ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಮಾಜಿ ಸಿಎಂ ಕುಮಾರಣ್ಣನ ಸೈಟ್ ಹಗರಣ ಬಯಲಿಗೆ (HD Kumaraswamy | JDS | Karnataka | BJ Puttaswamy)
ಬಿಜೆಪಿ ಸರಕಾರ ಮತ್ತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಸ್ವಜನ ಪಕ್ಷಪಾತ ಮತ್ತು ಭೂ ಹಗರಣಗಳ ಆರೋಪ ಮಾಡಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಇದೀಗ ತಾನೇ ತೋಡಿಕೊಂಡ ಗುಂಡಿಯಲ್ಲಿ ಬಿದ್ದಿದ್ದಾರೆ. ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನಡೆದ ಸ್ವಜನ ಪಕ್ಷಪಾತವೀಗ ಬಯಲಾಗಿದೆ.

ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 'ಜಿ' ವರ್ಗದ ಬಿಡಿಎ ಸೈಟುಗಳನ್ನು ಅಕ್ರಮವಾಗಿ ತನ್ನ ಅತ್ತೆ ಸೇರಿದಂತೆ ಒಂಬತ್ತು ಸಂಬಂಧಿಕರಿಗೆ ಹಂಚಿದ್ದರು ಎಂದು ಪತ್ರಿಕಾಗೋಷ್ಠಿಯಲ್ಲಿ ದಾಖಲೆ ಬಿಡುಗಡೆ ಮಾಡಿರುವ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಬಿ.ಜೆ. ಪುಟ್ಟಸ್ವಾಮಿ ಆರೋಪಿಸಿದ್ದಾರೆ.

'ತಮ್ಮ ಅತ್ತೆ ಎಸ್. ವಿಮಲಾ (ಅನಿತಾ ಕುಮಾರಸ್ವಾಮಿ ತಾಯಿ) ಮತ್ತು ದೇವೇಗೌಡರ ಸಹೋದರಿ ರಾಧಮ್ಮ ಅವರಿಗೆ ಒಂದೇ ದಿನ ಬೆಂಗಳೂರಿನ ಎಚ್ಎಸ್ಆರ್ ಬಡವಾಣೆಯಲ್ಲಿ ಮುಖ್ಯಮಂತ್ರಿಗಳ ವಿವೇಚನಾ ಕೋಟಾದಲ್ಲಿ 50x80 ನಿವೇಶನ ಮಂಜೂರು ಮಾಡಿದ್ದರು

ಕುಮಾರಸ್ವಾಮಿಯವರು ಸೈಟ್ ನೀಡುವ ಹೊತ್ತಿಗೆ ವಿಮಲಾ ಅವರು ಜೆ.ಪಿ. ನಗರದಲ್ಲಿ ಒಂದು ಸ್ವಂತ ಮನೆ ಹೊಂದಿದ್ದರು. ಆದರೂ ತಮ್ಮ ಬಳಿ ಯಾವುದೇ ಸ್ಥಿರಾಸ್ಥಿ ಇಲ್ಲ ಎಂದು ಅವರು ಬಿಡಿಎಗೆ ಪ್ರಮಾಣ ಪತ್ರ ಸಲ್ಲಿಸಿದ್ದರು. ಆ ಮೂಲಕ ಸತ್ಯ ವಿಚಾರವನ್ನು ಮರೆ ಮಾಚಲಾಗಿತ್ತು.

ಕುಮಾರಸ್ವಾಮಿ ಸೋದರತ್ತೆ ರಾಧಮ್ಮ ಸೈಟು ಪಡೆಯಲು ನೀಡಿರುವ ವಿಳಾಸ ಮೈಸೂರಿನದ್ದು. ಆದರೆ, ಕಳೆದ ಬೆಂಗಳೂರಿನಲ್ಲಿ 15 ವರ್ಷಗಳಿಂದ ವಾಸವಿರುವುದಾಗಿ ಹೇಳಿಕೊಂಡಿದ್ದರು.

ಇವಿಷ್ಟೇ ಅಲ್ಲದೆ, ಕುಮಾರಸ್ವಾಮಿ ತನ್ನ ಸಂಬಂಧಿ ರಾಜಶೇಖರ್ ಅವರಿಗೆ ಕೆಎಂಆರ್‌ಸಿಎಲ್ ಮೊದಲ ಹಂತ ಮತ್ತು ಬಿಟಿಎಂ ಲೇಔಟ್‌ನಲ್ಲಿ ಎರಡು ನಿವೇಶನಗಳನ್ನು ಮಂಜೂರು ಮಾಡಿದ್ದರು.

ಎಚ್. ವಿಶ್ವನಾಥ್, ಅನಂತ ರಾಮೇಗೌಡ, ಎಂ.ಕೆ. ಸುಧಾ, ಎನ್.ಆರ್. ಲೋಕೇಶ್, ಕೆ. ಸರಸ್ವತಿ (ರಾಜಶೇಖರ ಅವರ ಸಹೋದರಿ), ಸಹಾಯಕ ರತ್ನಾಕರ ಎಂಬವರಿಗೆ ಜಿ ಕೆಟಗರಿಯಲ್ಲಿ ಬಿಡಿಎ ನಿವೇಶನ ಮಂಜೂರು ಮಾಡಲಾಗಿತ್ತು. ಇವೆಲ್ಲವನ್ನೂ ಮಾಡಿದ್ದು ಕುಮಾರಸ್ವಾಮಿ' ಎಂದು ಪುಟ್ಟಸ್ವಾಮಿ ಆರೋಪಿಸಿದರು.

ಇವುಗಳಲ್ಲಿ ಬಹುತೇಕ ನಿವೇಶನಗಳು ಜತೆಯಾಗಿಯೇ ಇವೆ ಮತ್ತು ಹೆಸರುಗಳನ್ನು ಹೊರತುಪಡಿಸಿದರೆ, ಅರ್ಜಿ ನಮೂನೆಗಳು ಬಹುತೇಕ ಒಂದೇ ರೀತಿಯಾಗಿವೆ. ಹಾಗಾಗಿ ಇದು ವ್ಯವಸ್ಥಿತವಾಗಿ ನಡೆದಿರುವ ಸ್ವಜನ ಪಕ್ಷಪಾತ ಎಂದಿರುವ ಪುಟ್ಟಸ್ವಾಮಿ, ಇವೆಲ್ಲವನ್ನೂ ತನಿಖೆ ನಡೆಸುವಂತೆ ಸರಕಾರವನ್ನು ಒತ್ತಾಯಿಸಿದರು.

ಕುಮಾರಸ್ವಾಮಿ ಅರೆಹುಚ್ಚ...
ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿರುವ ಕುಮಾರಸ್ವಾಮಿ ಅರೆಹುಚ್ಚರಂತೆ ಮಾತನಾಡುತ್ತಿದ್ದಾರೆ. ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಹಾಗಾಗಿಯೇ ಆಧಾರ ರಹಿತ ಆಪಾದನೆಗಳು ಬರುತ್ತಿವೆ ಎಂದು ಪುಟ್ಟಸ್ವಾಮಿ ಕಿಡಿ ಕಾರಿದರು.

ಮುಖ್ಯಮಂತ್ರಿ ವಿರುದ್ಧ ಬಂದಿರುವುದು ಆರೋಪ ಮಾತ್ರ. ಇದುವರೆಗೂ ಸಾಬೀತಾಗಿಲ್ಲ. ಪ್ರಕರಣ ನ್ಯಾಯಾಲಯದಲ್ಲಿದೆ. ಇದರ ನಡುವೆ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಹತಾಶೆಯಿಂದ ಏನೇನೋ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಅವರು ಜೈಲಿಗೆ ಹೋಗುವ ದಿನಗಳು ಹತ್ತಿರವಾಗಿವೆ ಎಂದರು.
ಇವನ್ನೂ ಓದಿ