ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಲೈಂಗಿಕ ಕಿರುಕುಳ:ಪತಿಗೆ ಜೀವ ಬೆದರಿಕೆ-ಪ್ರೊಫೆಸರ್‌ ಅಮಾನತು (Mysore | Sexual harashment | Police | Vijaya shankar | Saritha)
ಮೈಸೂರು ವಿವಿ ಸಂಶೋಧನಾ ವಿದ್ಯಾರ್ಥಿನಿಯ ಲೈಂಗಿಕ ಕಿರುಕುಳ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ ದೂರನ್ನು ವಾಪಸ್ ಪಡೆಯುವಂತೆ ಸರಿತಾ ಪತಿ ವಿಜಯ್‌ಶಂಕರ್‌ಗೆ ಜೀವ ಬೆದರಿಕೆ ಕರೆಗಳು ಬರತೊಡಗಿವೆ. ಏತನ್ಮಧ್ಯೆ ಲೈಂಗಿಕ ಕಿರುಕುಳ ನೀಡಿದ್ದಾರೆಂಬ ಆರೋಪ ಹೊತ್ತಿರುವ ಪ್ರೊ.ಶಿವಬಸವಯ್ಯ ಅವರ ಪರವಾಗಿ ದಲಿತ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಬೆಂಬಲ ನೀಡಿದ್ದಾರೆ.

ಮೈಸೂರು ವಿವಿಯಲ್ಲಿನ ಪಿಎಚ್‌ಡಿ ಸಂಶೋಧನಾ ವಿದ್ಯಾರ್ಥಿನಿ ಸರಿತಾಗೆ ಪ್ರಾಣಿಶಾಸ್ತ್ರ ವಿಭಾಗದ ಪ್ರೊ.ಶಿವಬಸವಯ್ಯ ಅವರು ಲೈಂಗಿಕ ಕಿರುಕುಳ ನೀಡುತ್ತಿರುವುದರಿಂದ ಮನನೊಂದು ಶನಿವಾರ ರಾತ್ರಿ ನಿದ್ದೆ ಮಾತ್ರೆ ತಿಂದು ಆತ್ಮಹತ್ಯೆಗೆ ಯತ್ನಿಸಿದ್ದರು. ಆದರೆ ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಇದೀಗ ಚೇತರಿಸಿಕೊಂಡಿದ್ದಾರೆ.

ಸರಿತಾ ಅವರು ವಿವಾಹಿತರಾಗಿದ್ದು ವಿಜಯನಗರ 3ನೇ ಹಂತದಲ್ಲಿ ವಾಸವಿದ್ದು, ಇವರಿಗೆ ಒಂದು ಹೆಣ್ಣು ಮಗುವಿದೆ. ಪತಿ ವಿಜಯಕುಮಾರ್ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕಳೆದ ಒಂದು ವರ್ಷದಿಂದ ಶಿವಬಸವಯ್ಯ ಅವರ ಮಾರ್ಗದರ್ಶನದಲ್ಲಿ ಸರಿತಾ ಸಂಶೋಧನೆ ನಡೆಸುತ್ತಿದ್ದಾರೆ.

ಈಗ ಪ್ರೊ.ಶಿವಬಸವಯ್ಯ ಹಾಗೂ ಮೈಸೂರು ವಿವಿ ಕುಲಪತಿ ತಳವಾರ್ ವಿರುದ್ಧ ದಾಖಲಿಸಿರುವ ದೂರನ್ನು ವಾಪಸ್ ಪಡೆಯುವಂತೆ ಲೈಂಗಿಕ ಕಿರುಕುಳಕ್ಕೆ ಒಳಗಾಗಿರುವ ಸರಿತಾ ಪತಿ ವಿಜಯ್ ಕುಮಾರ್ ಅವರಿಗೆ ಜೀವ ಬೆದರಿಕೆ ಕರೆಗಳು ಬರುತ್ತಿರುವುದಾಗಿ ದೂರಿದ್ದಾರೆ. ಅಷ್ಟೇ ಅಲ್ಲ ಆಸ್ಪತ್ರೆ ಬಳಿ ನಾಲ್ವರು ಅಪರಿಚಿತ ವ್ಯಕ್ತಿಗಳು ಆಗಮಿಸಿ ಜೀವ ಬೆದರಿಕೆಯೊಡ್ಡಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ವಿಜಯನಗರ ಠಾಣೆಯಲ್ಲಿ ದೂರು ದಾಖಲಿಸಿರುವುದಾಗಿ ಹೇಳಿದರು.

ಪ್ರೊ.ಶಿವಬಸವಯ್ಯ ಅಮಾನತು:
ಏತನ್ಮಧ್ಯೆ ಆರೋಪ ಪ್ರತ್ಯಾರೋಪದ ನಡುವೆ ವಿದ್ಯಾರ್ಥಿನಿ ಮೇಲೆ ಲೈಂಗಿಕ ಕಿರುಕುಳ ನೀಡಿದ ಪ್ರೊಫೆಸರ್ ಶಿವಬಸವಯ್ಯ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಮೈಸೂರು ವಿವಿ ರಿಜಿಸ್ಟ್ರಾರ್ ಆದೇಶ ನೀಡಿದ್ದಾರೆ.

ಘಟನೆ ಕುರಿತಂತೆ ಮೂರು ದಿನದೊಳದೆ ಉತ್ತರ ನೀಡುವಂತೆ ಪ್ರೊಫೆಸರ್ ಅವರಿಗೆ ಸೂಚಿಸಲಾಗಿತ್ತು. ಆದರೆ ಮೂರು ದಿನ ಕಳೆದರೂ ಶಿವಬಸವಯ್ಯ ಅವರು ಉತ್ತರ ನೀಡದ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ ಎಂದು ರಿಜಿಸ್ಟ್ರಾರ್ ನಾಯಕ್ ತಿಳಿಸಿದ್ದಾರೆ.

ಅಲ್ಲದೇ ಪ್ರೊ.ಶಿವಬಸವಯ್ಯ ಅವರ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ವಿ.ಎಸ್.ಆಚಾರ್ಯ ಅವರು ತಿಳಿಸಿದ್ದಾರೆ. ಪ್ರಕರಣ ಬಯಲಿಗೆ ಬಂದ ನಂತರ ಶಿವಬಸವಯ್ಯ ಅವರು ತಲೆ ಮರೆಸಿಕೊಂಡಿದ್ದು ಅವರ ಬಂಧನಕ್ಕೆ ಪೊಲೀಸರು ಶೋಧ ನಡೆಸುತ್ತಿದ್ದಾರೆ ಎಂದು ವಿವರಿಸಿದ್ದಾರೆ.

ಜೆಡಿಎಸ್‌ನ ನಾಣಯ್ಯ ಅವರು ಶೂನ್ಯ ವೇಳೆಯಲ್ಲಿ ಮಾಡಿದ ಪ್ರಸ್ತಾಪಕ್ಕೆ ಮುಖ್ಯಮಂತ್ರಿಯವರ ಪರವಾಗಿ ಸಭಾನಾಯಕರು ಆಗಿರುವ ಆಚಾರ್ಯ ಉತ್ತರ ನೀಡಿ ಶಿವಬಸವಯ್ಯ ಅವರ ಲೈಂಗಿಕ ಕಿರುಕುಳ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ ಎಂದು ತಿಳಿಸಿದರು.

ಶಿವಬಸವಯ್ಯಗೆ ದಲಿತ ವಿದ್ಯಾರ್ಥಿಗಳ ಸಾಥ್:
ಮತ್ತೊಂದೆಡೆ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಪ್ರಾಣಿಶಾಸ್ತ್ರ ವಿಭಾಗದ ಪ್ರೊ.ಶಿವಬಸವಯ್ಯ ಅವರು ದಲಿತ ಸಮುದಾಯಕ್ಕೆ ಸೇರಿರುವುದರಿಂದ ಅನಾವಶ್ಯಕವಾಗಿ ಸುಳ್ಳು ಆರೋಪ ಹೊರಿಸಲಾಗಿದೆ ಎಂದು ದೂರಿ ವಿವಿಯ ದಲಿತ ವಿದ್ಯಾರ್ಥಿಗಳು ಮಂಗಳವಾರ ಪ್ರತಿಭಟನೆ ನಡೆಸಿ, ವಿವಿಗೆ ಮುತ್ತಿಗೆ ಹಾಕಿದರು.

ಲೈಂಗಿಕ ಕಿರುಕುಳ ನೀಡಿದ್ದಾರೆಂದು ಸರಿತಾ ಹೇಳುತ್ತಿರುವುದು ಬರೇ ನಾಟಕ, ಪ್ರೊ.ಶಿವಬಸವಯ್ಯ ಅವರು ಅಮಾಯಕರಾಗಿದ್ದಾರೆ. ಅಷ್ಟೇ ಅಲ್ಲ ಕುಲಪತಿ ತಳವಾರ್ ಕೂಡ ದಲಿತ ಸಮುದಾಯಕ್ಕೆ ಸೇರಿದ್ದು ದುರುದ್ದೇಶಪೂರ್ವಕವಾಗಿಯೇ ಈ ಸಂಚು ಹೆಣೆಯಲಾಗಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಪ್ರಕರಣದ ಕುರಿತಂತೆ ಮೈಸೂರು ಎಸಿಪಿ ಸುರೇಶ್ ಕುಮಾರ್ ನೇತೃತ್ವದ ತಂಡ ತನಿಖೆ ನಡೆಸುತ್ತಿದೆ. ಮೈಸೂರು ವಿವಿ ಮಹಿಳಾ ದೌರ್ಜನ್ಯ ತಂಡ ಕೂಡ ತನಿಖೆ ನಡೆಸುತ್ತಿದ್ದು, ಈ ಹಂತದಲ್ಲಿ ಪ್ರೊ.ಶಿವಬಸವಯ್ಯ ಅವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವುದು ಸರಿಯಲ್ಲ ಎಂದು ದಲಿತ ವಿದ್ಯಾರ್ಥಿಗಳು ತಿಳಿಸಿದ್ದಾರೆ.

ಲೈಂಗಿಕ ಕಿರುಕುಳ ಪ್ರಕರಣ ಸೋಮವಾರ ವಿಧಾನಪರಿಷತ್ ಕಲಾಪದಲ್ಲಿಯೂ ಪ್ರತಿಧ್ವನಿಸಿತ್ತು. ಈ ರೀತಿ ಅಪರಾಧ ಮಾಡುವವರ ಕೈ-ಕಾಲು ಕತ್ತರಿಸಿ ಬದುಕಲು ಬಿಡಬೇಕು ಎಂದು ಬಿಜೆಪಿ ಸದಸ್ಯೆ ಭಾರತಿ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲ ಅಪರಾಧ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದರು.

ಆದರೆ ಭಾರತಿ ಶೆಟ್ಟಿ ಅವರು ಉಪಯೋಗಿಸಿದ ಭಾಷೆ ಸರಿಯಾದುದಲ್ಲ ಎಂದು ದಲಿತ ವಿದ್ಯಾರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ್ದು, ನಿಮ್ಮದೇ ಸಚಿವ ಹರತಾಳು ಹಾಲಪ್ಪ ಸ್ನೇಹಿತನ ಪತ್ನಿಯ ಮೇಲೆ ಅತ್ಯಾಚಾರ ಎಸಗಿದ್ದಾರಲ್ಲ. ಆಗ ನೀವು ಈ ರೀತಿ ಹೇಳಿಕೆ ಕೊಡಬೇಕಿತ್ತು ಎಂದು ತಿರುಗೇಟು ನೀಡಿದ್ದಾರೆ.
ಇವನ್ನೂ ಓದಿ