ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಗಣಿ ಕದನ-ಕಾಂಗ್ರೆಸ್ ಬಣ್ಣ ವಾರದೊಳಗೆ ಬಯಲು: ಸಿಎಂ (BJP | Yeddyurappa | Illegal mining | Congress | Siddaramaiah | Parameshawar)
ಅಕ್ರಮ ಗಣಿಗಾರಿಕೆ ವಿಷಯದಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಬಿಜೆಪಿ ಮೇಲೆ ಗೂಬೆ ಕೂರಿಸುವ ಯತ್ನ ಮಾಡುತ್ತಿದೆ ಎಂದು ಆರೋಪಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕಾಂಗ್ರೆಸ್ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ನಡೆಸಿದ ಅಕ್ರಮ ಗಣಿಗಾರಿಕೆಯ ಆರೋಪ ಪಟ್ಟಿಯನ್ನು ಒಂದು ವಾರದೊಳಗೆ ದೆಹಲಿಯಲ್ಲಿ ಬಹಿರಂಗಪಡಿಸುವುದಾಗಿ ಘೋಷಿಸಿದ್ದಾರೆ.

ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಲು ಶುಕ್ರವಾರ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರಕ್ಕೆ ಆಗಮಿಸಿದ ಅವರು, ಸುದ್ದಿಗಾರರೊಂದಿಗೆ ಮಾತನಾಡುತ್ತ ಈ ವಿಷಯ ತಿಳಿಸಿದ್ದಾರೆ.

ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ ಅವರು ಅಕ್ರಮ ಗಣಿಗಾರಿಕೆಯಲ್ಲಿ ಮುಖ್ಯಮಂತ್ರಿಗಳು ಶಾಮೀಲಾಗಿದ್ದಾರೆ ಎಂದು ಅಪಪ್ರಚಾರ ಮಾಡುತ್ತ ಆರೋಪಪಟ್ಟಿಯನ್ನು ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಸತ್ಯಾಸತ್ಯತೆ ಏನು ಎನ್ನುವುದು ಶೀಘ್ರದಲ್ಲೇ ಬಹಿರಂಗವಾಗಲಿದೆ ಎಂದರು.

ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ಅಕ್ರಮ ಗಣಿಗಾರಿಕೆ ಕಡಿವಾಣ ಹಾಕಿ ಮೌಲ್ಯಾಧಾರಿತ ಕಂಪೆನಿಗಳಿಗೆ ಮಾತ್ರ ಅದಿರು ಪೂರೈಕೆ ಮಾಡಬೇಕು ಎಂದು ಕಾನೂನು ಮಾಡಲಾಗಿದೆ. ರಾಜ್ಯದಲ್ಲಿನ ಅಕ್ರಮ ಗಣಿಗಾರಿಕೆಗೆ ಕುಮ್ಮಕ್ಕು ನೀಡಿದವರೇ ಕಾಂಗ್ರೆಸ್ ಪಕ್ಷದವರು. ಆದರೆ ಇದೀಗ ಬಿಜೆಪಿಯತ್ತ ಬೆರಳು ತೋರಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಅಕ್ರಮ ಗಣಿಗಾರಿಕೆ ವಿಷಯದಲ್ಲಿ ಸಿದ್ದರಾಮಯ್ಯ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಅಲ್ಲದೇ ನನ್ನ ರಾಜೀನಾಮೆಗೆ ಒತ್ತಾಯಿಸುತ್ತಿದ್ದಾರೆ. ನನ್ನ ರಾಜೀನಾಮೆಯಾಗಲೀ ಅಥವಾ ಅಕ್ರಮ ಗಣಿಗಾರಿಕೆ ಬಗ್ಗೆ ಮಾತನಾಡೋ ನೈತಿಕ ಹಕ್ಕೇ ಕಾಂಗ್ರೆಸ್ ಮುಖಂಡರಿಗೆ ಇಲ್ಲ ಎಂದು ಕಿಡಿಕಾರಿದರು. ಅಕ್ರಮ ಗಣಿಗಾರಿಕೆ ಕುರಿತಂತೆ ಕಾಂಗ್ರೆಸ್ ನಾಯಕರ ಬಣ್ಣ ಬಯಲು ಮಾಡುವುದಾಗಿ ಮತ್ತೆ ಪುನರುಚ್ಚರಿಸಿದರು.
ಇವನ್ನೂ ಓದಿ