ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ನಮಗೆ ಈಗ ಬುದ್ಧಿ ಬಂದಿದೆ; 10 ಶಾಸಕರು ಸಿಎಂಗೆ ಸಾಥ್ (BJP | Yeddyurappa | 11MLA | Congress | Bharadwaj | Kumaraswamy)
WD
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಾಯಕತ್ವ ವಿರುದ್ಧ ಬಂಡಾಯ ಸಾರಿ ರಾಜ್ಯರಾಜಕಾರಣದಲ್ಲಿ ಸಾಕಷ್ಟು ಬಿಕ್ಕಟ್ಟು ಸೃಷ್ಟಿಸಿದ್ದ 11 ಮಂದಿ ಬಿಜೆಪಿ ಶಾಸಕರು ಇದೀಗ ಮತ್ತೆ ಯಡಿಯೂರಪ್ಪಗೆ ಅಧಿಕೃತವಾಗಿ ಬೆಂಬಲ ಸೂಚಿಸುವ ಮೂಲಕ ಬಿಜೆಪಿಯಲ್ಲಿನ ಬಿಕ್ಕಟ್ಟು ಸುಖಾಂತ್ಯ ಕಂಡಂತಾಗಿದೆ.

ಭಾನುವಾರ ನವದೆಹಲಿಯ ಖಾಸಗಿ ಹೋಟೆಲ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ 10 ಮಂದಿ ಬಿಜೆಪಿ ಶಾಸಕರು, ಯಡಿಯೂರಪ್ಪನವರು ನಮ್ಮೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದರು. ಅವರ ಮಾತಿಗೆ ಬೆಲೆ ಕೊಟ್ಟು ನಾವು ಅವರ ನಾಯಕತ್ವದಲ್ಲಿಯೇ ಮುಂದುವರಿಯಲು ನಿರ್ಧರಿಸಿದ್ದೇವೆ. ಅಂದು ನಾವು ತಪ್ಪು ಮಾಡಿದ್ದು ಸತ್ಯ, ಇಂದು ನಮಗೆ ಬುದ್ದಿ ಬಂದಿರುವುದಾಗಿ ಹೇಳಿದರು.

ನಾವು ಸರಕಾರ ಹಾಗೂ ಮುಖ್ಯಮಂತ್ರಿಗಳಿಗೆ ಬೆಂಬಲ ನೀಡುವ ನಿಟ್ಟಿನಲ್ಲಿ ಯಾವುದೇ ಷರತ್ತು ಒಡ್ಡಿಲ್ಲ. ನಮಗೆ ಯಾವುದೇ ಆಫರ್ ಕೂಡ ಬಂದಿಲ್ಲ ಎಂದು ಸ್ಪಷ್ಟಪಡಿಸಿರುವ 10 ಶಾಸಕರು, ಈ ಮೊದಲು ಸ್ವಲ್ಪ ಮಟ್ಟಿನ ಭಿನ್ನಾಭಿಪ್ರಾಯ ಇದ್ದದ್ದು ನಿಜ. ಆದರೆ ಇದೀಗ ಹೈಕಮಾಂಡ್ ಸಂಧಾನಕ್ಕೆ ನಾವು ತಲೆಬಾಗಿದ್ದೇವೆ. ಹಾಗಾಗಿ ನಾವು ನಮ್ಮ ಕ್ಷೇತ್ರಕ್ಕೆ ವಾಪಸ್ ಮರಳಿ ಅಭಿವೃದ್ದಿ ಕಾರ್ಯ ತೊಡಗುವುದಾಗಿ ತಿಳಿಸಿದರು.

PR
ಪ್ರಹಸನಕ್ಕೆ ತೆರೆ:
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಾಯಕತ್ವ ಬದಲಾಗಲೇಬೇಕು ಎಂಬ ಹಠದೊಂದಿಗೆ 11 ಮಂದಿ ಪಕ್ಷೇತರರು ಹಾಗೂ ಐವರು ಪಕ್ಷೇತರರು ಬಹಿರಂಗವಾಗಿ ಬಂಡಾಯ ಸಾರಿದ್ದರು. ಅದರ ಪರಿಣಾಮ ಸ್ಪೀಕರ್ ಕೆಜಿ ಬೋಪಯ್ಯ 16 ಮಂದಿಯ ಶಾಸಕತ್ವ ಅನರ್ಹಗೊಳಿಸಿ ಆದೇಶ ಹೊರಡಿಸಿದ್ದರು.

ಈ ಸಂದರ್ಭದಲ್ಲಿ 11 ಮಂದಿ ಬಿಜೆಪಿ ಮತ್ತು ಐವರು ಪಕ್ಷೇತರರು ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ಈಶ್ವರಪ್ಪ ಸೇರಿದಂತೆ ಬಿಜೆಪಿಗೆ ಬಹಿರಂಗವಾಗಿಯೇ ವಾಚಾಮಗೋಚರವಾಗಿ ವಾಗ್ದಾಳಿ ನಡೆಸಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಅಷ್ಟೇ ಅಲ್ಲ ವಿಧಾನಸಭೆಯಲ್ಲಿ ನಡೆದ ಹೈಡ್ರಾಮಾ ಕೂಡ. ತದನಂತರ ಸ್ಪೀಕರ್ ಆದೇಶದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ 16 ಮಂದಿ ಶಾಸಕರಿಗೆ ಮುಖಭಂಗವಾಗಿತ್ತು.

ಹೈಕೋರ್ಟ್ ಸ್ಪೀಕರ್ ಆದೇಶ ಎತ್ತಿ ಹಿಡಿದ ನಂತರ ಆ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಅಲ್ಲಿ ಕಾನೂನು ಹೋರಾಟ ನಡೆಸಿ ಕೊನೆಗೂ, ಐವರು ಪಕ್ಷೇತರರು ಹಾಗೂ 11 ಮಂದಿ ಬಿಜೆಪಿ ಶಾಸಕರನ್ನು ಸ್ಪೀಕರ್ ಅನರ್ಹಗೊಳಿಸಿದ್ದ ಆದೇಶವನ್ನು ರದ್ದುಗೊಳಿಸಿತ್ತು. ಈ ಬೆಳವಣಿಗೆ ನಂತರ ಎರಡು ದಿನಗಳ ಕಾಲ ರಾಜ್ಯರಾಜಕಾರಣದಲ್ಲಿ ಸಾಕಷ್ಟು ಸರ್ಕಸ್ ನಡೆದಿತ್ತು. ಈ ಎಲ್ಲಾ ಜಂಗೀಕುಸ್ತಿ ನಡುವೆ 11 ಮಂದಿ ಬಿಜೆಪಿ ಶಾಸಕರ ಮನವೊಲಿಸುವಲ್ಲಿ ಯಡಿಯೂರಪ್ಪ ಹಾಗೂ ಹೈಕಮಾಂಡ್ ವರಿಷ್ಠರು ಯಶಸ್ವಿಯಾಗಿದ್ದಾರೆ.

PR
ಇದ್ದದ್ದು 10 ಮಂದಿ, ಪಕ್ಷೇತರರು ಎಲ್ಲಿ?:
ನವದೆಹಲಿಯ ಖಾಸಗಿ ಹೋಟೆಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ವಕ್ತಾರ ಧನಂಜಯ್ ಕುಮಾರ್ ಆರಂಭಿಕವಾಗಿ ಮಾತನಾಡುತ್ತ, ಬಿಜೆಪಿಯ 11ಜನ ಹಾಗೂ ಐವರು ಪಕ್ಷೇತರರು ಬೇಷರತ್ ಆಗಿ ಬಿಜೆಪಿ ಸರಕಾರಕ್ಕೆ ಬೆಂಬಲ ಸೂಚಿಸಿದ್ದಾರೆ ಎಂದು ತಿಳಿಸಿದರು.

ನಾವು ಯಾವುದೇ ಪೂರ್ವ ಷರತ್ತಿಲ್ಲದೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರಕ್ಕೆ ಸಂಪೂರ್ಣ ಬೆಂಬಲ ಘೋಷಿಸುವ ಸಹಿಯುಳ್ಳ ಪತ್ರವನ್ನು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರಿಗೆ ಫ್ಯಾಕ್ಸ್ ಮೂಲಕ ರವಾನಿಸಿರುವುದಾಗಿ ವಿವರಿಸಿದರು. ಅಲ್ಲದೇ ಈ ಮೊದಲು ರಾಜ್ಯಪಾಲರಿಗೆ ಸಲ್ಲಿಸಿದ್ದ ಬೆಂಬಲ ವಾಪಸ್ ಪತ್ರವನ್ನು ವಾಪಸ್ ಪಡೆಯುವುದಾಗಿಯೂ ರಾಜ್ಯಪಾಲರಿಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಅದರಲ್ಲಿ ಬಾಲಚಂದ್ರ ಜಾರಕಿಹೊಳಿ, ಸಾರ್ವಭೌಮ ಬಗಲಿ, ಶಿವನಗೌಡ ನಾಯಕ್, ಆನಂದ್ ಅಸ್ನೋಟಿಕರ್, ವೈ.ಸಂಪಂಗಿ, ರಾಜೂ ಕಾಗೆ, ಎಸ್.ಕೆ.ಬೆಳ್ಳುಬ್ಬಿ, ಬೇಳೂರು ಗೋಪಾಲಕೃಷ್ಣ, ನಂಜುಂಡಸ್ವಾಮಿ, ನಾಗರಾಜು ಎಂ.ವಿ. ಸಹಿಹಾಕಿದ್ದ ಪತ್ರವನ್ನು ಪ್ರದರ್ಶಿಸಿ, ಶಂಕರಲಿಂಗೇಗೌಡ ಬೆಂಗಳೂರಿನಲ್ಲಿ ಇದ್ದು ಅವರು ಕೂಡ ತಮ್ಮ ಬೆಂಬಲ ಘೋಷಿಸಿ ಸಹಿ ಹಾಕಲಿದ್ದಾರೆ ಎಂದರು. ಆದರೆ ಶಂಕರಲಿಂಗೇಗೌಡರು ತಾನು ಪರ ಅಥವಾ ವಿರೋಧ ಎರಡೂ ಇಲ್ಲ ತಟಸ್ಥನಾಗಿ ಉಳಿಯುವುದಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಆದರೆ ಪಕ್ಷೇತರ ಐವರು ಶಾಸಕರ ಬೆಂಬಲದ ಪತ್ರ ಎಲ್ಲಿ ಎಂದು ಸುದ್ದಿಗಾರರು ಪ್ರಶ್ನಿಸಿದಾಗ, ಅವರೆಲ್ಲರೂ ಬಿಜೆಪಿಗೆ ಬೆಂಬಲ ಘೋಷಿಸಿದ್ದಾರೆ. ಅಗತ್ಯ ಬಿದ್ದರೆ ಅವರು ಕೂಡ ಸಹಿಹಾಕಿದ ಪತ್ರ ಮುಂದೆ ಕೊಡಬಹುದು ಎಂದರು. ಅಚ್ಚರಿ ಎಂಬಂತೆ ಪತ್ರಿಕಾಗೋಷ್ಠಿಯಲ್ಲಿ ಐವರು ಪಕ್ಷೇತರರು ಗೈರುಹಾಜರಾಗಿದ್ದರು. ಅಷ್ಟೇ ಅಲ್ಲ ಅವರು ಮಾಧ್ಯಮದವರ ಪ್ರತಿಕ್ರಿಯೆಗೂ ಸಿಕ್ಕಿಲ್ಲದಿರುವುದು ಮತ್ತೊಂದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ಬೆಂಗಳೂರಿಗೆ ವಾಪಸ್:
10 ಮಂದಿ ಬಿಜೆಪಿ ಶಾಸಕರು ಹಾಗೂ ಸಚಿವರಾದ ರೇಣುಕಾಚಾರ್ಯ, ಉಮೇಶ್ ಕತ್ತಿ ಅವರೊಂದಿಗೆ ವಿಶೇಷ ವಿಮಾನದಲ್ಲಿ ಇಂದು ಮಧ್ಯಾಹ್ನ ಬೆಂಗಳೂರಿಗೆ ವಾಪಸಾಗಲಿದ್ದಾರೆ. ನಂತರ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ರಾಜ್ಯಪಾಲರ ಹಂಸರಾಜ್ ಭಾರದ್ವಾಜ್ ಅವರನ್ನು ಭೇಟಿಯಾಗಲಿದ್ದಾರೆ. ಈ ಸಂದರ್ಭದಲ್ಲಿ ಬೆಂಗಳೂರಿನಲ್ಲಿಯೇ ಇರುವ ಶಂಕರಲಿಂಗೇಗೌಡ ಕೂಡ ನಮ್ಮೊಂದಿಗೆ ಸೇರಿಕೊಳ್ಳಲಿದ್ದಾರೆ ಎಂದು ಧನಂಜಯ್ ಕುಮಾರ್ ಹೇಳಿದರು.

ಹೌದು ನಮ್ಮ ಬೆಂಬಲ ಯಡಿಯೂರಪ್ಪನವರಿಗೆ-ಬೇಳೂರು:
ನಾವೆಲ್ಲ ಶಾಸಕರು ಒಗ್ಗಟ್ಟಾಗಿದ್ದೇವೆ, ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಸರಕಾರದ ಸುಭದ್ರತೆಯ ದೃಷ್ಟಿಯಿಂದಾಗಿ ನಾವು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಾಯಕತ್ವದಲ್ಲೇ ಮುಂದುವರಿಯಲು ನಿರ್ಧರಿಸಿದ್ದೇವೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.

ಯಾವುದೇ ಬೇಡಿಕೆ ಮುಂದಿಡದೆ ಪಕ್ಷಕ್ಕೆ ವಾಪಸ್ ಆಗಿದ್ದೇವೆ. ಈ ಮೊದಲು ಸಣ್ಣ-ಪುಟ್ಟ ಭಿನ್ನಾಭಿಪ್ರಾಯ ಇದ್ದದ್ದು ಹೌದು. ಆದರೆ ಈ ಸಂದರ್ಭದಲ್ಲಿ ನಾನು ಹಿಂದಿನ ವಿಷಯದ ಬಗ್ಗೆ ಮಾತನಾಡಲ್ಲ. ಯಡಿಯೂರಪ್ಪನಾಗಲಿ ಅಥವಾ ಈಶ್ವರಪ್ಪನವರ ಬಗ್ಗೆ ನಮಗೆ ಯಾವುದೇ ಅಸಮಾಧಾನವಿಲ್ಲ. ನಾವು ಬಿಜೆಪಿ ಶಾಸಕರಾಗಿಯೇ ಮುಂದುವರಿದು, ಕ್ಷೇತ್ರದ ಅಭಿವೃದ್ಧಿಯಲ್ಲಿ ತೊಡಗುವುದಾಗಿ ಪತ್ರಿಕಾಗೋಷ್ಠಿಗೂ ಮುನ್ನ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದರು.

ಈಗ ಬುದ್ಧಿ ಬಂದಿದೆ, ನಮ್ಮ ಬೆಂಬಲ ಸಿಎಂಗೆ-ಬಗಲಿ
ಅಂದಿನ ಸನ್ನಿವೇಶಕ್ಕೆ ಅನುಗುಣವಾಗಿ ನಾವು ಅಪಸ್ವರ ಎತ್ತಿದ್ದೇವೆ. ಆದರೆ ಈಗ ಸರಕಾರ ಸುಭದ್ರವಾಗಿರಬೇಕು ಎಂಬ ನಿಟ್ಟಿನಲ್ಲಿ ಅವರ ಯಡಿಯೂರಪ್ಪ ನಾಯಕತ್ವ ಒಪ್ಪಿಕೊಂಡು ಬಿಜೆಪಿಯಲ್ಲೇ ಮುಂದುವರಿಯಲು ನಿರ್ಧರಿಸಿದ್ದೇವೆ. ಈಗ ನಮಗೆ ಬುದ್ದಿ ಬಂದಿದೆ ಎಂದವರು ಶಾಸಕ ಡಾ.ಸಾರ್ವಭೌಮ ಬಗಲಿ ಅಭಿಪ್ರಾಯವ್ಯಕ್ತಪಡಿಸಿದರು.

WD
ಠುಸ್ ಆದ ಕುಮಾರಸ್ವಾಮಿ ತಂತ್ರ:
ಆಡಳಿತಾರೂಢ ಬಿಜೆಪಿ ಸರಕಾರವನ್ನು ಉರುಳಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ 16 ಮಂದಿ ಶಾಸಕರನ್ನು ದಾಳವನ್ನಾಗಿ ಉಪಯೋಗಿಸಿಕೊಂಡಿತ್ತು. ಆದರೆ ಅದು ನ್ಯಾಯಾಲಯದ ತೀರ್ಪಿನ ಮೇಲೆ ಅವಲಂಬಿತವಾಗಿತ್ತು. 16 ಮಂದಿ ಪರವಾಗಿ ತೀರ್ಪು ಬಂದ ನಂತರ, ಜೆಡಿಎಸ್ ರಾಜ್ಯಾಧ್ಯಕ್ಷ ದೆಹಲಿಗೆ ದೌಡಾಯಿಸಿದ್ದರು. ಆದರೆ ತಾನು ದೆಹಲಿಗೆ ಶಾಸಕರನ್ನು ಓಲೈಸಲು ಬಂದಿಲ್ಲ ಎಂದು ಸಮಜಾಯಿಷಿ ನೀಡಿದರು. ತೆರೆಮರೆಯಲ್ಲಿ ಭಿನ್ನರ ಜತೆ ಮಾತುಕತೆ ನಡೆಸಿದ್ದರು. ಏತನ್ಮಧ್ಯೆ ಬಿಜೆಪಿಯ ಪರವಾಗಿ ಸಚಿವರಾದ ರೇಣುಕಾಚಾರ್ಯ, ಉಮೇಶ್ ಕತ್ತಿ, ಗೋವಿಂದ ಕಾರಜೋಳ 11 ಮಂದಿ ಜತೆ ಸಂಧಾನ ನಡೆಸಿ ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು. ಕುತೂಹಲ ಎಂಬಂತೆ ಐವರು ಪಕ್ಷೇತರರು ಸದ್ಯದ ಪರಿಸ್ಥಿತಿಯಲ್ಲಿ ಕುಮಾರಸ್ವಾಮಿ ಜತೆ ತಮ್ಮ ಮುಂದಿನ ನಡೆ ಬಗ್ಗೆ ಮಾತುಕತೆ ನಡೆಸುತ್ತಿದ್ದಾರೆ. ಒಟ್ಟಾರೆ ಬೆಳವಣಿಗೆಯಲ್ಲಿ ಕುಮಾರಸ್ವಾಮಿ ತಂತ್ರ ಈ ಬಾರಿಯೂ ಠುಸ್ ಆದಂತಾಗಿದೆ.
ಇವನ್ನೂ ಓದಿ