ರಾಜ್ಯಪಾಲರ ವರದಿ ಆಧಾರದ ಮೇಲೆ ಬಿಜೆಪಿ ಸರಕಾರವನ್ನು ವಜಾ ಮಾಡುವ ಸುವರ್ಣ ಅವಕಾಶ ಇದ್ದರೂ ಅದನ್ನು ಬಳಕೆ ಮಾಡದ ಕೇಂದ್ರ ಸರಕಾರ ಈಗ ರಾಜ್ಯಕ್ಕೆ ಸಲಹಾ ವರದಿ ಕಳುಹಿಸಿ ಯಾವ ಪುರುಷಾರ್ಥ ಸಾಧನೆ ಮಾಡಲಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಬಿಜೆಪಿ ಒಂದೇ ನಾಣ್ಯದ ಮುಖಗಳು. ಅವುಗಳ ನಡುವೆ ವ್ಯತ್ಯಾಸ ಕಾಣಲು ಸಾಧ್ಯವೇ ಇಲ್ಲ. ಇನ್ನು ಮುಂದೆ ಭವಿಷ್ಯದಲ್ಲಿ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಜತೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಭೀಷ್ಮ ಪ್ರತಿಜ್ಞೆ ಮಾಡಿದ್ದಾರೆ.
ರಾಜ್ಯ ಸರಕಾರದ ವಿರುದ್ಧ ಆರಂಭಿಸಿರುವ ಹೋರಾಟವನ್ನು ಕೈಬಿಡುವ ಪ್ರಶ್ನೆಯೇ ಇಲ್ಲ. ಬಿಜೆಪಿ ಸರಕಾರದ ಭ್ರಷ್ಟಾಚಾರದ ಕರ್ಮಕಾಂಡಗಳನ್ನು ಬಯಲಿಗೆಳೆಯುತ್ತೇವೆ. ಅಗತ್ಯವಿದ್ದರೆ ಸುಪ್ರೀಂಕೋರ್ಟ್ ತನಕ ಹೋಗಿ ಹೋರಾಟ ಮಾಡುತ್ತೇವೆ. ಈ ವಿಚಾರದಲ್ಲಿ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದರು.
ಬಿಜೆಪಿ ಸರಕಾರ ಮೂರು ವರ್ಷಗಳ ಅವಧಿಯಲ್ಲಿ ನಡೆಸಿರುವ ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಇವುಗಳನ್ನು ಜನತೆಗೆ ಮುಟ್ಟಿಸುವ ಮೂಲಕ ನಮ್ಮ ಪಕ್ಷವನ್ನು ಸಂಘಟಿಸಿ ಯಾರ ಹಂಗು ಇಲ್ಲದೆ ಸ್ವತಂತ್ರವಾಗಿ ಪಕ್ಷವನ್ನು ಅಧಿಕಾರಕ್ಕೆ ತರುವ ಕೆಲಸಕ್ಕೆ ವಿಶೇಷ ಗಮನ ಕೊಡುತ್ತೇನೆ. ಈ ಬಗ್ಗೆ ಎಲ್ಲಾ ನಾಯಕರ ಜತೆ ಮಾತುಕತೆ ನಡೆಸಿ ಕಾರ್ಯಕ್ರಮ ನಡೆಸುವುದಾಗಿ ಹೇಳಿದರು.