ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಅಕ್ರಮ ಗಣಿ ಲೈಸೆನ್ಸ್ ಕೊಟ್ಟಿದ್ದು ಯಾರಂತ ಈಗ ಗೊತ್ತಾಯ್ತಲ್ಲ!: ಸಿಎಂ (Illegal Mining | Bellary | CEC Report | Yeddyurappa | Reddy Brothers)
ದೇಶದಲ್ಲೇ ಅತ್ಯಧಿಕ ಪ್ರಮಾಣದಲ್ಲಿ ಕರ್ನಾಟಕದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂಬ ಸುಪ್ರೀಂ ಕೋರ್ಟ್ ನಿಯಮಿಸಿದ ಉನ್ನತಾಧಿಕಾರ ಸಮಿತಿ (ಸಿಇಸಿ) ವರದಿ ನೀಡಿದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, 2003ರಿಂದ 2009 ಅವಧಿಯಲ್ಲಿ ಅಕ್ರಮ ಗಣಿಗಾರಿಕೆಗೆ ಲೈಸೆನ್ಸ್ ನೀಡಿದ್ದು ಯಾರೂಂತ ಈಗ ಗೊತ್ತಾಯಿತಲ್ಲಾ? ಕಾಂಗ್ರೆಸ್-ಜೆಡಿಎಸ್ ಆಡಳಿತಾವಧಿಯಲ್ಲೇ ಇವೆಲ್ಲವೂ ನಡೆದಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಅಕ್ರಮ ಗಣಿಗಾರಿಕೆ ನಿಷೇಧಕ್ಕೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ತೀವ್ರ ಸಮಾಲೋಚನೆ ನಡೆಸಿದ ಬಳಿಕ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಇಸಿಗೆ ಅಕ್ರಮ ಗಣಿಗಾರಿಕೆಯ ಅಂಕಿ ಅಂಶಗಳನ್ನು ತಾನೇ ನೀಡಿದ್ದೇನೆ. ಅದಿರು ರಫ್ತು ನಿಷೇಧ ಮಾಡುವ ಮೂಲಕ ಅಕ್ರಮ ಗಣಿಗಾರಿಕೆಗೆ ಬ್ರೇಕ್ ಹಾಕಲು ಪ್ರಯತ್ನಿಸಿದ್ದೇನೆ. ಆದರೆ, ಅಕ್ರಮ ಗಣಿಗಾರಿಕೆ ತಡೆಯುವ ನಿಟ್ಟಿನಲ್ಲಿ ರಾಜ್ಯ ಸರಕಾರದಷ್ಟೇ ಕೇಂದ್ರ ಸರಕಾರಕ್ಕೂ ಬದ್ಧತೆ ಇದೆ ಎಂದು ಹೇಳಿದರು.

ರೆಡ್ಡಿ ಸೋದರರ ಹೆಸರಿನಲ್ಲಿ ಇಲ್ಲ...
ಇದೇ ವೇಳೆ, ಬಳ್ಳಾರಿಯ ಪ್ರಬಲ ರೆಡ್ಡಿ ಸಹೋದರರಾದ ಸಚಿವ ಶ್ರೀರಾಮುಲು ಮತ್ತು ಸಚಿವ ಜನಾರ್ದನ ರೆಡ್ಡಿ ಮತ್ತು ಸಹೋದರರ ಹೆಸರಿನಲ್ಲಿ ರಾಜ್ಯದಲ್ಲಿ ಯಾವುದೇ ಗಣಿ ವ್ಯವಹಾರ ಇಲ್ಲ ಎಂದು ಸ್ಪಷ್ಟಪಡಿಸಿದ ಮುಖ್ಯಮಂತ್ರಿಗಳು, ರೆಡ್ಡಿಗಳು ಆಂಧ್ರ ಭಾಗದಲ್ಲಿ ಗಣಿಗಾರಿಕೆ ನಡೆಸುತ್ತಿದ್ದಾರೆ. ಕರ್ನಾಟಕದಲ್ಲಿ ಬಳ್ಳಾರಿಯಲ್ಲಿ ಉಕ್ಕಿನ ಕಾರ್ಖಾನೆ ಸ್ಥಾಪನೆಗಾಗಿ ಅನುಮತಿಯನ್ನಷ್ಟೇ ಕೋರಿದ್ದಾರೆ ಎಂದರು.

ಕಾಂಗ್ರೆಸ್, ಜೆಡಿಎಸ್ ಆಡಳಿತಾವಧಿಯಲ್ಲಿ ಅಕ್ರಮ ಗಣಿಗಾರಿಕೆಗೆ ಲೈಸೆನ್ಸ್ ನೀಡಲಾಗಿದ್ದು, ಯಡಿಯೂರಪ್ಪ ಅಧಿಕಾರಕ್ಕೆ ಬಂದ ಮೇಲಲ್ಲ. ಈಗ ಸುಪ್ರೀಂ ಕೋರ್ಟಿನ ಮೂಲಕವೇ ತನಿಖೆ ನಡೆಯುತ್ತಿರುವಾಗ ಸತ್ಯಾಂಶ ಹೊರಬರುತ್ತಿರುವುದು ಸಂತೋಷವಾಗಿದೆ. ಕೇಂದ್ರ ಸರಕಾರದ ಕುಮ್ಮಕ್ಕಿಲ್ಲದೇ ಈ ರೀತಿಯ ಅಕ್ರಮ ನಡೆಯಲು ಸಾಧ್ಯವಿಲ್ಲ. ಇಲ್ಲವಾದಲ್ಲಿ, ಇಷ್ಟು ವರ್ಷಗಳಿಂದ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೂ ಕೇಂದ್ರವೇಕೆ ಕ್ರಮ ಕೈಗೊಂಡಿಲ್ಲ ಎಂದು ಅವರು ಪ್ರಶ್ನಿಸಿದರು.

ಕಟ್ಟು ನಿಟ್ಟಿನ ಕ್ರಮಕ್ಕೆ ಬದ್ಧ,...
ಸಿಇಸಿ ವರದಿಗಳಲ್ಲಿ ಏನೇನಿದೆಯೋ, ಅವೆಲ್ಲವನ್ನೂ ಜಾರಿಗೆ ತರಲು ತನ್ನ ಸರಕಾರವು ಬದ್ಧವಾಗಿದೆ. ಯಾರದೇ ಹೆಸರಿನಲ್ಲಿ ಆರೋಪಗಳಿದ್ದರೂ, ಅವರೆಷ್ಟೇ ದೊಡ್ಡ ವ್ಯಕ್ತಿಯಾಗಿದ್ದರೂ ಕೂಡ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಬದ್ಧನಾಗಿರುವುದಾಗಿಯೂ ಮುಖ್ಯಮಂತ್ರಿ ಈ ಸಂದರ್ಭ ಹೇಳಿದರು.
ಇವನ್ನೂ ಓದಿ