ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಭ್ರಷ್ಟ ಸರಕಾರವನ್ನ ಕಿತ್ತೊಗೆಯಿರಿ: ಜೆಡಿಎಸ್ ಜನಾಂದೋಲನ (BJP | Yeddyurappa | Congress | JDS | Deve gowda | Dorayswamy,)
ದುಷ್ಟ ಮತ್ತು ಭ್ರಷ್ಟ ಬಿಜೆಪಿ ಸರಕಾರ ಒಂದು ಕ್ಷಣವೂ ಅಧಿಕಾರದಲ್ಲಿ ಮುಂದುವರಿಯಬಾರದು. ಈ ಸರಕಾರವನ್ನು ಆಂದೋಲನದಿಂದಲೇ ಕಿತ್ತೊಗೆಯಬೇಕು. ಅಲ್ಲಿಗೆ ಹೋರಾಟ ನಿಲ್ಲಬಾರದು. ಎಲ್ಲ ರಾಜಕೀಯ ಪಕ್ಷಗಳನ್ನು ಶುಚಿಗೊಳಿಸುವ ಕೆಲಸವೂ ನಿಮ್ಮಿಂದಲೇ ಆಗಬೇಕು ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಕರೆ ನೀಡಿದರು.

ಜಯಪ್ರಕಾಶ್ ನಾರಾಯಣ್ ಜನಾಂದೋಲನ ವೇದಿಕೆ ಸ್ವಾತಂತ್ರ್ಯ ಉದ್ಯಾನವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜನಾಂದೋಲನ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.

ಆಡಳಿತಾರೂಢ ಬಿಜೆಪಿ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಸ್ವಜನಪಕ್ಷಪಾತ, ಜಾತಿವಾದವೇ ಅಲ್ಲಿ ಪ್ರಮುಖವಾಗಿದೆ. ಹಾಗಿದ್ದ ಮೇಲೆ ನಮಗೆ ಇಂಥ ಸರಕಾರ ಬೇಕೆ?ನಾಡಿನ ಅದಿರನ್ನು ಲೂಟಿ ಹೊಡೆಯುತ್ತಿರುವ ರೆಡ್ಡಿ ಸಹೋದರರಿಗೆ ಬೆಂಗಾವಲಾಗಿ ನಿಂತಿರುವ ಬಿಜೆಪಿ ಮುಖಂಡರಿಗೆ ನಾಚಿಕೆ ಇಲ್ಲವೇ ಎಂದು ಕಿಡಿಕಾರಿದರು.

ಈ ದೇಶದಲ್ಲಿನ ಅವ್ಯವಸ್ಥೆ ಮತ್ತು ಭ್ರಷ್ಟಾಚಾರಕ್ಕೆ ಎಲ್ಲ ರಾಜಕೀಯ ಪಕ್ಷಗಳೂ ಹೊಣೆಗಾರರು. ರಾಜಕೀಯದಲ್ಲಿನ ಭ್ರಷ್ಟಾಚಾರವನ್ನು ತೊಡೆದು ಹಾಕಿದರೆ, ಎಲ್ಲ ಅನಿಷ್ಟಗಳು ಹಂತ, ಹಂತವಾಗಿ ತೆರೆ ಬೀಳುತ್ತದೆ. ಭ್ರಷ್ಟಾಚಾರದ ವಿರುದ್ಧ ಜನಸಾಮಾನ್ಯರು ಬೀದಿಗಿಳಿದಾಗ ಮಾತ್ರ ಸಮಾಜ ಸುಸ್ಥಿತಿಗೆ ಬರಲು ಸಾಧ್ಯ ಎಂದು ದೊರೆಸ್ವಾಮಿ ಅಭಿಪ್ರಾಯವ್ಯಕ್ತಪಡಿಸಿದರು.

ಕಾರ್ಯಕ್ರಮದ ಕೊನೆಯಲ್ಲಿ ಮಾತನಾಡಿದ ದೇವೇಗೌಡರು, ದೇಶದ ರಾಜಕೀಯ ಅಧೋಗತಿಗೆ ತಲುಪಿದೆ. ರಾಜಕಾರಣಿಗಳು ರಾಜಕೀಯಕ್ಕಾಗಿ ಶಾಸಕಾಂಗ, ಕಾರ್ಯಾಂಗ ಮಾತ್ರವಲ್ಲ ನ್ಯಾಯಾಂಗವನ್ನೂ ನಾಶಮಾಡಲು ಹೊರಟಿದ್ದಾರೆ. ಜನಶಕ್ತಿಯಿಂದ ಮಾತ್ರವೇ ಈ ವ್ಯವಸ್ಥೆಯನ್ನು ಸರಿಪಡಿಸಲು ಸಾಧ್ಯ ಎಂದು ಅಭಿಪ್ರಾಯವ್ಯಕ್ತಪಡಿಸಿದರು.

ನಾನು ಮತ್ತು ನನ್ನ ಪಕ್ಷ ವೈಯಕ್ತಿಕ ಲಾಭಕ್ಕಾಗಿ ಈ ಆಂದೋಲನ ರೂಪಿಸಿರಬಹುದು ಎಂಬ ಅನುಮಾನ ಕೆಲವರಲ್ಲಿ ಇರಬಹುದು. ಆದರೆ ಅಂತಹ ಉದ್ದೇಶಕ್ಕಾಗಿ ಈ ಹೋರಾಟ ಕೈಗೆತ್ತಿಕೊಂಡಿಲ್ಲ. ದೇಶದ ಉಳಿವಿಗಾಗಿ ಹೋರಾಟ ನಡೆಸುವಂತೆ ಯುವ ಜನತೆಯನ್ನು ಪ್ರೇರೇಪಿಸುವುದೇ ನಮ್ಮ ಉದ್ದೇಶ ಎಂದು ಹೇಳಿದರು.

ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರ ನೇತೃತ್ವದಲ್ಲಿ ಹೊರಟಿರುವ ಜಾಥಾ ಸೋಮವಾರ ಶಿವಮೊಗ್ಗ ತಲುಪಲಿದೆ. ಬೀದರ್‌ನ ಬಸವಕಲ್ಯಾಣದಿಂದ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಮತ್ತೊಂದು ಜಾಥಾ ಆರಂಭವಾಗಿದೆ. ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ಬೆಳಗಾವಿಯಿಂದ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ರೇವಣ್ಣ ನೇತೃತ್ವದಲ್ಲಿ ಮಂಡ್ಯದಿಂದ, ಬನವಾಸಿಯಿಂದ ಹೋರಾಟಗಾರರ ತಂಡದ ನೇತೃತ್ವದಲ್ಲಿ ಜಾಥಾಗಳು ಶಿವಮೊಗ್ಗದತ್ತ ಪ್ರಯಾಣಿಸಲಿವೆ.

ಸೋಮವಾರ ಶಿವಮೊಗ್ಗದಲ್ಲಿ ಬೃಹತ್ ಸಮಾವೇಶ ನಡೆಸುವ ಮೂಲಕ ಮೊದಲ ಹಂತದ ಆಂದೋಲನಕ್ಕೆ ತೆರೆ ಬೀಳಲಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ತವರು ಜಿಲ್ಲೆಯಲ್ಲಿ ನಡೆಯುವ ಸಮಾವೇಶದಲ್ಲಿ ಒಂದು ಲಕ್ಷಕ್ಕೂ ಅಧಿಕ ಜನರನ್ನು ಸಂಘಟಿಸಿ ಭ್ರಷ್ಟಾಚಾರದ ವಿರುದ್ಧ ಶಕ್ತಿ ಪ್ರದರ್ಶಿಸಲು ಸಿದ್ದತೆ ನಡೆದಿದೆ.
ಇವನ್ನೂ ಓದಿ