ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಸಿಎಂ ವಜಾಗೊಳಿಸಿ: ರಾಜ್ಯಪಾಲರಿಗೆ ವಕೀಲರ ದೂರು (CM Yeddyurappa | Karnataka | Lawyers | Hansraj Bharadwaj)
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕಂಟಕಗಳ ಸರಮಾಲೆಗೆ ಮತ್ತೊಂದು ಸೇರ್ಪಡೆ. ಅವರು ತಾವು ಸ್ವೀಕರಿಸಿದ ಪ್ರಮಾಣವಚನವನ್ನೇ ಮುರಿದಿದ್ದಾರೆ, ಹೀಗಾಗಿ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ವಜಾಗೊಳಿಸಬೇಕು ಎಂದು ಮೂವರು ವಕೀಲರು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರ ಮೊರೆ ಹೋಗಿದ್ದಾರೆ.

ಶನಿವಾರ ರಾಜ್ಯಪಾಲರನ್ನು ರಾಜಭವನದಲ್ಲಿ ಭೇಟಿ ಮಾಡಿದ ಹಿರಿಯ ವಕೀಲರಾದ ಎ.ಕೆ.ಸುಬ್ಬಯ್ಯ, ಪ್ರೊ.ರವಿವರ್ಮ ಕುಮಾರ್, ಮತ್ತು ಸಿ.ಎಸ್.ದ್ವಾರಕನಾಥ್ ಅವರು, ಯಡಿಯೂರಪ್ಪ ಅಧಿಕಾರಕ್ಕೆ ಬಂದ ನಂತರ ಸ್ವಜನ ಪಕ್ಷಪಾತ, ಭ್ರಷ್ಟಾಚಾರ, ಜಾತೀಯತೆ, ಮತೀಯತೆ ಮುಂತಾದವುಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಬಗ್ಗೆ ಸಂವಿಧಾನದ ಅಡಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ತಮ್ಮ ಈ ಆಗ್ರಹಕ್ಕೆ ಪೂರಕವಾಗಿ, ಈ ಹಿಂದೆ ದೇಶದ ವಿವಿಧ ಹೈಕೋರ್ಟುಗಳು, ಮತ್ತು ಸುಪ್ರೀಂ ಕೋರ್ಟುಗಳ ತೀರ್ಪುಗಳನ್ನೂ ದೂರಿನಲ್ಲಿ ಈ ವಕೀಲರು ಉಲ್ಲೇಖಿಸಿ, ಮುಖ್ಯಮಂತ್ರಿಯನ್ನು ವಜಾಗೊಳಿಸಬಹುದು ಎಂದು ಹೇಳಿದ್ದಾರೆ.

ಮನವಿಯಲ್ಲಿ ಎಲ್ಲ ಹಗರಣಗಳನ್ನು ಪ್ರಸ್ತಾಪಿಸಿದ್ದೇವೆ ಎಂದಿರುವ ವಕೀಲರು, ತಾವೇನೂ ಸರಕಾರವನ್ನು ವಜಾಗೊಳಿಸಲು ಕೇಳಿಕೊಂಡಿಲ್ಲ, ವಚನ ಮುರಿದ ಮುಖ್ಯಮಂತ್ರಿಯನ್ನಾದರೂ ವಜಾಗೊಳಿಸಿ ಎಂದು ಕೇಳಿಕೊಂಡಿರುವುದಾಗಿ ತಿಳಿಸಿದ್ದಾರೆ.