ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ರಾಜಕೀಯ ನಿವೃತ್ತಿಯಾಗ್ತೀನಿ ಅಂತ ಹೇಳಿಲ್ಲ: ಸಿದ್ದರಾಮಯ್ಯ (Siddaramiah | Congress | Yeddyurappa | Corruption | Karnataka Politics)
ತಾನೇನೂ ರಾಜಕೀಯದಿಂದ ನಿವೃತ್ತಿಯಾಗುತ್ತೇನೆ ಎಂದು ಹೇಳಿಲ್ಲ. ಯಡಿಯೂರಪ್ಪ ಅವರ ಸರಕಾರದಲ್ಲಿ ಭ್ರಷ್ಟಾಚಾರವು ಮಿತಿ ಮೀರುತ್ತಿದೆ, ಇದನ್ನು ನೋಡಿ ಬೇಸರವಾಗುತ್ತಿದೆ ಎಂದಷ್ಟೇ ಹೇಳಿದ್ದೆ ಎಂದು ಸ್ಪಷ್ಟಪಡಿಸಿದ್ದಾರೆ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ.

ಸಿದ್ದರಾಮಯ್ಯ ಮತ್ತು ಜಾತ್ಯತೀತ ಜನತಾ ದಳ ಮುಖಂಡ ಎಚ್.ಡಿ.ಕುಮಾರಸ್ವಾಮಿ ಅವರು ರಾಜಕೀಯ ನಿವೃತ್ತಿಯ ಇಂಗಿತ ವ್ಯಕ್ತಪಡಿಸಿರುವ ಕುರಿತಾದ ವರದಿಗಳಿಗೆ ಭಾನುವಾರ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ ಯಡಿಯೂರಪ್ಪ, ಅವರು ನಿವೃತ್ತರಾಗಬಾರದು ಎಂಬ ಸಲಹೆ ನೀಡಿದ್ದರು.

ಇದಕ್ಕೆ ಸೋಮವಾರ ಮಾಧ್ಯಮಗಳೊಂದಿಗೆ ಸ್ಪಷ್ಟನೆ ನೀಡಿರುವ ಸಿದ್ದರಾಮಯ್ಯ, ತಾನು ಈಗಿನ ವ್ಯವಸ್ಥೆಯನ್ನು ನೋಡಿ ಬೇಸರ ವ್ಯಕ್ತಪಡಿಸಿದ್ದೇನೆಯೇ ಹೊರತು, ರಾಜಕೀಯದಿಂದ ನಿವೃತ್ತಿಯಾಗುತ್ತೇನೆಂದು ಎಲ್ಲೂ ಹೇಳಿಲ್ಲ ಎಂದರಲ್ಲದೆ, ನಿವೃತ್ತಿಯಾಗೋದು ಬೇಡ ಅಂತ ಯಡಿಯೂರಪ್ಪ ಹೇಳುತ್ತಿದ್ದಾರೆ. ಅದರ ಬದಲು ಅವರು ಭ್ರಷ್ಟಾಚಾರ ತಡೆಗೆ ಗಮನ ಕೊಡಲಿ ಎಂದು ಸಲಹೆ ನೀಡಿದರು.

ಭ್ರಷ್ಟಾಚಾರದಲ್ಲಿ ಭಾಗಿಯಾಗಿಲ್ಲ, ರಾಜೀನಾಮೆ ಕೊಡೋದಿಲ್ಲ ಎಂದೆಲ್ಲಾ ಯಡಿಯೂರಪ್ಪ ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಅವರು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎಂಬುದಕ್ಕೆ ಇದೇ ಪುರಾವೆಯಲ್ಲವೇ ಎಂದು ಕೇಳಿದ ಅವರು, ನಿಜಕ್ಕೂ ಭ್ರಷ್ಟಾಚಾರ ಮಾಡಿಲ್ಲ ಎಂದಾದರೆ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿ ತನಿಖೆಗೆ ಎದುರಿಸಲಿ ಎಂದರು ಸಿದ್ದರಾಮಯ್ಯ.

ಕಳೆದ ಮೂರು ವರ್ಷಗಳಲ್ಲಿ ಯಾವುದೇ ಕೆಲಸಗಳು ನಡೆಯುತ್ತಿಲ್ಲ. ಬಡವರಿಗೆ ಒಂದೇ ಒಂದು ಸೈಟು ಕೊಟ್ಟಿಲ್ಲ, ಬಿಪಿಎಲ್ ಕಾರ್ಡು ಕೊಟ್ಟಿಲ್ಲ, ಆಶ್ರಯ ಮನೆ ಕಟ್ಟಿಸಿಲ್ಲ. ಹೀಗಾದರೆ ರಾಜ್ಯದ ಅಭಿವೃದ್ಧಿ ಹೇಗೆ ಎಂದು ಅವರು ಪ್ರಶ್ನಿಸಿದರು.
ಇವನ್ನೂ ಓದಿ