ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬನ್ನಿ ಧರ್ಮಸ್ಥಳದಲ್ಲಿ ಆಣೆ ಮಾಡೋಣ: ಸಿಎಂ ಸವಾಲ್ (BJP | Yeddyurappa | Kumaraswamy | JDS | Dharmasthala | Deve gowda)
PR
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ದೇವೇಗೌಡರ ಕುಟುಂಬದ ನಡುವಿನ ಜಂಗೀಕುಸ್ತಿ ಮುಂದುವರಿದಿದ್ದು, ಇದೀಗ ಸಂಧಾನಕ್ಕಾಗಿ ತನ್ನನ್ನು ಕೇರಳಕ್ಕೆ ಆಹ್ವಾನಿಸಿದ್ದಾರೆ ಎಂಬ ಹೇಳಿಕೆಯ ಸತ್ಯಾಸತ್ಯತೆ ರಾಜ್ಯದ ಜನರಿಗೆ ತಿಳಿಸುವ ಕುರಿತು ಧರ್ಮಸ್ಥಳದ ಮಂಜುನಾಥನ ಸನ್ನಿಧಿಯಲ್ಲಿ ಪ್ರಮಾಣ ಮಾಡಲು ಬರುವಂತೆ ಯಡಿಯೂರಪ್ಪ ಬಹಿರಂಗ ಸವಾಲು ಹಾಕಿದ್ದಾರೆ. ಈ ಸವಾಲನ್ನು ಸ್ವೀಕರಿಸಿರುವುದಾಗಿ ಕುಮಾರಸ್ವಾಮಿಯೂ ತಿಳಿಸಿದ್ದಾರೆ.

ದಯವಿಟ್ಟು ಇನ್ಮುಂದೆ ದಾಖಲೆ ಬಿಡುಗಡೆ ಮಾಡಬೇಡಿ. ನಿಮಗೆ ಏನು ಬೇಕೋ ಅದನ್ನು ಮಾಡಿಕೊಡುತ್ತೇನೆ. ಅಷ್ಟೇ ಅಲ್ಲ ನಿಮಗೆ ತಿಂಗಳಿಗೆ ಎಷ್ಟು ಹಣ ಬೇಕು ಅಂತ ಹೇಳಿ ಅದನ್ನು ನಿಮ್ಮ ಮನೆ ಬಾಗಿಲಿಗೆ ತಲುಪಿಸುವ ಭರವಸೆಯೊಂದಿಗೆ ತಮ್ಮ ಆಪ್ತರೊಬ್ಬರ ಮೂಲಕ ಯಡಿಯೂರಪ್ಪ ಸಂಧಾನಕ್ಕಾಗಿ ಅಂಗಲಾಚಿರುವುದಾಗಿ ಕುಮಾರಸ್ವಾಮಿ ಎರಡು ದಿನಗಳ ಹಿಂದಷ್ಟೇ ಬಾಂಬ್ ಸಿಡಿಸಿದ್ದರು.

ಆ ನಿಟ್ಟಿನಲ್ಲಿ ಪತ್ರಿಕೆಗಳಲ್ಲಿ 'ಗೌರವಾನ್ವಿತ ಮಾಜಿ ಕುಮಾರಸ್ವಾಮಿಯವರಿಗೊಂದು ಬಹಿರಂಗ ಪತ್ರ' ಎಂದು ಜಾಹೀರಾತು ನೀಡುವ ಮೂಲಕ ಪ್ರತಿಕ್ರಿಯೆ ನೀಡಿ ಬಹಿರಂಗ ಸವಾಲೊಡ್ಡಿದ್ದಾರೆ.

ಮಾಜಿ ಮುಖ್ಯಮಂತ್ರಿಯೊಬ್ಬರು ಇಷ್ಟೊಂದು ಘೋರ ಸುಳ್ಳನ್ನು ಹೇಳಬಹುದು ಎಂಬುದನ್ನು ನಂಬಲು ಸಾಧ್ಯವಿಲ್ಲ. ಆದರೆ ನಿಮ್ಮದೇ ವಾಣಿಯಲ್ಲಿ ಕೇಳಿದಾಗ ನಂಬಲೇಬೇಕಾಯಿತು. ಸಾವಿರ ಸುಳ್ಳನ್ನು ಹೇಳಿ ಅದನ್ನು ಸತ್ಯ ಮಾಡಬಹುದೆಂದು ನೀವು ನಂಬಿದ ಹಾಗಿದೆ. ನನ್ನ ಮತ್ತು ನಿಮ್ಮ ಮಾತುಗಳನ್ನು ದೇಶದ ಜನರು ಕೇಳಿಸಿಕೊಳ್ಳುತ್ತಿದ್ದಾರೆ. ಜನರು ಬುದ್ದಿವಂತರು, ಯಾರು ಹೇಗೆ? ಎನ್ನುವುದನ್ನು ನಿರ್ಧಾರ ಮಾಡುವ ಶಕ್ತಿ ಅವರಿಗಿದೆ ಎಂದು ಜಾಹೀರಾತಿನಲ್ಲಿ ತಿರುಗೇಟು ನೀಡಿದ್ದಾರೆ.

ಧರ್ಮಸ್ಥಳದಲ್ಲಿ ಪ್ರಮಾಣ ಮಾಡೋಣ ಬನ್ನಿ:
ಕಳೆದ ಮೂರು ವರ್ಷಗಳಲ್ಲಿ ರೈತರ ಬಡವರ ಕಣ್ಣೀರನ್ನು ಒರೆಸುವ ಹಲವಾರು ಕಾರ್ಯಕ್ರಮಗಳನ್ನು ಹಾಕಿದ್ದೇನೆಂಬ ತೃಪ್ತಿ ನನಗಿದೆ. ನಾನು ಮುಖ್ಯಮಂತ್ರಿಯಾದ ದಿನದಿಂದ ನಿರಂತರವಾದ ಆರೋಪಗಳನ್ನು ಮಾಡುತ್ತಾ ಬಂದಿದ್ದೀರಿ. ಜಾತಿಯ ಪಟ್ಟ ಕಟ್ಟಿದ್ದೀರಿ. ನ್ಯಾಯಯುತವಾಗಿ ಮಾಡಿದ ವ್ಯವಹಾರಕ್ಕೂ ಅಕ್ರಮದ ಪಟ್ಟ ಕಟ್ಟಿದ್ದೀರಿ. ನೀವು ಪ್ರಯೋಗ ಮಾಡಿದ ಎಲ್ಲಾ ಬಾಣಗಳು ವಿಫಲವಾದಾಗ ಹೊಸದಾದ ಅಸ್ತ್ರವನ್ನು ಎರಡು ದಿನಗಳ ಹಿಂದೆ ಪ್ರಯೋಗ ಮಾಡಿದ್ದೀರಿ. ಇದರ ಹಿಂದಿನ ಉದ್ದೇಶ ರಾಜ್ಯದ ಜನತೆಗೆ ಅರ್ಥವಾಗುತ್ತದೆ.

ನಾನು ನಿಮಗೆ ಹಣದ ಆಮಿಷ ಒಡ್ಡಿದ್ದೇನೆ, ಸಂಧಾನಕ್ಕೆ ಆಹ್ವಾನಿಸಿದ್ದೇನೆ, ದೆಹಲಿಯಲ್ಲಿ ದಾಖಲೆ ಬಿಡುಗಡೆ ಮಾಡಬೇಡಿ ಎಂದು ಕೇಳಿದ್ದೇನೆ. ಬೇಕಾದ ಅಧಿಕಾರಿಗಳನ್ನು ಹಾಕಿಕೊಳ್ಳಿ ಎಂದು ಹೇಳಿದ್ದೇನೆ, ಪಕ್ಷ ಕಟ್ಟಿ, ಮುಂದೆ ಒಟ್ಟಾಗಿ ಸರಕಾರ ನಡೆಸೋಣ ಎಂದು ಕೇಳಿದ್ದೇನೆ, ಅದೆಲ್ಲವನ್ನೂ ಮಾತನಾಡಲು ಕೊಟ್ಟಕಲ್‌ಗೆ ನಿಮ್ಮನ್ನು ಆಹ್ವಾನಿಸಿದ್ದೇನೆ ಎಂಬ ಪುಂಖಾನುಪುಂಖವಾದ ಸುಳ್ಳನ್ನು ಜನರ ಮುಂದೆ ಹೇಳಿದ್ದೀರಿ. ಇದನ್ನು ಜನ ನಂಬಬಹುದು ಅಥವಾ ಬಿಡಬಹುದು. ಆದರೆ ನಾನು ಜನರ ಮುಂದೆ ಸತ್ಯ ಹೇಳಬೇಕಾಗಿದೆ.

ಸತ್ಯವನ್ನು ಕೋರ್ಟ್‌ನಲ್ಲಿ ಸಾಬೀತು ಮಾಡಲು ಸಾಧ್ಯವೇ?ಯೋಚಿಸುತ್ತಿದ್ದೆ, ಸಾಧ್ಯವಾಗಬಹುದು ಅಥವಾ ಇಲ್ಲದೇ ಹೋಗಬಹುದು ಅಥವಾ ನಮ್ಮ ವ್ಯವಸ್ಥೆಯಲ್ಲಿ ತುಂಬ ಸಮಯ ಹಿಡಿಯಬಹುದು. ಅದಕ್ಕಾಗಿ ನಾನು ಒಂದು ನಿರ್ಧಾರಕ್ಕೆ ಬಂದಿದ್ದೇನೆ. ನಾನು ದೈವಭಕ್ತ. ದೇವರು, ಸತ್ಯ, ಧರ್ಮ, ಕಾಯಕದ ಮೇಲೆ ನಂಬಿಕೆ ಇಟ್ಟಿರುವವನು. ನೀವೂ ದೈವ ಭಕ್ತರು. ರಾಜ್ಯದ ಜನಕ್ಕೆ ಸತ್ಯ ಗೊತ್ತಾಗಬೇಕು. ಅದಕ್ಕಾಗಿ ನ್ಯಾಯ ದೇಗುಲವೆಂದೇ ಹೆಸರಾಗಿರುವ ಧರ್ಮಸ್ಥಳಕ್ಕೆ ಬನ್ನಿ. ಅಲ್ಲಿ ಶ್ರೀ ಮಂಜುನಾಥನ ಮುಂದೆ, ಸ್ವಾಮಿ ಅಣ್ಣಪ್ಪನ ಮುಂದೆ, ನಾನು ನಿಮ್ಮ ಜೊತೆ ಯಾವುದೇ ಒಪ್ಪಂದಕ್ಕೆ ಆಹ್ವಾನ ನೀಡಿಲ್ಲ ಎಂದು ಮಾಡಲು ಸಿದ್ದನಿದ್ದೇನೆ. ನೀವು ಕುಟುಂಬ ಸಮೇತರಾಗಿ ಧರ್ಮಸ್ಥಳಕ್ಕೆ ಬನ್ನಿ. ಅಲ್ಲೇ ನಾವು ನೀವು ಪ್ರಮಾಣ ಮಾಡೋಣ. ಶ್ರೀಮಂಜುನಾಥನೇ ಸತ್ಯಾಸತ್ಯತೆಗೆ ನ್ಯಾಯ ನೀಡಲಿ ಎಂದು ಬಹಿರಂಗ ಸವಾಲೊಡ್ಡಿದ್ದಾರೆ.

ಸವಾಲು ಸ್ವೀಕರಿಸಿದ ಕುಮಾರಸ್ವಾಮಿ:
ಸಂಧಾನಕ್ಕಾಗಿ ಕೇರಳಕ್ಕೆ ಆಹ್ವಾನಿಸಿರುವ ವಿಷಯವನ್ನು ಸುಳ್ಳು ಎಂದು ತಳ್ಳಿಹಾಕಿರುವ ಯಡಿಯೂರಪ್ಪ ಶ್ರೀಧರ್ಮಸ್ಥಳದ ಮಂಜುನಾಥನ ಸನ್ನಿಧಿಯಲ್ಲಿ ಪ್ರಮಾಣ ಮಾಡಲು ನೀಡಿರುವ ಆಹ್ವಾನವನ್ನು ಸ್ವೀಕರಿಸಿರುವುದಾಗಿ ಎಚ್.ಡಿ.ಕುಮಾರಸ್ವಾಮಿ ಶನಿವಾರ ಜೆಡಿಎಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ನಾನು ಪಲಾಯನವಾದಿಯಲ್ಲ ಎಂದು ಸ್ಪಷ್ಟಪಡಿಸಿರುವ ಅವರು ನಾನಂತೂ ನಾಳೆ ಬೆಳಿಗ್ಗೆ 11ಗಂಟೆಗೆ ಧರ್ಮಸ್ಥಳಕ್ಕೆ ಬರಲು ಸಿದ್ದನಿದ್ದೇನೆ ಎಂದು ಹೇಳಿದ್ದಾರೆ. ಕಳೆದ 4-5 ತಿಂಗಳಿನಿಂದ ಸರಕಾರದ ಭ್ರಷ್ಟಾಚಾರದ ದಾಖಲೆಯನ್ನು ಹೊರ ಹಾಕಿದ್ದೇನೆ. ಅದೇ ರೀತಿ ಕುಮಾರಸ್ವಾಮಿಗೊಂದು ಬಹಿರಂಗ ಪತ್ರ ಎಂದು ಜಾಹೀರಾತು ಕೊಡುವ ಮೂಲಕ ಸರಕಾರಿ ಹಣವನ್ನು ಯಾವ ರೀತಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದರು.

ಯಡಿಯೂರಪ್ಪ ಆಣೆಗಳಿಗೆ ಎಷ್ಟು ಗೌರವ ಕೊಡುತ್ತಾರೆಂಬುದಕ್ಕೆ ಎರಡು ಉದಾಹರಣೆ ಕೊಡುತ್ತೇನೆ, ತಾನು ತನ್ನ ಮಗನಿಗೆ ಲೋಕಸಭಾ ಚುನಾವಣೆಗೆ ನಿಲ್ಲಿಸಲು ಟಿಕೆಟ್ ಕೊಡಲ್ಲ ಎಂದು ದೇವರ ಮೇಲೆ ಪ್ರಮಾಣ ಮಾಡಿದ್ದರು. ನಂತರ ಸ್ವಾಮೀಜಿಯೊಬ್ಬರ ಕೈಕಾಲು ಹಿಡಿದು, ಆಡ್ವಾಣಿಯವರ ಮೇಲೆ ಒತ್ತಡ ಹೇರಿ ಮಗನಿಗೆ ಟಿಕೆಟ್ ಕೊಡಿಸಲು ಯಶಸ್ವಿಯಾದರು. ನಂತರ ಭ್ರಷ್ಟಚಾರದ ಆರೋಪ ಬಂದಾಗ ನಂಜುಂಡೇಶ್ವರನ ಮೇಲೆ ಆಣೆ ಮಾಡಿ ಹೇಳುತ್ತೇನೆ, ಇನ್ಮುಂದೆ ತಾನು ಯಾವುದೇ ಕಾನೂನು ಬಾಹಿರ ಚಟುವಟಿಕೆ ಮಾಡಲ್ಲ ಎಂದು ಹೇಳಿದ್ದರು. ಹಾಗಾದರೆ ಅವರು ಈಗ ಮಾಡುತ್ತಿರುವುದೇನು, ಅವರಿಗೆ ಆಣೆ ಪ್ರಮಾಣವೂ ಲೆಕ್ಕಕ್ಕಿಲ್ಲ ಎಂಬುದಕ್ಕೆ ಈ ಉದಾಹರಣೆಯೇ ಸಾಕ್ಷಿ ಎಂದು ತಿರುಗೇಟು ನೀಡಿದರು.
ಇವನ್ನೂ ಓದಿ