ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಯಡಿಯೂರಪ್ಪ ಒಂದು ತೀರ, ಅನಂತ್ ಇನ್ನೊಂದು ತೀರ! (BS Yeddyurappa | Ananth Kumar | BJP | Karnataka)
PR
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಬಿಜೆಪಿ ರಾಷ್ಟ್ರೀಯ ನಾಯಕ ಅನಂತ್ ಕುಮಾರ್ ನಡುವಿನ ಗಳಸ್ಯ ಕಂಠಸ್ಯ 'ಸ್ನೇಹ' ಎಲ್ಲರಿಗೂ ಗೊತ್ತಿರುವಂತದ್ದೇ. ಇತ್ತೀಚೆಗಷ್ಟೇ ಹೈಕಮಾಂಡ್ ಕೆಂಗಣ್ಣಿಗೂ ಗುರಿಯಾಗಿದ್ದ ವಿಚಾರವಿದು. ನಿನ್ನೆ ಬೆಂಗಳೂರಿನಲ್ಲಿ ನಡೆದ ಸಮಾವೇಶದಲ್ಲಿ ಕೂಡ ಇದು ಸ್ಪಷ್ಟವಾಗಿ ಗೋಚರಿಸಿತು.

ಕರ್ನಾಟಕ ಬಿಜೆಪಿಯಲ್ಲಿ ಯಡಿಯೂರಪ್ಪನವರೇ ಸೂಪರ್ ಪವರ್. ಇದನ್ನು ಕೇಂದ್ರದ ನಾಯಕರು ಕೂಡ ಒಪ್ಪಿಕೊಂಡು ಶರಣಾಗಿರುವುದು ಗೊತ್ತೇ ಇದೆ. ಅನಂತ್ ಕುಮಾರ್ ಅವರದ್ದು ದೆಹಲಿ ರಾಜಕೀಯ. ಹಾಗೆಂದು ರಾಜ್ಯದ ಬಿಜೆಪಿ ಉಸ್ತುವಾರಿಯನ್ನು ಸಂಪೂರ್ಣವಾಗಿ ಬಿಟ್ಟು ಬಿಡಲು ಅವರಿಗೆ ಮನಸ್ಸಿಲ್ಲ. ಹಿಡಿತ ಸಾಧಿಸಲು ಯತ್ನಿಸುತ್ತಲೇ ಇರುತ್ತಾರೆ.

ಇದೇ ಕಾರಣದಿಂದ ಇಬ್ಬರ ನಡುವೆ ಆಗಾಗ ಅಸಮಾಧಾನಗಳು ಭುಗಿಲೇಳುತ್ತವೆ. ಕೆಲವೊಮ್ಮೆ ಅದು ಬಹಿರಂಗವಾಗಿಯೇ ನಡೆದು ಹೋಗುತ್ತದೆ.

ಬೆಂಗಳೂರಿನಲ್ಲಿ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಯಾವುದೇ ರೀತಿಯ ಜಟಾಪಟಿಗಳೇನೂ ನಡೆದಿಲ್ಲ. ಆದರೆ ಇಬ್ಬರೂ ಸಹ 'ನಾನೊಂದು ತೀರ ನೀನೊಂದು ತೀರ' ಎಂಬಂತೆ ಮುಖ ಕಿವುಚಿಕೊಂಡಿದ್ದರು. ಮೂರು ಗಂಟೆಗಳಿಗೂ ಹೆಚ್ಚು ಕಾಲ ನಡೆದ ಸಮಾವೇಶದಲ್ಲಿ ಪರಸ್ಪರ ಒಂದೇ ಒಂದು ಮಾತು ಅವರ ನಡುವೆ ಹರಿದಾಡಲಿಲ್ಲ.

ಮಾತು ಬಿಡಿ, ಕನಿಷ್ಠ ಮುಖ ನೋಡಿ ನಗುವ ಗೋಚಿಗೂ ಹೋಗಲಿಲ್ಲ. ಪಕ್ಷದ ಒಗ್ಗಟ್ಟನ್ನು ಬಿಂಬಿಸಲು, ಸಾರಲು ಕರೆಯಲಾಗಿದ್ದ ಸಮಾವೇಶದಲ್ಲಿ ನಾಯಕರ ಒಗ್ಗಟ್ಟಿನ ಗುಟ್ಟು ರಟ್ಟಾಯಿತು. ಬಿಜೆಪಿಯ ನಾಯಕತ್ವ ಎಷ್ಟು ಪ್ರಬಲವಾಗಿದೆ ಎನ್ನುವುದು ಮತ್ತೊಮ್ಮೆ ಬಯಲಾಯಿತು.

ಮುಖ್ಯಮಂತ್ರಿ ಯಡಿಯೂರಪ್ಪ ತನ್ನ ಮಾತಿನ ಆರಂಭದಲ್ಲಿ ಅನಂತ್ ಕುಮಾರ್ ಅವರ ಹೆಸರನ್ನು ಒಮ್ಮೆ ಪ್ರಸ್ತಾಪಿಸಿದ್ದರು. ಅನಂತ್ ಕುಮಾರ್ ರಾಜ್ಯ ಸರಕಾರವನ್ನು ಸಮರ್ಥಿಸಿಕೊಳ್ಳುವ ನಿಟ್ಟಿನಲ್ಲಿ ಯಡಿಯೂರಪ್ಪನವರ ಹೆಸರನ್ನು ಒಂದೆರಡು ಬಾರಿ ಉಲ್ಲೇಖಿಸಿದರು. ಈಶ್ವರಪ್ಪ ಕೂಡ ಸಿಎಂ ಪ್ರಸ್ತಾಪದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಲಿಲ್ಲ!

ಮೊನ್ನೆ ಮೊನ್ನೆ ಕಿತ್ತಾಡಿಕೊಂಡದ್ದು ಗೊತ್ತೇ?
ಇತ್ತೀಚೆಗಷ್ಟೇ, ಅಂದರೆ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಮುಖ್ಯಮಂತ್ರಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಅತ್ತ ಅನುಮತಿ ನೀಡುತ್ತಿದ್ದಂತೆ ಇತ್ತ ಬಿಜೆಪಿ ನಾಯಕರ ನಡುವೆ ಒಂದು ಜಟಾಪಟಿಯೇ ನಡೆದು ಹೋಗಿತ್ತು. ಇದು ತೀವ್ರ ವಿವಾದಕ್ಕೂ ಕಾರಣವಾಗಿತ್ತು.

ಘಟನೆ ನಡೆದದ್ದು ಜನವರಿ 21ರಂದು. ರಾಜ್ಯಪಾಲರು ಕಾನೂನು ಕ್ರಮಕ್ಕೆ ಅನುಮತಿ ನೀಡುತ್ತಿದ್ದಂತೆ ಯಡಿಯೂರಪ್ಪ ಸಿಕ್ಕಾಪಟ್ಟೆ ಕೋಪಗೊಂಡಿದ್ದರು. ಸಿಟ್ಟಿನಲ್ಲಿ ಏನೋ ಮಾತನಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಅನಂತ್ ಕುಮಾರ್ ಮಧ್ಯ ಬಾಯಿ ಹಾಕಿದ್ದರು.

ಇದರಿಂದ ಕೆಂಡಾಮಂಡಲರಾದ ಮುಖ್ಯಮಂತ್ರಿ ಅನಂತ್ ಕುಮಾರ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಒಂದು ಅರ್ಥದಲ್ಲಿ ಜಾಡಿಸಿಯೇ ಬಿಟ್ಟರು. ಇದರಿಂದ ತೀವ್ರ ಮುಖಭಂಗಕ್ಕೀಡಾದ ಅನಂತ್ ಮೆಲ್ಲನೆ ಅಲ್ಲಿಂದ ಜಾಗ ಖಾಲಿ ಮಾಡಿದ್ದರು.

ಇಷ್ಟೆಲ್ಲ ನಡೆಯುವ ಹೊತ್ತಿನಲ್ಲಿ ಈಶ್ವರಪ್ಪ ಮತ್ತು ಧರ್ಮೇಂದ್ರ ಪ್ರಧಾನ ಜತೆಗಿದ್ದರು. ಸಹಜವಾಗಿಯೇ ದೆಹಲಿ ನಾಯಕರಿಗೆ ದೂರು ಹೋಗಿತ್ತು. ಅಲ್ಲಿ ನಂತರ ರಾಜೀ ಸಂಧಾನವೂ ನಡೆಯಿತು. ಪರಸ್ಪರ ಕೈ ಕುಲುಕುವುದರೊಂದಿಗೆ ಹಳೆಯದನ್ನು ಮರೆಯುವ ಶಪಥವನ್ನು ಉಭಯ ನಾಯಕರು ಮಾಡಿದರು.

ಆದರೆ ಸಮಾವೇಶದಲ್ಲಿ ಮತ್ತೆ ಒಂದಾಗಿರುವುದು ಮಾತ್ರ ಸ್ಪಷ್ಟವಾಗಲಿಲ್ಲ.
ಇವನ್ನೂ ಓದಿ