ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಸಂಧಾನಕ್ಕಾಗಿ ಅಂಗಲಾಚಿದ ಯಡಿಯೂರಪ್ಪ: ಎಚ್‌ಡಿಕೆ ಬಾಂಬ್ (Kumaraswamy | BJP | Yeddyurappa | Deve gowda | JDS | Congress,)
WD
ರಾಜ್ಯ ಬಿಜೆಪಿ ನಾಯಕರ ಎಲ್ಲಾ ಅವ್ಯವಹಾರವನ್ನು ಜೂನ್ 22ರಂದು ದೆಹಲಿಯಲ್ಲಿ ಬಯಲು ಮಾಡುವುದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗುಡುಗಿರುವ ಬೆನ್ನಲ್ಲೇ ಮತ್ತೊಂದೆಡೆ ಇದರಿಂದ ವಿಚಲಿತರಾಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತೆರೆಮರೆಯಲ್ಲಿ ಸಂಧಾನಕ್ಕೆ ಯತ್ನಿಸಿದ್ದಾರೆಂಬ ಸ್ಫೋಟಕ ಸುದ್ದಿ ರಾಜ್ಯರಾಜಕಾರಣದ ಪಡಸಾಲೆಯಲ್ಲಿ ದಟ್ಟವಾಗಿ ಹರಿದಾಡುತ್ತಿದೆ.

ಯಡಿಯೂರಪ್ಪನವರು ಕೇರಳದ ಕೊಟ್ಟಕಲ್ ಆರ್ಯವೈದ್ಯ ಶಾಲಾಗೆ ಹೋಗಿದ್ದು ವಿವಿಧ ಚಿಕಿತ್ಸೆಗಾಗಿ ಅಲ್ಲ, ಕುಮಾರಸ್ವಾಮಿ ಅವರ ಜತೆ ಸಂಧಾನ ನಡೆಸಲು ಎನ್ನಲಾಗಿದೆ.

ಕುಮಾರಸ್ವಾಮಿ ಯಡಿಯೂರಪ್ಪ ಸೇರಿದಂತೆ ಬಿಜೆಪಿ ಮುಖಂಡರ ಭಾರೀ ಹಗರಣವನ್ನು ಬಹಿರಂಗ ಮಾಡಲು ಮುಂದಾಗಿದ್ದರೆನ್ನಲಾಗಿದ್ದು, ಲೋಕಸಭೆಯಲ್ಲೂ ಪ್ರಸ್ತಾಸಿಸುವ ಮೂಲಕ ಬಿಜೆಪಿ ಹೈಕಮಾಂಡ ಅನ್ನೇ ಇಕ್ಕಟ್ಟಿಗೆ ಸಿಲುಕಿಸುವ ಸಿದ್ದತೆ ನಡೆದಿರುವುದರಿಂದ ಯಡಿಯೂರಪ್ಪ ಸಂಧಾನಕ್ಕೆ ಮುಂದಾಗಿದ್ದಾರೆ.

ಜೂನ್ 8ರಂದು ಕುಮಾರಸ್ವಾಮಿ ಆಪ್ತರಾದ ಮೂರ್ತಿಗೆ ಆರ್ಯವೈದ್ಯ ಶಾಲಾ ಕಳಿಸಿದ ಇ-ಮೇಲ್‌ನಲ್ಲಿ ಜೂನ್ 12ರಿಂದ 14 ದಿನಗಳ ಕಾಲ ಕುಮಾರಸ್ವಾಮಿ ಚಿಕಿತ್ಸೆ ಪಡೆಯಲು ರೂಮ್ ಕಾದಿರಿಸಲಾಗಿದೆ ಎಂದು ತಿಳಿಸಲಾಗಿತ್ತು. ಈ ವಿಷಯವನ್ನು ತಿಳಿದುಕೊಂಡ ಮುಖ್ಯಮಂತ್ರಿ ಯಡಿಯೂರಪ್ಪನವರೂ ಕೂಡ ಆ ಸಂದರ್ಭಕ್ಕೆ ಅನುಕೂಲವಾಗುವಂತೆ ರೂಮ್ ಬುಕ್ ಮಾಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆರ್ಯವೈದ್ಯ ಶಾಲಾದಲ್ಲಿ ಕುಮಾರಸ್ವಾಮಿ ಏಕಾಂತದಲ್ಲಿ ಇರುವುದರಿಂದ ಆಗ ತಾವು ರಾಜಿ ಮಾಡಿಕೊಳ್ಳುವ ಲೆಕ್ಕಚಾರದಿಂದ ಸಿಎಂ ಕೊಟ್ಟಕಲ್‌ನಲ್ಲಿ ಚಿಕಿತ್ಸೆ ಪಡೆಯಲು ನಿರ್ಧರಿಸಿದ್ದರು. ರಾಜಿ ಸಂಧಾನದ ಕುರಿತು ಸಿಎಂ ಆಪ್ತ, ವಿಧಾನಪರಿಷತ್ ಸದಸ್ಯ ಲೇಹರ್ ಸಿಂಗ್ ಕುಮಾರಸ್ವಾಮಿ ಜತೆ ದೂರವಾಣಿಯಲ್ಲಿ ಚರ್ಚಿಸಿದ್ದಾರೆಂದು ಮೂಲಗಳು ಹೇಳುತ್ತಿವೆ.

ಏತನ್ಮಧ್ಯೆ, ಚಿಕಿತ್ಸೆಗಾಗಿ ಯಾವಾಗಲೂ ಜಿಂದಾಲ್‌ಗೆ ಹೋಗುತ್ತಿದ್ದ ಯಡಿಯೂರಪ್ಪ ಸಂಧಾನಕ್ಕಾಗಿ ದಿಢೀರ್ ಕೊಟ್ಟಕಲ್ ಚಿಕಿತ್ಸೆಯ ನಾಟಕವಾಡಿದ್ದು ತಿಳಿಯುತ್ತಿದ್ದಂತೆಯೇ ಕುಮಾರಸ್ವಾಮಿ ಕೇರಳ ಭೇಟಿ ರದ್ದುಪಡಿಸಿದ್ದಾರೆ. ಒಟ್ಟಾರೆ ಸಿಎಂ ಕೊಟ್ಟಕಲ್‌ನಲ್ಲಿ ಸುಮ್ಮನೆ ಚಿಕಿತ್ಸೆ ಪಡೆಯುವಂತಾಗಿದೆ!

WD
ಹೌದು...ಸಿಎಂ ಸಂಧಾನಕ್ಕಾಗಿ ಅಂಗಲಾಚಿದ್ದರು: ಕುಮಾ
ದಯವಿಟ್ಟು ಇನ್ಮುಂದೆ ಯಾವುದೇ ದಾಖಲೆಯನ್ನು ಬಿಡುಗಡೆ ಮಾಡಬೇಡಿ.ಯಾಕೆ ಸುಮ್ಮನೆ ನಾವು-ನೀವು ಹೊಡೆದಾಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೇರಳಕ್ಕೆ ಸಂಧಾನಕ್ಕಾಗಿ ಆಹ್ವಾನಿಸಿರುವುದು ಸತ್ಯ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಯಾವುದೇ ದಾಖಲೆ ಬಿಡುಗಡೆ ಮಾಡಬೇಡಿ ಎಂದು ಮಧ್ಯವರ್ತಿ ಮೂಲಕ ಸಂಪರ್ಕಿಸಿರುವ ಯಡಿಯೂರಪ್ಪ, ನಿಮಗೆ ಏನು ಬೇಕು ಅದನ್ನು ಮಾಡಿಕೊಡುತ್ತೇನೆ. ಅಷ್ಟೇ ಅಲ್ಲ ನಿಮಗೆ ತಿಂಗಳಿಗೆ ಎಷ್ಟು ಹಣ ಬೇಕು ಅಂತ ಹೇಳಿ ಅದನ್ನು ಮನೆ ಬಾಗಿಲಿಗೆ ತಲುಪಿಸುವುದಾಗಿಯೂ ಭರವಸೆ ಕೊಟ್ಟಿದ್ದಾರೆಂದು ಬಹಿರಂಗಪಡಿಸಿದ್ದಾರೆ.

ಬಿಜೆಪಿ ಹಾಗೂ ನನಗೆ ಸಂಬಂಧಿಸಿದ ಯಾವುದೇ ದಾಖಲೆಯನ್ನು ಬಿಡುಗಡೆ ಮಾಡದೆ, ಮೌನಕ್ಕೆ ಶರಣಾಗಿ ಎಂಬ ಸಂದೇಶದೊಂದಿಗೆ ಮುಖ್ಯಮಂತ್ರಿಗಳು ಸಂಧಾನಕ್ಕೆ ಆಹ್ವಾನಿಸಿದ್ದರು ಎಂದ ಕುಮಾರಸ್ವಾಮಿ, ದೇವೇಗೌಡರ ಕುಟುಂಬವನ್ನು ಹಣದಿಂದ ಯಾರೂ ಕೊಂಡುಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ಅವರು ತಿಳಿದುಕೊಳ್ಳಲಿ ಎಂದು ತಿರುಗೇಟು ನೀಡಿದರು.

ನಾನಾಗಲಿ, ನಮ್ಮ ಕುಟುಂಬವಾಗಲಿ ಹಣ ಆಮಿಷಕ್ಕೋ, ನಮ್ಮ ಸ್ವಾರ್ಥಕ್ಕಾಗಿ ಕೆಲಸ ಕಾರ್ಯ ಮಾಡಿಕೊಳ್ಳಲು ಮುಂದಾಗಿದ್ದರೆ ಬಿಜೆಪಿ ಭ್ರಷ್ಟ ವ್ಯವಸ್ಥೆಯನ್ನು ಜನರ ಮುಂದೆ ತರಲು ಸಾಧ್ಯವಾಗುತ್ತಿರಲಿಲ್ಲ. ಇದನ್ನು ರಾಜ್ಯದ ಜನತೆ ಅರ್ಥಮಾಡಿಕೊಳ್ಳಬೇಕು ಎಂದು ಈ ಸಂದರ್ಭದಲ್ಲಿ ಹೇಳಿದರು.
ಇವನ್ನೂ ಓದಿ