ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » 10 ಬಿಜೆಪಿ ಶಾಸಕರು ಬದಲಾದದ್ದು ಹೇಗೆ?: ದೇವೇಗೌಡ (BJP | Congress | Deve gowda | JDS | Yeddyurappa | Operation lotus)
ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಿರುವ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ನಿರ್ಧಾರಕ್ಕೆ ಕೇಂದ್ರ ಸರಕಾರ ಒಪ್ಪಿಗೆ ಕೊಡಲಿದೆ ಎಂಬ ವಿಶ್ವಾಸವನ್ನು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ವ್ಯಕ್ತಪಡಿಸಿದ್ದಾರೆ.

ಪಕ್ಷದ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಕೇಂದ್ರದ ಕ್ರಮಕ್ಕೆ ಕಾಲಮಿತಿ ನಿಗದಿಪಡಿಸಲು ನನ್ನಿಂದ ಸಾಧ್ಯವಿಲ್ಲ. ಏನೇ ಆಗಲಿ ರಾಜ್ಯಪಾಲರು ಕಳುಹಿಸಿರುವ ಶಿಫಾರಸನ್ನು ಕೇಂದ್ರ ಸರಕಾರ ಮಾನ್ಯ ಮಾಡಲಿದೆ ಎಂಬ ವಿಶ್ವಾಸ ನನಗಿದೆ ಎಂದರು. ಇಂದೇ ಅಥವಾ ನಾಳೆ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಲು ಬರುವುದಿಲ್ಲ. ಇದು ಕೇಂದ್ರ ಸರಕಾರದ ವಿವೇಚನೆಗೆ ಬಿಟ್ಟಿದ್ದು ಎಂದು ತಿಳಿಸಿದರು.

ರಾಜ್ಯ ಸರಕಾರ ನಡೆಸುತ್ತಿರುವ ಆಪರೇಶನ್ ಕಮಲದ ಬಗ್ಗೆ ತೀವ್ರ ವಾಗ್ದಾಳಿ ನಡೆಸಿದ ಅವರು, ಈ ಸರಕಾರ ಆಪರೇಶನ್ ಕಮಲದಿಂದ ಹುಟ್ಟಿತು. ಈಗಲೂ ಅದರಿಂದಲೇ ಉಸಿರಾಡುತ್ತಿದೆ. ಅಪರೇಶನ್ ಕಮಲದಲ್ಲೇ ಸಾಯುತ್ತದೆ ಎಂದು ಕಿಡಿಕಾರಿದರು.

ಇದು ಕ್ಯಾನ್ಸರ್‌ಗಿಂತಲೂ ದೊಡ್ಡ ಪಿಡುಗಾಗಿದೆ, ಮಾರಕವಾಗಿದೆ. ಇದನ್ನು ಎಲ್ಲ ಜಾತ್ಯತೀತ ಶಕ್ತಿಗಳು ಸೇರಿ ತಡೆಗಟ್ಟಬೇಕು. ಇಲ್ಲದೆ ಹೋದಲ್ಲಿ ಸರ್ವನಾಶ, ಪರಿಸಮಾಪ್ತಿ ಆಗುತ್ತದೆ. ಆದ್ದರಿಂದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇರುವಂತಹ ಎಲ್ಲ ಜಾತ್ಯತೀತ ಶಕ್ತಿಗಳು ಆಪರೇಶನ್ ಕಮಲದ ವಿರುದ್ದ ಒಗ್ಗಟ್ಟಾಗಿ ಹೋರಾಟ ನಡೆಸುವ ಪ್ರಯತ್ನ ಮಾಡಬೇಕಾಗಿದೆ ಎಂದರು.

ಸುಪ್ರೀಂಕೋರ್ಟ್ ಹನ್ನೊಂದು ಬಿಜೆಪಿ ಶಾಸಕರು ಮತ್ತು ಐದು ಮಂದಿ ಪಕ್ಷೇತರ ಶಾಸಕರ ವಿಚಾರದಲ್ಲಿ ತೀರ್ಪು ಕೊಟ್ಟ ನಂತರ ಸ್ಪೀಕರ್ ಕೆ.ಜಿ.ಬೋಪಯ್ಯ ಅವರು ತಕ್ಷಣ ತಮ್ಮ ಹುದ್ದೆಗೆ ರಾಜೀನಾಮೆ ಕೊಡಬೇಕಾಗಿತ್ತು ಎಂದು ಹೇಳಿದರು. ಸರಕಾರದ ವಿರುದ್ಧ ಬಂಡಾಯ ಸಾರಿದ್ದ 10 ಮಂದಿ ಬಿಜೆಪಿ ಶಾಸಕರು ತೀರ್ಪು ಬರುತ್ತಿದ್ದಂತೆಯೇ ಬದಲಾದ ಬಗೆ ಹೇಗೆ? ಇದೊಂದೇ ಕಾರಣ ಸಾಕು ರಾಜ್ಯ ಸರಕಾರವನ್ನು ವಜಾ ಮಾಡಲು ಎಂದು ಗೌಡರು ವಾಗ್ದಾಳಿ ನಡೆಸಿದರು.

ಅಧಿಕಾರದ ಉಳಿವಿಗಾಗಿ ಬಿಜೆಪಿ ಸಂವಿಧಾನದ ಎಲ್ಲ ತತ್ವ, ನಿಯಮಗಳನ್ನು ಗಾಳಿಗೆ ತೂರಿದೆ. ಪಕ್ಷಾಂತರಿಗಳಿಗೆ ಆಮಿಷ ಒಡ್ಡುತ್ತಿದೆ. ಮತ್ತೆ ಆಪರೇಶನ್ ಕಮಲ ಮಾಡುವ ಸುಳಿವಿದೆ. ಇಂತಹ ಸನ್ನಿವೇಶದಲ್ಲಿ ಎಲ್ಲ ಪಕ್ಷಗಳು ಒಂದಾಗಬೇಕು ಎಂದರು.
ಇವನ್ನೂ ಓದಿ