ಜೂನ್ 2ರಿಂದ ಹತ್ತು ದಿನಗಳ ಕಾಲ ನಡೆಸಲು ಉದ್ದೇಶಿಸಿರುವ ವಿಧಾನಮಂಡಲ ಅಧಿವೇಶನಕ್ಕೆ ಗುರುವಾರ ಸಂಜೆಯೊಳಗೆ ಅನುಮತಿ ನೀಡಬೇಕು ಎಂದು ಕೇಂದ್ರ ಮತ್ತು ರಾಜ್ಯಪಾಲರಿಗೆ ಡೆಡ್‌ಲೈನ್ ನೀಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಲ್ಲದಿದ್ದರೆ ರಾಜ್ಯಾದ್ಯಂತ ತೆರೆದ ಜೀಪ್‌ನಲ್ಲಿ ಪ್ರವಾಸ ನಡೆಸಿ ಜನಾಭಿಪ್ರಾಯ ಸಂಗ್ರಹಿಸಿ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಗುರುವಾರ ಬೆಳಿಗ್ಗೆ ವೈಷ್ಣೋದೇವಿ ದರ್ಶನಕ್ಕೆ ನವದೆಹಲಿಗೆ ತೆರಳುವ ಮುನ್ನ ಸುದ್ದಿಗಾರರ ಜತೆ ಮಾತನಾಡಿದ ಅವರು,ಅಧಿವೇಶನ ನಡೆಸಲು ಇಂದು ಸಂಜೆಯೊಳಗೆ ನನಗೆ ಅನುಮತಿ ಕೊಡಬೇಕು ಎಂದು ಕೇಂದ್ರ ಮತ್ತು ರಾಜ್ಯಪಾಲರಿಗೆ ಅಂತಿಮ ಗಡುವು ನೀಡುತ್ತೇನೆ. ಜನಾದೇಶದಿಂದ ಬಹುಮತ ಹೊಂದಿರುವ ಸರಕಾರದ ಮೇಲೆ ಈ ರೀತಿ ಜಂಗೀಕುಸ್ತಿ ನಡೆಸುವುದು ಒಳ್ಳೆಯದಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಾನು ಇಂದು ವೈಷ್ಣೋದೇವಿ ದರ್ಶನ ಪಡೆದು ಸಂಜೆಯೇ ಬೆಂಗಳೂರಿಗೆ ವಾಪಸ್ ಆಗುತ್ತೇನೆ. ಅಷ್ಟರೊಳಗೆ ನನಗೆ ಅಧಿವೇಶನ ನಡೆಸುವ ಕುರಿತಂತೆ ಅನುಮತಿ ನೀಡುವ ಬಗ್ಗೆ ಅವರಿಂದ ಉತ್ತರ ಬಂದಿರಬೇಕು. ಇಲ್ಲದಿದ್ದರೆ ನಾಳೆಯಿಂದಲೇ ತೆರೆದ ಜೀಪ್‌ನಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಿ ಜನಾಭಿಪ್ರಾಯ ಸಂಗ್ರಹಿಸಿ ಹೋರಾಟ ನಡೆಸುತ್ತೇನೆ. ಹೋರಾಟದ ನೇತೃತ್ವವನ್ನು ನಾನೇ ವಹಿಸಿಕೊಳ್ಳುತ್ತೇನೆ ಎಂದರು.
ಈ ಸಂದರ್ಭದಲ್ಲಿ ಕೇಂದ್ರ ಸರಕಾರ, ರಾಜ್ಯಪಾಲರು ಹಾಗೂ ಕಾಂಗ್ರೆಸ್, ಜೆಡಿಎಸ್ ಪಿತೂರಿಯನ್ನು ಜನರ ಮುಂದಿಡುತ್ತೇನೆ. ರಾಜ್ಯ ಸರಕಾರದ ಅಭಿವೃದ್ಧಿ ಕಾರ್ಯ, ವಿಪಕ್ಷಗಳು ಅಡ್ಡಗಾಲು ಹಾಕುತ್ತಿರುವ ಬಗ್ಗೆ ಜನರಿಗೆ ಮನದಟ್ಟು ಮಾಡಿಕೊಡುವುದಾಗಿ ಹೇಳಿದರು. ಇಂದು ಸಂಜೆಯೊಳಗೆ ಕೇಂದ್ರ, ರಾಜ್ಯಪಾಲರು ತಮ್ಮ ನಿಲುವು ಸ್ಪಷ್ಟಪಡಿಸಬೇಕು. ಇಲ್ಲಾಂದ್ರೆ ಅಲ್ಲಲ್ಲಿ ಸಭೆ, ಸಮಾರಂಭ ನಡೆಸುತ್ತ ತೀವ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದರು.