ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಮಾನ ಮರ್ಯಾದೆ ಇದೆಯೇನ್ರಿ?: ಸಿಎಂಗೆ ಸಿದ್ದು (Sidharamaih | Congress | Mysore | BS Yeddyurappa)
ರಾಜ್ಯ ಬಿಜೆಪಿ ಸರಕಾರ ಮತ್ತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಈಗಲಾದರೂ ರಾಜೀನಾಮೆ ಕೊಟ್ಟು ಅಧಿಕಾರ ತ್ಯಜಿಸುವಂತೆ ಆಗ್ರಹಿಸಿದರು.

ಮೈಸೂರಿನಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ಕಾರ್ಯಕರ್ತರ ಸಮಾವೇಶದಲ್ಲಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಮುಂತಾದ ನಾಯಕರು ಮುಖ್ಯಮಂತ್ರಿಯನ್ನೇ ಗುರಿಯಾಗಿಟ್ಟುಕೊಂಡು ವಾಗ್ದಾಳಿ ನಡೆಸಿದರು.

ನನಗೆ ಯಡಿಯೂರಪ್ಪ ಮೇಲೆ ವೈಯಕ್ತಿಕ ದ್ವೇಷವಿಲ್ಲ. ಆದರೆ ಮುಖ್ಯಮಂತ್ರಿ ಮತ್ತು ಅವರ ಮಂತ್ರಿ ಮಂಡಲದ ಸದಸ್ಯರು ರಾಜ್ಯವನ್ನು ಲೂಟಿ ಮಾಡುತ್ತಿದ್ದಾರೆ. ಅದನ್ನು ತಡೆಯುವುದು ನಮ್ಮ ಕರ್ತವ್ಯ. ಅಧಿಕೃತ ವಿರೋಧ ಪಕ್ಷವಾಗಿ, ರಾಷ್ಟ್ರೀಯ ಪಕ್ಷವಾಗಿ ನಾವು ಸುಮ್ಮನೆ ಕೂರಲು ಸಾಧ್ಯವಿಲ್ಲ. ನೀವು ಅಧಿಕಾರದಿಂದ ತೊಲಗುವವರೆಗೆ ಸುಮ್ಮನಿರುವುದಿಲ್ಲ ಎಂದು ಏಕವಚನದಲ್ಲೇ ಸಿದ್ದರಾಮಯ್ಯ ಗುಡುಗಿದರು.

ಮುಖ್ಯಮಂತ್ರಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ರಾಜ್ಯಪಾಲರು ಅನುಮತಿ ನೀಡಿರುವುದನ್ನು ಮತ್ತೆ ಸಮರ್ಥಿಸಿಕೊಂಡ ಅವರು, ಯಡಿಯೂರಪ್ಪ ಭ್ರಷ್ಟಾಚಾರ ನಡೆಸಿರುವುದು ಖಚಿತವಾದ ನಂತರವೇ ಅನುಮತಿ ನೀಡಲಾಗಿದೆ; ಈಗ ಯಡಿಯೂರಪ್ಪಗೆ ನಡುಕ ಹುಟ್ಟಿಕೊಂಡಿದೆ. ಅದೇ ಕಾರಣಕ್ಕೆ ಕೇಂದ್ರ ಬಜೆಟ್ ಮಂಡಿಸುವ ಮೊದಲೇ ಬಜೆಟಿಗೆ ಹೊರಟಿದ್ದಾರೆ ಎಂದು ಟೀಕಿಸಿದರು.

ಈ ಪ್ರಕರಣ ಸಂಬಂಧ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಯವರು ಮ್ಯಾಜಿಸ್ಟ್ಟೇಟ್ ಮುಂದೆ ಹಾಜರಾಗಬೇಕಾಗುತ್ತದೆ. ಇಂತಹ ದುರ್ಗತಿ ಯಾವ ಮುಖ್ಯಮಂತ್ರಿಗೂ ಬಂದಿಲ್ಲ. ನಿಮಗೆ ಮಾನ ಮರ್ಯಾದೆ ಇದೆಯೇನ್ರೀ? ಈಗಲಾದರೂ ರಾಜೀನಾಮೆ ಕೊಟ್ಟು ಮನೆಗೆ ಹೋಗಿ. ಇಲ್ಲದೇ ಇದ್ದರೆ ಸಂಪೂರ್ಣ ಮಾನ ಮರ್ಯಾದೆ ಹರಾಜಾಗುತ್ತದೆ ಎಂದರು.

ಮುಖ್ಯಮಂತ್ರಿ ರಾಜೀನಾಮೆಯನ್ನು ಹೊರತುಪಡಿಸಿದ ಯಾವುದೇ ಕ್ರಮಕ್ಕೆ ಕಾಂಗ್ರೆಸ್ ಬಗ್ಗುವುದಿಲ್ಲ ಎಂದು ಸ್ಪಷ್ಟಪಡಿಸಿದ ಸಿದ್ದರಾಮಯ್ಯ, 'ಸರಕಾರ ಶಾಶ್ವತವಲ್ಲ. ರಾಜ್ಯ ಉಳಿಯುವ ಸಲುವಾಗಿ ನೀವು ಬಿಟ್ಟು ಹೋಗಿ, ಇದಕ್ಕೋಸ್ಕರ ನಮ್ಮ ಹೋರಾಟ. ಸಮಯ ಬಂದಾಗ ಕಾರ್ಯಕರ್ತರು ಎದ್ದೇಳಬೇಕು. ಹೋರಾಟಕ್ಕೆ ತಯಾರಾಗಬೇಕು' ಎಂದು ನುಡಿದರು.

ಯಡಿಯೂರಪ್ಪನವರು ಬಜೆಟ್ ಮಂಡಿಸಿದ ನಂತರ ವಿಧಾನಸಭೆಯನ್ನು ವಿಸರ್ಜಿಸಿ ಚುನಾವಣೆಗೆ ಹೋಗುವ ತಂತ್ರಗಾರಿಕೆಯಲ್ಲಿದ್ದಾರೆ. ಹಾಗಾಗಿ ಎಲ್ಲರೂ ಚುನಾವಣೆಗೆ ಸಿದ್ಧತೆ ನಡೆಸಬೇಕು. ಹೋರಾಟಕ್ಕೆ ತಯಾರಿಯಾಗಬೇಕು. ಮತದಾರರು ಯಾವುದೇ ಕಾರಣಕ್ಕೂ ದುಡ್ಡಿನ ಆಸೆಗೆ ಬಲಿಯಾಗಬೇಡಿ. ಮತ್ತೆ ಯಡಿಯೂರಪ್ಪ ಅಧಿಕಾರಕ್ಕೆ ಬಂದಲ್ಲಿ ಕರ್ನಾಟಕ ಸಂಪೂರ್ಣವಾಗಿ ನಾಶವಾಗಿ ಹೋಗುತ್ತದೆ ಎಂದು ಭವಿಷ್ಯ ಹೇಳಿದರು.

ಸಾವಿರ ದಿನಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಬಿಜೆಪಿ ನಡೆಸಿದ ಮತಗಟ್ಟೆ ಕಾರ್ಯಕರ್ತರ ಸಮಾವೇಶವನ್ನು ಕೂಡ ಸಿದ್ದರಾಮಯ್ಯ ಟೀಕಿಸಿದರು.

ಯಾವುದೇ ಸಾಧನೆಯನ್ನು ಮಾಡದ ಸರಕಾರಕ್ಕೆ ಸಮಾವೇಶ ಯಾಕೆ? ವಿದ್ಯುತ್ ಇಲ್ಲ, ಅಕ್ಕಿ ಇಲ್ಲ, ರಸ್ತೆ ಇಲ್ಲ. ಸರಕಾರದ ಬೊಕ್ಕಸದಲ್ಲಿ ಹಣವಿಲ್ಲ. ರೈತರಿಗೆ ನೆಮ್ಮದಿಯಿಲ್ಲ. ನಿಮ್ಮಿಂದಾಗಿ ರೈತರು ರೌಡಿಗಳೆಂಬ ಪಟ್ಟಕ್ಕೆ ಏರುತ್ತಿದ್ದಾರೆ. ಕೇಂದ್ರ ಸರಕಾರ ಕೊಡುವ ದುಡ್ಡನ್ನು ಕೂಡ ಖರ್ಚು ಮಾಡಲು ಯೋಗ್ಯತೆಯಿಲ್ಲದ ಸರಕಾರದ ಎಂದು ದೂಷಿಸಿದರು.
ಇವನ್ನೂ ಓದಿ