ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಕಾರ್ಯಕಾರಿಣಿಗೆ ಗೈರು;ಅನಂತ್-ಸಿಎಂ ಮುಸುಕಿನ ಗುದ್ದಾಟ? (Ananth kumar | BJP | Yeddyurappa | Hubballi | Congress)
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಸಂಸದ ಅನಂತ್ ಕುಮಾರ್ ಮತ್ತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಡುವಿನ ಮುಸುಕಿನ ಗುದ್ದಾಟ ಇನ್ನೂ ಮುಂದುವರಿದಂತಾಗಿದೆ. ಇದಕ್ಕೆ ಶುಕ್ರವಾರ ನಗರದಲ್ಲಿ ನಡೆದ ಕಾರ್ಯಕಾರಿಣಿ ಸಭೆಗೆ ಅನಂತ್ ಕುಮಾರ್ ಗೈರು ಹಾಜರಾಗಿರುವುದೇ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಎರಡು ದಿನಗಳ ಬಿಜೆಪಿ ಕಾರ್ಯಕಾರಿಣಿ ಸಭೆ ಇಂದು ಹುಬ್ಬಳ್ಳಿಯಲ್ಲಿ ಆರಂಭಗೊಂಡಿದೆ. ಆದರೆ ಈವರೆಗೂ ಯಾವುದೇ ಕಾರ್ಯಕಾರಿಣಿ ಸಭೆಗೆ ಗೈರುಹಾಜರಾಗದ ಹಿರಿಯ ಮುಖಂಡ ಅನಂತ್ ಕುಮಾರ್ ಮಾತ್ರ ಈ ಬಾರಿ ನವದೆಹಲಿಯಲ್ಲಿಯೇ ಠಿಕಾಣಿ ಹೂಡಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಕಾರ್ಯವೈಖರಿ ಬಗ್ಗೆ ಅಸಮಾಧಾನಗೊಂಡಿರುವ ಅನಂತ್ ಕುಮಾರ್ ಕಾರ್ಯಕಾರಿಣಿ ಸಭೆಯಿಂದ ದೂರ ಉಳಿದಿದ್ದಾರೆ ಎನ್ನಲಾಗಿದೆ. ನಾಳೆಯೂ ಕೂಡ ಅವರು ಭಾಗವಹಿಸುವ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.

ಈಗಾಗಲೇ ಸಾಕಷ್ಟು ಬಾರಿ ಅಸಮಾಧಾನಗೊಂಡಿದ್ದ ಅನಂತ್ ಕುಮಾರ್ ತೆರೆಮರೆಯಲ್ಲಿಯೇ ಬಂಡಾಯಗಾರರಿಗೆ ಬೆಂಬಲ ನೀಡುವ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ರಾಜಕೀಯದ ಚದುರಂಗದಾಟ ಆಡಿದ್ದರು. ಆದರೆ ಹೈಕಮಾಂಡ್ ಮಧ್ಯಸ್ಥಿಕೆಯಿಂದ ಆ ಎಲ್ಲ ವಿಘ್ನಗಳು ನಿರಾಂತಕವಾಗಿ ಅನಂತ್ ಮತ್ತು ಸಿಎಂ ಬಹಿರಂಗವಾಗಿ ವೇದಿಕೆ ಮೇಲೆ ಕಾಣಿಸಿಕೊಂಡು ವಿವಾದಕ್ಕೆ ತೆರೆ ಎಳೆಯುತ್ತಿದ್ದರು.

ಇದೀಗ ಅನಂತ್ ಕುಮಾರ್ ಮತ್ತೆ ಕಾರ್ಯಕಾರಿಣಿಗೂ ಗೈರು ಹಾಜರಾಗಿರುವುದು ಇಬ್ಬರ ನಡುವೆಯೂ ಅಸಮಾಧಾನದ ಹೊಗೆಯಾಡುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಅನಂತ್ ಕುಮಾರ್ ಗೈರಿಗೆ ವಿಶೇಷ ಅರ್ಥ ಬೇಡ-ಬಿಜೆಪಿ
ಸಂಸದ ಅನಂತ್ ಕುಮಾರ್ ಅವರು ಪಕ್ಷ ಸಂಘಟನೆಯ ನಿಮಿತ್ತವಾಗಿ ದೆಹಲಿಯಲ್ಲಿಯೇ ಇದ್ದಾರೆ. ಹಾಗಾಗಿ ಅವರು ಗೈರು ಹಾಜರಾಗಿರುವುದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ ಎಂದು ಬಿಜೆಪಿ ವಕ್ತಾರ ಆಯನೂರು ಮಂಜುನಾಥ್ ಸ್ಪಷ್ಟನೆ ನೀಡಿದ್ದಾರೆ.

ಅನಂತ್ ಕುಮಾರ್ ಅವರು ಪಕ್ಷ ಸಂಘಟನೆ ಕುರಿತು ಈಗಾಗಲೇ ಹಲವು ಸೂಚನೆ, ಸಲಹೆಗಳನ್ನು ನೀಡಿದ್ದಾರೆ. ಅಲ್ಲದೇ ಅವರು ನಾಳೆ ಕಾರ್ಯಕಾರಿಣಿ ಸಭೆಗೆ ಹಾಜರಾಗುವ ಸಾಧ್ಯತೆ ಇದೆ ಎಂದು ತಿಳಿಸಿದರು. ಕಾರ್ಯಕಾರಿಣಿಯ 660 ಸದಸ್ಯರಲ್ಲಿ 587 ಸದಸ್ಯರು ಪಾಲ್ಗೊಂಡಿರುವುದಾಗಿ ಆಯನೂರು ಈ ಸಂದರ್ಭದಲ್ಲಿ ಹೇಳಿದರು.

ಕಾರ್ಯಕಾರಿಣಿಯಲ್ಲಿ ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಬಗ್ಗೆ ಚರ್ಚಿಸಲಾಯಿತು. ವಿದ್ಯುತ್ ಯೋಜನೆ, ಪಡಿತರ ವಿತರಣೆ, ಉದ್ಯೋಗ ಖಾತ್ರಿ ಯೋಜನೆಯಲ್ಲಿ ತಾರತಮ್ಯ ಕುರಿತಂತೆ ಚರ್ಚೆ ನಡೆಸಲಾಯಿತು. ಆ ನಿಟ್ಟಿನಲ್ಲಿ ಕೇಂದ್ರದ ವಿರುದ್ಧ ಸಭೆಯಲ್ಲಿ ಖಂಡನಾ ನಿರ್ಣಯ ಕೈಗೊಳ್ಳಲಾಯಿತು ಎಂದರು.
ಇವನ್ನೂ ಓದಿ