ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಮುಖ್ಯಮಂತ್ರಿಯಾದ್ಮೇಲೆ ಒಂದೂ ಗಣಿ ಲೈಸೆನ್ಸ್ ಕೊಟ್ಟಿಲ್ಲ: ಸಿಎಂ (Yeddyurappa | Denies | Charges of | Illegal mining)
ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಬಹಿರಂಗಗೊಂಡಿರುವ ಲೋಕಾಯುಕ್ತರ ವರದಿಯಲ್ಲಿ ತಾನೂ ಸೇರಿದಂತೆ ನಾಲ್ವರು ಸಚಿವರ ಹೆಸರೂ ಇರುವ ಕುರಿತು ಒಂದು ದಿನದ ನಂತರ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ, ತಾನು ಯಾವುದೇ ರೀತಿಯಲ್ಲೂ ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿಲ್ಲ ಎಂದರಲ್ಲದೆ, ಮುಖ್ಯಮಂತ್ರಿಯಾದ ಬಳಿಕ ಗಣಿಗಾರಿಕೆಗೆ ಒಂದೇ ಒಂದು ಪರವಾನಗಿಯನ್ನೂ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

'ರಾಜ್ಯದಲ್ಲಿ ಹಲವಾರು ವರ್ಷಗಳಿಂದ ಅಕ್ರಮವಾಗಿ ಗಣಿಗಾರಿಕೆ ನಡೆಯುತ್ತಿರುವುದು ಸತ್ಯ. ಅಕ್ರಮ ಗಣಿಗಾರಿಕೆಯನ್ನು ನಿಯಂತ್ರಿಸಲು ಕ್ರಮ ಕೈಗೊಂಡ ಮೊದಲ ಮುಖ್ಯಮಂತ್ರಿ ನಾನು' ಎಂದು ಮಾರಿಷಸ್‌ನಿಂದಲೇ ಖಾಸಗಿ ಟಿವಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ ಯಡಿಯೂರಪ್ಪ ತಿಳಿಸಿದ್ದಾರೆ.

ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಮಂಡಳಿ ಸಮಾವೇಶದಲ್ಲಿ ಕರ್ನಾಟಕದಲ್ಲಿ ಅಕ್ರಮವಾಗಿ ನಡೆಯುತ್ತಿರುವ ಗಣಿಗಾರಿಕೆ ಕುರಿತು ಪ್ರಧಾನಿ ಮನಮೋಹನ ಸಿಂಗ್‌ ಅವರ ಗಮನಕ್ಕೆ ತಂದಿದ್ದೇ ನಾನು ಎಂದು ತಿಳಿಸಿದ ಯಡಿಯೂರಪ್ಪ, ತಾವು ಮುಖ್ಯಮಂತ್ರಿಯಾದ ನಂತರ ಗಣಿಗಾರಿಕೆಗೆ ಒಂದೇ ಒಂದು ಲೈಸೆನ್ಸನ್ನು ನೀಡಿಲ್ಲ. ಕೇಂದ್ರದ ಎಲ್ಲ ಮುಖಂಡರೂ ತಮ್ಮ ಬೆಂಬಲಕ್ಕಿದ್ದಾರೆ ಎಂದು ತಿಳಿಸಿದರು.

ಅಕ್ರಮ ಗಣಿಗಾರಿಕೆಯ ಕುರಿತು ಲೋಕಾಯುಕ್ತ ಸಂತೋಷ್‌ ಹೆಗ್ಡೆ ಅವರು ತಯಾರಿಸಿರುವ 8 ಸಾವಿರ ಪುಟಗಳ ವರದಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ, ಗಣಿ ಧಣಿಗಳಾದ ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ, ಕಂದಾಯ ಸಚಿವ ಕರುಣಾಕರ ರೆಡ್ಡಿ, ಆರೋಗ್ಯ ಸಚಿವ ಬಿ.ಶ್ರೀರಾಮುಲು, ವಸತಿ ಸಚಿವ ಸೋಮಣ್ಣ ಅವರು ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿದ್ದಾರೆ ಹಾಗೂ ಮುಖ್ಯಮಂತ್ರಿಯ ಮಕ್ಕಳು ಮತ್ತು ಅಳಿಯ ಸಹಾ ಭಾಗಿಯಾಗಿದ್ದಾರೆ ಎಂದು ಪ್ರಸ್ತಾಪವಾಗಿದೆ.

ಲೋಕಾಯುಕ್ತರ ವರದಿಯಲ್ಲಿ ಜೆಡಿಎಸ್‌ ಮುಖಂಡ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಕಾಂಗ್ರೆಸ್‌ ಸಂಸದ ಅನಿಲ್‌ ಲಾಡ್‌ ಅವರ ಹೆಸರೂ ಇದೆ. ಅಕ್ರಮ ಗಣಿಗಾರಿಕೆಯನ್ನು ತಡೆಗಟ್ಟುವಲ್ಲಿ ಮುಖ್ಯಮಂತ್ರಿ ವಿಫಲರಾಗಿದ್ದಾರೆ ಎಂದು ಲೋಕಾಯುಕ್ತರು 2008ರಲ್ಲಿ ನೀಡಿದ್ದ ಮಧ್ಯಂತರ ವರದಿಯಲ್ಲೂ ಆಪಾದಿಸಿದ್ದರು.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಯಡಿಯೂರಪ್ಪ, ಅಕ್ರಮ ಗಣಿಗಾರಿಕೆ, ಆಪಾದನೆ ನಿರಾಕರಣೆ, ಲೋಕಾಯುಕ್ತ ವರದಿ