ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಜಂಗೀಕುಸ್ತಿ ಬಿಟ್ಟು ಪಕ್ಷ ಕಟ್ಟಿ; ಸಿದ್ದುಗೆ ಹೈಕಮಾಂಡ್ ತರಾಟೆ (siddaramaiah | BJP | Yeddyurappa | Parameshwar | KPCC | High commond)
ಅನಾವಶ್ಯಕವಾಗಿ ಸಣ್ಣ-ಪುಟ್ಟ ವಿಷಯವನ್ನೇ ದೊಡ್ಡ ಸಮಸ್ಯೆ ಎಂದು ಬಿಂಬಿಸುವುದನ್ನು ಬಿಟ್ಟು, ಬಿಜೆಪಿ ಸರಕಾರದ ದುರಾಡಳಿತ, ಭ್ರಷ್ಟಾಚಾರವನ್ನು ಜನರಿಗೆ ಮನವರಿಕೆ ಮಾಡುವ ಮೂಲಕ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಲು ಮುಂದಾಗಿ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರಿಗೆ ಪಕ್ಷದ ಹೈಕಮಾಂಡ್ ಕಿವಿಹಿಂಡಿದೆ ಎಂದು ಮೂಲವೊಂದು ತಿಳಿಸಿದೆ.

ಕೆಪಿಸಿಸಿ ಪದಾಧಿಕಾರಿಗಳ ನೇಮಕದಲ್ಲಿ ಅನ್ಯಾಯವಾಗಿದೆ ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ, ಪರಮೇಶ್ವರ್ ಅವರನ್ನು ಇತ್ತೀಚೆಗೆ ನವದೆಹಲಿಗೆ ಕರೆಸಿಕೊಂಡಿದ್ದ ಸಂದರ್ಭದಲ್ಲಿ ರಾಜ್ಯದಲ್ಲಿ ಪಕ್ಷದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಮಧುಸೂದನ್ ಮಿಸ್ತ್ರಿ ಮೂಲಕ ಹೈಕಮಾಂಡ್ ಈ ರೀತಿಯ ಸೂಚನೆ ನೀಡಿದೆ ಎಂದು ಪಕ್ಷದ ಮೂಲಗಳು ಹೇಳಿವೆ.

ಪಕ್ಷದೊಳಗೆ ಕಚ್ಚಾಡಿಕೊಳ್ಳುತ್ತಿದ್ದರೆ, ಪಕ್ಷವನ್ನು ಸಂಘಟಿಸುವವರು ಯಾರು? ಆಡಳಿತ ಪಕ್ಷದ ವೈಫಲ್ಯವನ್ನು ಜನರಿಗೆ ತಲುಪಿಸುವವರು ಯಾರು? ಎಂದು ಗರಂ ಆಗಿರುವ ಹೈಕಮಾಂಡ್, ಹಠ ಹಿಡಿದು ವಿಧಾನಸಭೆ ವಿರೋಧ ಪಕ್ಷದ ನಾಯಕನ ಸ್ಥಾನ ಪಡೆದುಕೊಂಡಿದ್ದೀರಿ. ಪಕ್ಷಕ್ಕೆ ಬಂದ ಅಲ್ಪ ಅವಧಿಯಲ್ಲಿಯೇ ಉತ್ತಮ ಸ್ಥಾನ ಸಿಕ್ಕಿದೆ. ಅದನ್ನು ಬಳಸಿಕೊಂಡು ಪಕ್ಷ ಬಲಪಡಿಸಿ ಎಂದು ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಳ್ಳಲಾಗಿದೆ.

ಭಿನ್ನಾಭಿಪ್ರಾಯ ಬಿಟ್ಟು ಹೋರಾಟದತ್ತ ಗಮನ ನೀಡಿ ಎಂದು ಸಲಹೆ ನೀಡಿರುವ ಕಾಂಗ್ರೆಸ್ ಹೈಕಮಾಂಡ್, ಪದಾಧಿಕಾರಿಗಳ ನೇಮಕದಲ್ಲಿ ಸ್ವಲ್ಪ ವ್ಯತ್ಯಾಸವಾಗಿದ್ದರೆ ಸರಿಪಡಿಸೋಣ. ಮೊದಲು ಸಮರ್ಥ ವಿಪಕ್ಷವಾಗಿ ಕಾರ್ಯನಿರ್ವಹಿಸಿ ಎಂದು ಸಿದ್ದರಾಮಯ್ಯ ಹಾಗೂ ಪರಮೇಶ್ವರ್ ಅವರಿಗೆ ಸೂಚನೆ ನೀಡಿದೆ.
ಇವನ್ನೂ ಓದಿ