ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಗಣಿ ವರದಿ ರಾಜಕೀಯ ಪ್ರೇರಿತ, ಸಿಎಂ ಪತನಕ್ಕೆ ಸಂಚು: ರೇಣುಕಾಚಾರ್ಯ (BJP | Yeddyurappa | Illegal Mining Report | Renukacharya | Santhosh hegde)
PR
ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆಯವರು ನೀಡಿರುವ ವರದಿ ದುರುದ್ದೇಶದಿಂದ ಕೂಡಿದೆ. ಯಡಿಯೂರಪ್ಪನವರ ಸರ್ಕಾರ ಪತನಗೊಳಿಸುವ ಉದ್ದೇಶದಿಂದಲೇ ಗುಪ್ತವಾಗಿ ಮಂಡಿಸಬೇಕಾದ ವರದಿಯನ್ನು ಸೋರಿಕೆ ಮಾಡಿ ವರದಿ ಮಂಡಿಸಲಾಗಿದೆ ಎಂದು ಅಬಕಾರಿ ಸಚಿವ ರೇಣುಕಾಚಾರ್ಯ ಹೆಗ್ಡೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಲೋಕಾಯುಕ್ತರ ಬಗ್ಗೆ ಅಪಾರ ಗೌರವವಿದೆ. ಆದರೆ, ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಮಧ್ಯಂತರ ವರದಿಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಧರಂಸಿಂಗ್, ಎಸ್.ಎಂ.ಕೃಷ್ಣ ಅವರ ಹೆಸರನ್ನು ಅಂತಿಮ ವರದಿಯಲ್ಲಿ ಕೈಬಿಟ್ಟಿರುವುದು ಯಾಕೆ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಈ ಪ್ರಶ್ನೆಗಳಿಗೆ ಲೋಕಾಯುಕ್ತ ನ್ಯಾ.ಹೆಗ್ಡೆ ಸಾರ್ವಜನಿಕರಿಗೆ ಉತ್ತರ ಕೊಡಬೇಕೆಂದು ಒತ್ತಾಯಿಸಿದ್ದಾರೆ.

ಮಧ್ಯಂತರ ವರದಿಯಲ್ಲಿ 2002ರಿಂದ ತನಿಖೆ ಮಾಡಿರುವುದಾಗಿ ತಿಳಿಸಿದ್ದರು. ಆದರೆ ಅಂತಿಮ ವರದಿಯಲ್ಲಿ 2006ರಿಂದ ನಡೆಸಲಾದ ಗಣಿಗಾರಿಕೆ ಬಗ್ಗೆ ಮಾತ್ರ ಪ್ರಸ್ತಾಪಿಸಲಾಗಿದೆ. ಆದರೆ ಉದ್ದೇಶಪೂರ್ವಕವಾಗಿ ಕೃಷ್ಣ ಮತ್ತು ಧರಂಸಿಂಗ್ ಹೆಸರು ಕೈಬಿಡಲಾಗಿದೆ. ಇದರ ಹಿಂದೆ ಯಾವುದೋ ದೊಡ್ಡ ಲಾಬಿ ಕೆಲಸ ಮಾಡಿದೆ ಎಂದು ಆರೋಪಿಸಿದರು.

ವರದಿಯಲ್ಲಿ ಯಡಿಯೂರಪ್ಪನವರನ್ನು ಮುಖ್ಯವಾಗಿ ಟಾರ್ಗೆಟ್ ಮಾಡಲಾಗಿದೆ. ಅಲ್ಲದೇ ಹಿಂದಿನ ಮುಖ್ಯಮಂತ್ರಿಗಳ ಹೆಸರನ್ನು ಕೈಬಿಟ್ಟಿರುವ ಬಗ್ಗೆ ಮಾಧ್ಯಮದವರು ಪ್ರಶ್ನೆ ಕೇಳಿದಾಗ ಅದನ್ನು ಮಾಹಿತಿ ಹಕ್ಕು ಕಾಯ್ದೆ ಮೂಲಕ ವರದಿ ಪಡೆದು ವಿವರ ತೆಗೆದುಕೊಳ್ಳಿ ಎಂದು ಹೇಳಿ ಹಾರಿಕೆ ಉತ್ತರ ಕೊಟ್ಟಿರುವುದು ಯಾಕೆ ಎಂದು ಲೋಕಾಯುಕ್ತರ ನಿಲುವನ್ನು ರೇಣುಕಾಚಾರ್ಯ ಪ್ರಶ್ನಿಸಿದ್ದಾರೆ.

ಸರ್ಕಾರಕ್ಕೆ ವರದಿ ಸಲ್ಲಿಸುವಾಗ ಗುಪ್ತವಾಗಿ ಕೊಡಬೇಕಾಗಿತ್ತು. ಆದರೆ ಲೋಕಾಯುಕ್ತರು ಕಳೆದ ಒಂದು ವರ್ಷದಿಂದ ಪ್ರತಿಪಕ್ಷದ ನಾಯಕರಂತೆ ಹೇಳಿಕೆ ಕೊಟ್ಟಿದ್ದರು. ಯಾಕೆ ಪ್ರತಿಪಕ್ಷ ನಾಯಕರು ಸತ್ತು ಹೋಗಿದ್ದಾರಾ ಎಂದು ಆಕ್ರೋಶದಿಂದ ಮಾತನಾಡಿದ ಅವರು, ಈ ವರದಿಯ ಹಿಂದೆ ಯಾವುದೋ ಒಂದು ಷಡ್ಯಂತ್ರ, ಲಾಬಿ ಕೆಲಸ ಮಾಡಿರುವುದಾಗಿ ದೂರಿದರು.

ಗಣಿ ವರದಿ ರಾಜಕೀಯ ಪ್ರೇರಿತವಾಗಿದ್ದು, ಲೋಕಾಯುಕ್ತರು ವರದಿಯಲ್ಲಿ ಸತ್ಯಾಂಶ ಕೊಡಬೇಕಾಗಿತ್ತು. ಆದರೆ ಯಡಿಯೂರಪ್ಪ ಅವರನ್ನು ಅನಾವಶ್ಯಕವಾಗಿ ಬಲಿಪಶು ಮಾಡಲಾಗಿದೆ. ಅಷ್ಟೇ ಅಲ್ಲ ಫೋನ್ ಕದ್ದಾಲಿಕೆ ಯಾರು ಮಾಡಿದ್ದಾರೆಂಬುದನ್ನು ಇನ್ನು ಒಂದು ವಾರದಲ್ಲಿ ಬಹಿರಂಗಪಡಿಸುವುದಾಗಿಯೂ ಈ ಸಂದರ್ಭದಲ್ಲಿ ಹೇಳಿದರು.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಬಿಜೆಪಿ, ರೇಣುಕಾಚಾರ್ಯ, ಅಕ್ರಮ ಗಣಿ ವರದಿ, ಯಡಿಯೂರಪ್ಪ, ಸಂತೋಷ್ ಹೆಗ್ಡೆ, ಕುಮಾರಸ್ವಾಮಿ