ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬಿಜೆಪಿ ಮುಸ್ಲಿಂ ವಿರೋಧಿಯಲ್ಲ: ಸಮಾವೇಶದಲ್ಲಿ ಗಡ್ಕರಿ (Nitin Gadkari | BJP | Karnataka | BS Yeddyurappa)
ದಕ್ಷಿಣ ಭಾರತದ ಮೊದಲ ಬಿಜೆಪಿ ಸರಕಾರವು ಸಾಕಷ್ಟು ಗಂಡಾಂತರಗಳಿಂದ ಪಾರಾಗಿ ಹಾಗೂ ಹೀಗೂ ಸಾವಿರ ದಿನಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಮತಗಟ್ಟೆ ಕಾರ್ಯಕರ್ತರ ಸಮ್ಮೇಳನವನ್ನು ಉದ್ಘಾಟಿಸಿದ ಮಾತನಾಡಿದ ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿ, ನಮ್ಮ ಪಕ್ಷವು ಮುಸ್ಲಿಂ ವಿರೋಧಿಯಲ್ಲ ಎಂದು ಸ್ಪಷ್ಟಪಡಿಸಿದರು.

ಬಂಡಾಯ, ಪ್ರತಿಪಕ್ಷಗಳ ಕಿರಿಕಿರಿ, ಸರಣಿ ಭ್ರಷ್ಟಾಚಾರ ಆರೋಪಗಳು, ನಾಯಕತ್ವ ಬದಲಾವಣೆ ಪ್ರಶ್ನೆ, ಮಧ್ಯಂತರ ಚುನಾವಣೆ ಸುದ್ದಿ ಮುಂತಾದುವುಗಳಿಂದ ಎರಡು ಮುಕ್ಕಾಲು ವರ್ಷಗಳನ್ನು ಕಳೆದಿರುವ ಬಿಜೆಪಿ, ತನ್ನದೇ ಕಾರ್ಯಕರ್ತರನ್ನು ಅಭಿನಂದಿಸಲು ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್ ಸಮಾವೇಶವನ್ನು ಆಯೋಜಿಸಿತ್ತು.

ಈ 'ಮತಗಟ್ಟೆ ಕಾರ್ಯಕರ್ತರ ಸಮಾವೇಶ'ವನ್ನು ಉದ್ಘಾಟಿಸಿ ಮಾತನಾಡಿದ ಗಡ್ಕರಿ, ಪ್ರತಿಪಕ್ಷಗಳು, ರಾಜ್ಯಪಾಲರು, ಕೇಂದ್ರ ಸರಕಾರ, ನೆಹರೂ ಕುಟುಂಬ ಹೀಗೆ ಪ್ರತಿಯೊಂದನ್ನು ಬೆಟ್ಟು ಮಾಡಿ ತೋರಿಸಿ ವಾಕ್ ಪ್ರಹಾರ ಮಾಡಿದರು.

ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷಗಳು ಯತ್ನಿಸುತ್ತಿವೆ. ಇದಕ್ಕೆ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಮೂಲಕ ತಂತ್ರಗಾರಿಕೆ ಮಾಡಿಸಲಾಗುತ್ತಿದೆ. ಅಭಿವೃದ್ಧಿ ಸಹಿಸಲು ಸಾಧ್ಯವಾಗದ ಕಾಂಗ್ರೆಸ್ ಹೀಗೆಲ್ಲ ಮಾಡುತ್ತಿದೆ ಎಂದು ಗಡ್ಕರಿ ಆರೋಪಿಸಿದರು.

2014ರ ಮಹಾ ಚುನಾವಣೆಯಲ್ಲಿ ಕೇಂದ್ರದಲ್ಲಿ ಎನ್‌ಡಿಎ ಮೈತ್ರಿಕೂಟವು ಮರಳಿ ಅಧಿಕಾರಕ್ಕೆ ಬರುವುದು ಖಚಿತ ಎಂದು ಭವಿಷ್ಯ ನುಡಿದ ಅವರು, ಯುಪಿಎ ಸರಕಾರದ ವೈಫಲ್ಯಗಳತ್ತ ಗಮನ ಸೆಳೆದರು. ದೇಶದ ಮುಂದೆ ದೊಡ್ಡ ಸಂಕಷ್ಟವಿದೆ. ನಮ್ಮ ಸುರಕ್ಷತೆಯೇ ಖಾತ್ರಿಯಿಲ್ಲ. ನಕ್ಸಲರ ಆಟೋಪಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಪ್ರತಿ ಹಂತದಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ ಎಂದರು.

ಭ್ರಷ್ಟಾಚಾರ ಆರೋಪಗಳ ಹೊರತಾಗಿಯೂ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರವು ಸಾವಿರ ದಿನಗಳಲ್ಲಿ ಮಾಡಿರುವ ಸಾಧನೆಗೆ ಗಡ್ಕರಿ ಮೆಚ್ಚುಗೆ ವ್ಯಕ್ತಪಡಿಸಿದರು.

ಶೇ.1ರ ಬಡ್ಡಿದರದಲ್ಲಿ ರೈತರಿಗೆ ಸಾಲ ನೀಡಲು ನಿರ್ಧರಿಸಿರುವುದು, ದೇಶದಲ್ಲೇ ಮೊತ್ತ ಮೊದಲ ಬಾರಿಗೆ ಕೃಷಿ ಬಜೆಟ್ ಮಂಡಿಸಲು ಮುಂದಾಗಿರುವುದು ಶ್ಲಾಘನೀಯ ಎಂದು ನುಡಿದರು.

ಕಾಂಗ್ರೆಸ್ ಅಧ್ಯಕ್ಷಗಾದಿಯ ಕುರಿತ ವಿವಾದವನ್ನು ಮತ್ತೊಮ್ಮೆ ಕೆದಕಿದ ಗಡ್ಕರಿ, ಅದು ಗಾಂಧಿ ಕುಟುಂಬಕ್ಕೆ ಮೀಸಲಿಟ್ಟ ಸ್ಥಾನ ಎಂದು ಲೇವಡಿ ಮಾಡಿದರು.

ಲಕ್ಷಾಂತರ ಬಿಜೆಪಿ ಕಾರ್ಯಕರ್ತರು ನೆರೆದಿದ್ದ ಈ ಸಮಾವೇಶದಲ್ಲಿ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ, ಅನಂತ್ ಕುಮಾರ್, ಸದಾನಂದ ಗೌಡ, ರಾಜ್ಯ ಸಚಿವರು ಸೇರಿದಂತೆ ನೂರಾರು ನಾಯಕರು ಭಾಗವಹಿಸಿದ್ದರು.

ಗಡ್ಕರಿ ಕಾರಿಗೆ ಮುತ್ತಿಗೆ...
ಸಮಾವೇಶಕ್ಕೆಂದು ಬೆಂಗಳೂರಿಗೆ ಗಡ್ಕರಿ ಬಂದಿಳಿಯುತ್ತಿರುವುದನ್ನೇ ಕಾಯುತ್ತಿದ್ದ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಅವರ ಕಾರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.

ರಾಜ್ಯಸಭೆಗೆ ಹೇಮಾಮಾಲಿನಿಯವರನ್ನು ಆಯ್ಕೆಗೊಳಿಸಿರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಕರವೇ, ಕರ್ನಾಟಕದ ಕಲಾವಿದರಿಗೆ ಅವಕಾಶ ಕೊಡಬೇಕು ಎಂದು ಆಗ್ರಹಿಸಿತು.

ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಗಡ್ಕರಿ ಅವರಿಗೆ ಆರಂಭದಲ್ಲಿ ಕಪ್ಪುಬಾವುಟ ಪ್ರದರ್ಶಿಸಿದ ಕಾರ್ಯಕರ್ತರು, ನಂತರ ಮುತ್ತಿಗೆ ಹಾಕಲು ಯತ್ನಿಸಿದರು. ಈ ಸಂದರ್ಭದಲ್ಲಿ 20ಕ್ಕೂ ಹೆಚ್ಚು ಕರವೇ ಕಾರ್ಯಕರ್ತರನ್ನು ಬಂಧಿಸಲಾಯಿತು.
ಇವನ್ನೂ ಓದಿ