ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಡಿಕೆಶಿ ಕಾಂಗ್ರೆಸ್ ಪಕ್ಷವನ್ನೇ ಮುಗಿಸಿದ್ದಾರೆ: ವಿಶ್ವನಾಥ್ ಕಿಡಿ (DK shikumar | Vishwanth | Mysore | Congress | BJP | Dispute)
'ಡಿ.ಕೆ.ಶಿವಕುಮಾರ್ ಮಾನಸಿಕ ಸ್ಥಿಮಿತ ಕಳೆದುಕೊಂಡವರಂತೆ ವರ್ತಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಮುಖಂಡ, ಸಂಸದ ಎಚ್.ವಿಶ್ವನಾಥ್, ಡಿಕೆಶಿ ಕಾಂಗ್ರೆಸ್ ಪಕ್ಷದಿಂದ ಬಹಳಷ್ಟು ಪಡೆದುಕೊಂಡಿದ್ದಾರೆ, ಅದೇ ರೀತಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಪೂರ್ಣವಾಗಿ ಮುಗಿಸಿದ್ದಾರೆ' ಎಂದು ಆರೋಪಿಸಿದ್ದಾರೆ.

ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಹಿರಿಯ ಮುಖಂಡ ಎಸ್.ಎಂ.ಕೃಷ್ಣ ಅವರು ಕೇಂದ್ರ ಸಚಿವರಾಗುವುದನ್ನು ವಿಶ್ವನಾಥ್ ತಪ್ಪಿಸಲು ಯತ್ನಿಸಿದ್ದರು ಎಂದು ಭಾನುವಾರ ಡಿಕೆಶಿ ನೀಡಿದ್ದ ಹೇಳಿಕೆಗೆ ಈ ಪ್ರತಿಕ್ರಿಯೆ ನೀಡಿದ್ದಾರೆ.

ಶಿವಕುಮಾರ್ ಮಾತನ್ನು ಕೇಳಿದರೆ ಅವರು ಕಾಂಗ್ರೆಸ್ ಪಕ್ಷದಲ್ಲಿಯೇ ಇದ್ದಾರೋ ಅಥವಾ ಪಕ್ಷ ಬಿಡುವ ಪ್ರಯತ್ನದಲ್ಲಿದ್ದಾರೋ ಎಂಬ ಅನುಮಾನ ಮೂಡುತ್ತಿದೆ ಎಂದು ವ್ಯಂಗ್ಯವಾಡಿದರು. ಡಿಕೆಶಿ ತಮ್ಮ ಪಕ್ಷವನ್ನೇ ಮರೆತಂತೆ ಮಾತನಾಡುತ್ತಿದ್ದಾರೆ.

ಒಟ್ಟಾರೆ ಕಾಂಗ್ರೆಸ್ ಪಕ್ಷ ಬಿಡುವ ಯೋಚನೆ ಮಾಡಿದ್ದರೆ ಡಿಕೆಶಿ ಬೇಷರತ್ತಾಗಿ ಕೋಮುವಾದಿ ಪಕ್ಷವನ್ನು ಸೇರಲಿ ಎಂದು ಈ ಸಂದರ್ಭದಲ್ಲಿ ಸಲಹೆ ನೀಡಿದರು.

ಭಾನುವಾರ ಮೈಸೂರು ಜಿಲ್ಲಾ ಒಕ್ಕಲಿಗರ ಸಂಘ ಆಯೋಜಿಸಿದ್ದ ಒಕ್ಕಲಿಗ ಜನಾಂಗದ ಜಿ.ಪಂ. ಮತ್ತು ತಾ.ಪಂ ಸದಸ್ಯರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ್ದ ಡಿಕೆಶಿ, ಕೃಷ್ಣ ಅವರು ವಿದೇಶಾಂಗ ವ್ಯವಹಾರಗಳ ಸಚಿವರಾಗುವುದನ್ನು ತಪ್ಪಿಸಲು ವಿಶ್ವನಾಥ್ ಯತ್ನಿಸಿದ್ದರು. ಅಲ್ಲದೇ ಕೃಷ್ಣ ಅವರಿಗೆ ತೊಂದರೆ ಕೊಡಬೇಕೆಂದು ಹಳ್ಳಿ ಹಕ್ಕಿ ಹಾಡು ಎಂಬ ಪುಸ್ತಕ ಬರೆದಿದ್ದರು ಎಂದು ಆರೋಪಿಸಿದ್ದರು.

ಅವರೊಬ್ಬ ದೊಡ್ಡ ರಾಜಕೀಯ ತತ್ವಜ್ಞಾನಿ-ಡಿಕೆಶಿ ತಿರುಗೇಟು
ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿರುವ ವಿಶ್ವನಾಥ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅವರು, ವಿಶ್ವನಾಥ್ ರಾಜಕೀಯದ ದೊಡ್ಡ ತತ್ವಜ್ಞಾನಿ ಎಂದು ವ್ಯಂಗ್ಯವಾಡಿದ್ದು, ಅವರ ಸಲಹೆಯಂತೆ ಅವರ ಜತೆಗೆ ಯಾವುದಾದರು ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಮಾಡಿಕೊಳ್ಳುತ್ತೇನೆ. ವಿಶ್ವನಾಥ್ ಎಲ್ಲರ ಬಗ್ಗೆಯೂ ಮಾತನಾಡುತ್ತಾರೆ. ಅದು ಅವರಿಗೊಂದು ಹವ್ಯಾಸ ಎಂದು ತಿರುಗೇಟು ನೀಡಿದರು.
ಇವನ್ನೂ ಓದಿ