ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ರಾಜ್ಯದ ರಾಜಕಾರಣ ಕೀಳುಮಟ್ಟಕ್ಕೆ ತಲುಪಿದೆ: ಹೆಗ್ಡೆ (Karnataka politics | Lokayukta | Santosh Hegde)
PR
ಭ್ರಷ್ಟಾಚಾರದಲ್ಲಿ ತೊಡಗಿರುವ ರಾಜಕಾರಣಿಗಳು ತಮ್ಮ ಆರೋಪಗಳಿಗೆ ಉತ್ತರಿಸಲು ಇತರ ಪಕ್ಷಗಳ ವಿರುದ್ಧ ಆರೋಪ ಹೊರಿಸಲು ಪ್ರಯತ್ನಿಸುತ್ತಿರುವುದರಿಂದ ರಾಜ್ಯದಲ್ಲಿ ರಾಜಕೀಯ ತೀರಾ ಕೀಳುಮಟ್ಟಕ್ಕೆ ಕುಸಿದಿದೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ವಿಷಾದ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಪ್ರಮುಖ ಪಕ್ಷಗಳು ಪರಸ್ಪರ ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿ, ಕೀಳು ಮಟ್ಟದ ರಾಜಕೀಯದಲ್ಲಿ ತೊಡಗಿದ್ದಾರೆ. ಅಭಿವೃದ್ಧಿ ಬಗ್ಗೆ ಯಾರೊಬ್ಬರು ಮಾತನಾಡದಿರುವುದು ರಾಜ್ಯದ ದುರ್ದೈವ ಎಂದು ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಮೂರ್ತಿ ಮತ್ತು ಲೋಕಪಾಲ್ ಕರಡು ಸಮಿತಿಯ ಸದಸ್ಯರಾದ ಹೆಗ್ಡೆ ಹೇಳಿದ್ದಾರೆ.

ರಾಜಕಾರಣಿಗಳು ಆರೋಪಗಳು ಬಂದಾಗ ನೀವು ಅಧಿಕಾರದಲ್ಲಿದ್ದಾಗ ಇದನ್ನೇ ಮಾಡಿದ್ದಲ್ಲವೇ ಎಂದು ಸಮರ್ಥಿಸಿಕೊಳ್ಳುತ್ತಾರೆಯೇ ಹೊರತು ನಾನು ಯಾವ ತಪ್ಪು ಮಾಡಿಲ್ಲ ಎಂದು ಹೇಳದಿರುವುದು ವಿಪರ್ಯಾಸ ಎಂದು ಹೆಗ್ಡೆ ತಿಳಿಸಿದ್ದಾರೆ.

ತಮ್ಮ ವಿರುದ್ಧ ರಾಜಕಾರಣಿಗಳ ಮಾಡಿರುವ ಆರೋಪಗಳ ಬಗ್ಗೆ ಹಸನ್ಮುಖವಾಗಿ ಉತ್ತರಿಸಿದ ಅವರು, ಯಾವ ರಾಜಕೀಯ ಪಕ್ಷ ನನ್ನ ವಿರುದ್ಧ ವಾಕ್‌ಪ್ರಹಾರ ನಡೆಸಿಲ್ಲ. ಯಾವ ಪಕ್ಷದವರು ನನ್ನ ವಿರುದ್ಧ ಟೀಕಾ ಪ್ರಹಾರ ನಡೆಸಿಲ್ಲ ಹೇಳಿ ನಿಮಗೆ ನಾನು ತಲೆಬಾಗುತ್ತೇನೆ ಎಂದು ಸುದ್ದಿಗಾರರಿಗೆ ಸವಾಲೆಸೆದರು.

ಲೋಕಪಾಲ ಕರಡು ಸಮಿತಿಯ ಸದಸ್ಯರಾಗಿ ಸಂತೋಷ್ ಹೆಗ್ಡೆ ಆಯ್ಕೆಯಾದ ನಂತರ, ಕೇಂದ್ರ ಕಾನೂನು ಸಚಿವ ಎಂ ವೀರಪ್ಪ ಮೊಯ್ಲಿ, ದಿಗ್ವಿಜಯ್ ಸಿಂಗ್ ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರು ವಾಗ್ದಾಳಿ ಮುಂದುವರಿಸಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಸರಕಾರ ಅಕ್ರಮ ಗಣಿಗಾರಿಕೆಯನ್ನು ನಿಲ್ಲಿಸುವಲ್ಲಿ ವಿಫಲವಾಗಿದೆ ಎಂದು ಹೆಗ್ಡೆ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ನಿತಿನ್ ಗಡ್ಕರಿ, ಹೆಗ್ಡೆ ವಿರೋಧ ಪಕ್ಷದ ನಾಯಕನಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.

ಕಳೆದ ರವಿವಾರದಂದು ಕಾಂಗ್ರೆಸ್‌ನ ಎಐಸಿಸಿ ಪ್ರದಾನ ಕಾರ್ಯದರ್ಶಿ ಹರಿಪ್ರಸಾದ್, ಅಕ್ರಮ ಗಣಿಗಾರಿಕೆ ಅಂತಿಮ ವರದಿಯನ್ನು ಸಲ್ಲಿಸಲು ಯಾಕೆ ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ಕಿಡಿಕಾರಿದ್ದರು.

ಕಾಂಗ್ರೆಸ್ ನಾಯಕರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಹೆಗ್ಡೆ, ನಿವೃತ್ತಿಯಾಗುವುದರೊಳಗಾಗಿ ಅಂತಿಮ ವರದಿ ಸಲ್ಲಿಸುತ್ತೇನೆ. ಆದರೆ, ಯಾವುದೇ ರಾಜಕಾರಣಿ ಆರೋಪಿಸಿದ್ದಾರೆ ಎನ್ನುವ ಮಾತ್ರಕ್ಕೆ ಅವಸರದಲ್ಲಿ ಸಲ್ಲಿಸಲು ಸಾಧ್ಯವಿಲ್ಲ. ವರದಿ ಅಂತಿಮ ಹಂತದಲ್ಲಿದೆ. ಶೀಘ್ರದಲ್ಲಿ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ.

ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆಯವರ ಐದು ವರ್ಷದ ಅವಧಿ, ಅಗಸ್ಟ್ ತಿಂಗಳಿಗೆ ಪೂರ್ಣಗೊಳ್ಳಲಿದ್ದು, ಅಕ್ರಮ ಗಣಿಗಾರಿಕೆ ವರದಿ ಸ್ಫೋಟಕವಾಗಿರಲಿದೆ ಎಂದು ಮೂಲಗಳು ತಿಳಿಸಿವೆ.
ಇವನ್ನೂ ಓದಿ