ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಫೋನ್ ಕದ್ದಾಲಿಕೆ ಸಾಬೀತಾದ್ರೆ ರಾಜಕೀಯ ನಿವೃತ್ತಿ: ಸಿಎಂ (BJP | Phone tapping | Lokayukta | Illegal Mining Report | Yeddyurappa | SM krishna)
ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಲೋಕಾಯುಕ್ತರು ನೀಡಲಿರುವ ಅಂತಿಮ ವರದಿಗಾಗಿ ಕಾತರದಿಂದ ಕಾಯುತ್ತಿರುವುದಾಗಿ ಹೇಳಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಒಂದು ವೇಳೆ ಫೋನ್ ಕದ್ದಾಲಿಕೆ ವಿರುದ್ಧದ ಆರೋಪ ಸಾಬೀತಾದ್ರೆ ರಾಜೀನಾಮೆ ಮಾತ್ರವೇ ಅಲ್ಲ, ರಾಜಕೀಯದಿಂದ್ಲೇ ನಿವೃತ್ತಿಯಾಗುವುದಾಗಿ ಘೋಷಿಸಿದ್ದಾರೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಅಕ್ರಮ ಗಣಿ ವರದಿ ಲೋಕಾಯುಕ್ತರು ಸಲ್ಲಿಸಲಿರುವ ಹಿನ್ನೆಲೆಯಲ್ಲಿ ಸೋಮವಾರ ಸಚಿವರು, ಶಾಸಕರ ಜತೆ ಸಮಾಲೋಚನೆ ನಡೆಸಿದ ನಂತರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, 2001ರಿಂದೀಚೆಗೆ ಧರಂಸಿಂಗ್, ಎಸ್.ಎಂ.ಕೃಷ್ಣ ಅವಧಿಯಿಂದ ಹಿಡಿದು ಇಲ್ಲಿಯವರೆಗಿನ ಅಕ್ರಮ ಗಣಿಗಾರಿಕೆ ಕುರಿತು ತನಿಖೆ ಆದೇಶ ನೀಡಲಾಗಿದೆ. ಹಾಗಾಗಿ ಲೋಕಾಯುಕ್ತರು ವರದಿ ಸಲ್ಲಿಸುವುದರ ಬಗ್ಗೆಯೇ ನಿರೀಕ್ಷೆಯಲ್ಲಿದ್ದೇನೆ. ವರದಿ ಸಲ್ಲಿಕೆ ನಂತರ ಏನು ಮಾಡಬೇಕೆಂದು ಪಕ್ಷ ನಿರ್ಧರಿಸುತ್ತದೆ ಎಂದರು.

ಲೋಕಾಯುಕ್ತ ವರದಿ ಸಲ್ಲಿಕೆಗೂ ಮುನ್ನ ಯಾವುದೇ ಪ್ರತಿಕ್ರಿಯೆ ನೀಡಲ್ಲ. ಹಾಗಂತ ಲೋಕಾಯುಕ್ತ ವರದಿ ಮೊದಲೇನಲ್ಲ. ಹಲವು ವರದಿಗಳೂ ಸಲ್ಲಿಕೆಯಾಗಿವೆ. ಒಟ್ಚಿನಲ್ಲಿ ಹೈಕಮಾಂಡ್ ಕೈಗೊಳ್ಳುವ ನಿರ್ಧಾರಕ್ಕೆ ಬದ್ಧನಾಗಿರುವೆ ಎಂದು ಹೇಳುವ ಮೂಲಕ ಅಕ್ರಮ ಗಣಿ ಕುರಿತ ಲೋಕಾಯುಕ್ತ ವರದಿ ಬಗ್ಗೆ ಸ್ಪಷ್ಟ ಉತ್ತರ ನೀಡದೆ ಜಾರಿಕೊಂಡರು.

ಅಷ್ಟೇ ಅಲ್ಲ ಲೋಕಾಯುಕ್ತರ ಗಣಿ ವರದಿ ಸೋರಿಕೆಯಿಂದ ಪಾವಿತ್ರ್ಯ ಹಾಳಾಗಿದೆ ಎಂದು ಹೇಳಲ್ಲ. ಆದರೆ ಲೋಕಾಯುಕ್ತರು ಸಲ್ಲಿಸುವ ವರದಿ ನ್ಯಾಯಯುತವಾಗಿರುವುದಾಗಿ ಈ ಸಂದರ್ಭದಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.

ಅಕ್ರಮ ಗಣಿಗಾರಿಕೆ ಪ್ರಾರಂಭವಾಗಿದ್ದೇ ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ. ನಾವು ಅಕ್ರಮ ಗಣಿಗಾರಿಕೆ ತಡೆಗೆ ಸಾಕಷ್ಟು ಕ್ರಮ ಕೈಗೊಂಡಿದ್ದೇವೆ. ಅದಿರು ರಫ್ತಿಗೆ ನಿಷೇಧ ಹೇರಿದ್ದು ನಾನು. ಇದನ್ನು ಕಾಂಗ್ರೆಸ್ಸಿಗರು ಪ್ರಶ್ನಿಸಿರುವುದು ಕೂಡ ಎಲ್ಲರಿಗೂ ಗೊತ್ತಿರುವ ವಿಷಯವಾಗಿದೆ ಎಂದರು.

ಫೋನ್ ಕದ್ದಾಲಿಕೆ ಆಂತರಿಕ ವಿಷಯವಾಗಿದೆ. ಫೋನ್ ಕದ್ದಾಲಿಕೆಯಲ್ಲಿ ನನ್ನ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿರುವ ಮುಖ್ಯಮಂತ್ರಿಗಳು, ಈ ಬಗ್ಗೆ ತನಿಖೆ ನಡೆಸಲು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಎಸ್.ಎಂ.ಕೃಷ್ಣ, ಕುಮಾರಸ್ವಾಮಿ, ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆಯವರನ್ನೊಳಗೊಂಡ ಸಮಿತಿ ರಚಿಸುವಂತೆ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಗೃಹ ಸಚಿವ ಪಿ.ಚಿದಂಬರಂ ಅವರಿಗೆ ಪತ್ರ ಬರೆದಿರುವುದಾಗಿಯೂ ಹೇಳಿದರು. ಒಂದು ವೇಳೆ ಫೋನ್ ಕದ್ದಾಲಿಕೆಯಲ್ಲಿ ನನ್ನ ಪಾತ್ರವಿರುವುದು ಸಾಬೀತಾದ್ರೆ ರಾಜಕೀಯದಿಂದ್ಲೇ ನಿವೃತ್ತಿಯಾಗುವುದಾಗಿ ಹೇಳಿದರು.

ಹೈಕಮಾಂಡ್‌ಗೆ ಧಮಕಿ ಹಾಕಿಲ್ಲ:
ನನ್ನ ಹಾಗೂ ಕುಟುಂಬದ ವಿರುದ್ಧದ ಅಕ್ರಮ ಗಣಿಗಾರಿಕೆ, ಜಿ ಕೆಟಗರಿಯಡಿಯಲ್ಲಿ ಸೈಟ್ ಹಂಚಿಕೆ ಸೇರಿದಂತೆ ಇನ್ನಿತರ ಆರೋಪಗಳ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ್ ಕುಮಾರ್, ರಾಜ್ಯಸಭಾ ಸದಸ್ಯ ವೆಂಕಯ್ಯ ನಾಯ್ಡು, ರಾಜ್ಯ ಉಸ್ತುವಾರಿ ಹೊತ್ತಿರುವ ಧರ್ಮೇಂದ್ರ ಪ್ರಧಾನ್ ನೇತೃತ್ವದಲ್ಲಿ ಸಮಿತಿ ರಚಿಸಿ ತನಿಖೆ ಮಾಡುವಂತೆ ನಾನೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿಗೆ ಪತ್ರ ಬರೆದಿದ್ದೇನೆ.

ಗಡ್ಕರಿಯವರಿಗೆ ಪತ್ರ ಬರೆದಿರುವುದಾಗಿ ನಾನೇ ಹೇಳಿದ್ದೇನೆ. ನಾನೇ ಹೈಕಮಾಂಡ್‌ಗೆ ಧಮಕಿ ಹಾಕಿಲ್ಲ. ಧಮಕಿ ಹಾಕುವುದೂ ಇಲ್ಲ. ಆದರೆ ಎರಡು ಖಾಸಗಿ ಟಿವಿ ಚಾನೆಲ್‌ಗಳು ಮಾತ್ರ ಧಮಕಿ ಹಾಕಿರುವುದಾಗಿ ಸುದ್ದಿಯನ್ನು ಪ್ರಸಾರ ಮಾಡುತ್ತಿರುವುದಾಗಿಯೂ ಆರೋಪಿಸಿದರು.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಬಿಜೆಪಿ, ಫೋನ್ ಕದ್ದಾಲಿಕೆ, ಲೋಕಾಯುಕ್ತ, ಅಕ್ರಮ ಗಣಿ ವರದಿ, ಯಡಿಯೂರಪ್ಪ, ಎಸ್ಎಂಕೃಷ್ಣ