ ಮಾಫಿಯಾ ಶಕ್ತಿಗಳ ಬೆದರಿಕೆಗೆ ಜಗ್ಗುವುದಿಲ್ಲ ಎಂದು ತಿಳಿಸಿದ್ದಾರೆ.

ಇತ್ತೀಚೆಗೆ ಅನಾಮಧೇಯ ವ್ಯಕ್ತಿಯೊಬ್ಬ ಕರೆ ಮಾಡಿ,ಅಡುಗೆ ಅನಿಲಕ್ಕೆ ಸಂಬಂಧಿಸಿದಂತೆ ನೀವು ತೆಗೆದುಕೊಳ್ಳುತ್ತಿರುವ ಕಠಿಣ ಕ್ರಮದಿಂದ ನಮಗೆ ನಷ್ಟವುಂಟಾಗಲಿದೆ. ನಿಮ್ಮ ನಿರ್ಧಾರವನ್ನು ಕೈಬಿಡಿ, ಇಲ್ಲದಿದ್ದರೆ ಮಾಲೆಗಾಂವ್‌ನ ಹೆಚ್ಚುವರಿ ಜಿಲ್ಲಾಧಿಕಾರಿ ಸೋನಾವಾನೆಗೆ ಆದ ಗತಿ ನಿಮಗೂ ಆಗಲಿದೆ ಎಂದು ಬೆದರಿಕೆ ಹಾಕಿದ್ದ. ಅದಕ್ಕೆ ನಾನು ಸರಿ ಹಾಗೆ ಮಾಡು ಎಂದು ಹೇಳಿರುವುದಾಗಿ ಶೋಭಾ ವಿವರಿಸಿದ್ದಾರೆ.

ರಾಜ್ಯದಲ್ಲಿ ಇರುವ ಕುಟುಂಬಗಳ ಸಂಖ್ಯೆಗಿಂತ ಅಧಿಕವಾಗಿ ಪಡಿತರ ಚೀಟಿ ವಿತರಣೆಯಾಗಿದೆ. ಹಾಗಾದರೆ ಹೆಚ್ಚುವರಿ ಪಡಿತರ ಚೀಟಿ ಯಾರಲ್ಲಿ ಇವೆ. ಯಾರಿಗೆ ವಿತರಣೆಯಾಗಿದೆ ಎಂಬ ಬಗ್ಗೆ ಪರಿಶೀಲನೆ ನಡೆಸಬೇಕು. ಅದಕ್ಕಾಗಿ ಕಠಿಣ ಕ್ರಮ ಕೈಗೊಳ್ಳುವುದು ಖಚಿತ. ಇದಕ್ಕೆ ಯಾವುದೇ ಅಡ್ಡಿ ಬಂದರೂ ಹೆದರುವುದಿಲ್ಲ ಎಂದು ಅವರು ಪುನರುಚ್ಚರಿಸಿದ್ದಾರೆ.
ಸಂಬಂಧಿತ ಲೇಖನಗಳು