ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ರಾಜ್ಯದಲ್ಲಿ ಎಂಡೋಸಲ್ಫಾನ್‌ಗೆ ನಿಷೇಧ: ಸಂಪುಟ ನಿರ್ಧಾರ (Endosulfan | Karnataka bans | Yeddyurappa | cabinet meeting | V S Acharya)
ರಾಜ್ಯದಲ್ಲಿ ಎಂಡೋಸಲ್ಫಾನ್ ಕೀಟನಾಶಕ ಬಳಕೆಯನ್ನು ನಿಷೇಧಿಸುವಂತೆ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಸಭೆಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಡಾ.ವಿ.ಎಸ್.ಆಚಾರ್ಯ, ರಾಜ್ಯದಲ್ಲಿ 60 ದಿನಗಳ ಕಾಲ ಎಂಡೋಸಲ್ಫಾನ್ ಬಳಕೆ ನಿಷೇಧಿಸುವಂತೆ ಕೇಂದ್ರಕ್ಕೆ ಮನವಿ ಮಾಡಲು ತೀರ್ಮಾನಿಸಲಾಯಿತು ಎಂದರು.

1968ರ ವಿಷಜನ್ಯ ಕಾಯ್ದೆಯ 27ನೇ ಕಲಂನ 1ರ ಅನ್ವಯ ಎರಡು ತಿಂಗಳ ಕಾಲ ಕೀಟನಾಶಕ ಬಳಕೆ ನಿಷೇಧಿಸುವಂತೆ ಕೇಂದ್ರಕ್ಕೆ ಮನವಿ ಮಾಡಲು ಅವಕಾಶವಿದೆ. ರಾಜ್ಯ ಸಚಿವ ಸಂಪುಟದ ಶಿಫಾರಸ್ಸಿಗೆ ಕೇಂದ್ರ ಸರಕಾರ ಅನುಮೋದನೆ ನೀಡಲಿದೆ ಎಂಬ ವಿಶ್ವಾಸವಿದೆ. ಎರಡು ತಿಂಗಳ ನಂತರ ಮತ್ತೆ ನಿಷೇಧಕ್ಕೆ ಶಿಫಾರಸು ಮಾಡಲು ಅವಕಾಶವಿದೆ ಎಂದು ಅವರು ಹೇಳಿದರು.

ವಿಶೇಷವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಪುತ್ತೂರು, ಬಂಟ್ವಾಳ ಮತ್ತಿತರರ ಕಡೆಗಳ್ಲಿ ಕೀಟನಾಶಕ ಸಿಂಪಡಣೆಯಿಂದ ಹಾನಿ ಉಂಟಾಗಿದೆ. ಇದನ್ನು ತಡೆಯಲು ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.

ಕೇರಳ ಸರಕಾರ ಈಗಾಗಲೇ ಈ ರೀತಿಯ ತೀರ್ಮಾನ ಕೈಗೊಂಡಿದೆ. ಅದೇ ರೀತಿ ರಾಜ್ಯ ಸರಕಾರವೂ ಕೀಟನಾಶಕ ಬಳಕೆ ನಿಷೇಧಕ್ಕೆ ಮುಂದಾಗಿದೆ ಎಂದು ತಿಳಿಸಿದರು.

ಸಮವಸ್ತ್ರ ವಿತರಣೆಗೆ ಕ್ರಮ:
ವಿದ್ಯಾವಿಕಾಸ ಯೋಜನೆಯಡಿ ಶಾಲಾ ಮಕ್ಕಳಿಗೆ ಸಮವಸ್ತ್ರ ಪೂರೈಸಲು ಕೈಮಗ್ಗ ನಿಗಮಕ್ಕೆ ಮುಂಗಡವಾಗಿ ಒಟ್ಟು ವೆಚ್ಚದ ಶೇ.50ರಷ್ಟು ನೀಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಪ್ರತಿವರ್ಷ ಈ ಸಮವಸ್ತ್ರ ಬೆಲೆಯನ್ನು ಶೇ.10ರಷ್ಟು ಹೆಚ್ಚಿಸಬೇಕೆಂಬ ನಿಗಮದ ಬೇಡಿಕೆಗೆ ಒಪ್ಪಿಗೆ ಸೂಚಿಸಲಾಗಿದೆ ಎಂದರು.

ಕರಡು ಶಾಸನಕ್ಕೆ ಒಪ್ಪಿಗೆ:
ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಮುಜರಾಯಿ ಕಾಯ್ದೆಯ 25ನೇ ವಿಧಿಗೆ ತಿದ್ದುಪಡಿ ತರುವ ಕರಡು ಶಾಸನಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುವ ದೇವಸ್ಥಾನಗಳ ಆಡಳಿತ ಮಂಡಳಿಗೆ ನೇಮಕ ಮಾಡುವ ಸಂಬಂಧ ಈ ತಿದ್ದುಪಡಿ ತರಲು ತೀರ್ಮಾನಿಸಲಾಗಿದೆ ಎಂದರು. ಮುಂದಿನ ಅಧಿವೇಶನದಲ್ಲಿ ಈ ತಿದ್ದುಪಡಿ ಮಸೂದೆಯನ್ನು ಮಂಡಿಸಿ ಒಪ್ಪಿಗೆ ಪಡೆಯಲಾಗುವುದು ಎಂದು ತಿಳಿಸಿದರು.

ಶರದ್ ಪವರ್ ಎಂಡೋಸಲ್ಫಾನ್ ಪರ -ಶೋಭ
ಎಂಡೋಸಲ್ಫಾನ್ ಕೀಟನಾಶಕ ಬಳಕೆಯನ್ನು ನಿಷೇಧಿಸಲು ಕೇಂದ್ರ ಸರಕಾರ ಹಿಂದೇಟು ಹಾಕುತ್ತಿದೆ ಎಂದು ಇಂಧನ ಮತ್ತು ಆಹಾರ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.

ಎಂಡೋಸಲ್ಫಾನ್ ಲಾಬಿಗೆ ಮಣಿದಿರುವ ಕೇಂದ್ರ ಕೃಷಿ ಸಚಿವ ಶರದ್ ಪವಾರ್ ವಿಷಕಾರಕ ಹಾಗೂ ಮಾರಕ ಔಷಧಿಗಳನ್ನು ನಿಷೇಧಿಸಲು ಹಿಂಜರಿಯುತ್ತಿದ್ದಾರೆ ಎಂದು ದೂರಿದರು. ಜಗತ್ತಿನ ಮುಂದುವರಿದ ದೇಶಗಳು ಎಂಡೋಸಲ್ಫಾನ್ ಅನ್ನು ನಿಷೇಧಿಸಿವೆ. ಆದರೆ ಕೇಂದ್ರ ಸರಕಾರ ಈ ವಿಚಾರದಲ್ಲಿ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ ಎಂದು ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದರು.
ಇವನ್ನೂ ಓದಿ