ರಾಷ್ಟ್ರೀಯ | ಅಂತಾರಾಷ್ಟ್ರೀಯ | ಕರ್ನಾಟಕ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಕರ್ನಾಟಕ ಸುದ್ದಿ » ಕೊಪ್ಪಳ ಗೆಲುವು ಯಾರಿಗೆ?: ಹಣೆಬರಹ ಗುರುವಾರ ಬಹಿರಂಗ (Koppala by election | BJP | JDS | Congress | Kumaraswamy | sanganna karadi| Karnataka News)
ಆಡಳಿತಾರೂಢ ಬಿಜೆಪಿ ಹಾಗೂ ಪ್ರತಿಪಕ್ಷ ಕಾಂಗ್ರೆಸ್, ಜೆಡಿಎಸ್‌ಗೆ ಪ್ರತಿಷ್ಠೆಯ ಕಣವಾಗಿದ್ದ ಕೊಪ್ಪಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಘಟಾನುಘಟಿಗಳ ಭವಿಷ್ಯವನ್ನು ಮತದಾರರು ಈಗಾಗಲೇ ನಿರ್ಧರಿಸಿದ್ದು, ಗುರುವಾರ ಬೆಳಿಗ್ಗೆ ಮತಎಣಿಕೆ ನಡೆಯಲಿದ್ದು ವಿಜಯಲಕ್ಷ್ಮಿ ಯಾರಿಗೆ ಒಲಿಯಲಿದೆ ಎಂಬುದು ಕುತೂಹಲ ಕೆರಳಿಸಿದೆ. ಈಗಾಗಲೇ ಸೋಲು-ಗೆಲುವಿನ ಲೆಕ್ಕಚಾರ ಆರಂಭವಾಗಿದೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಆಪರೇಶನ್ ಕಮಲಕ್ಕೆ ಒಳಗಾಗಿ ಜೆಡಿಎಸ್ ಶಾಸಕರಾಗಿದ್ದ ಕರಡಿ ಸಂಗಣ್ಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 26ರಂದು ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ನಡೆದಿತ್ತು. ಆ ನಿಟ್ಟಿನಲ್ಲಿ ವೈಯಕ್ತಿಕವಾಗಿ ಈ ಉಪಚುನಾವಣೆ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಮತ್ತು ಎಚ್.ಡಿ.ಕುಮಾರಸ್ವಾಮಿ ನಡುವಿನ ಜಂಗೀಕುಸ್ತಿ ಆಗಿದೆ. ಇಬ್ಬರಿಗೂ ಪ್ರತಿಷ್ಠೆಯ ಕಣವಾಗಿದ್ದರಿಂದ ತಮ್ಮ ಅಭ್ಯರ್ಥಿ ಗೆಲುವಿಗಾಗಿ ಸಾಕಷ್ಟು ಕಸರತ್ತು ನಡೆಸಿದ್ದರು.

ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಕರಡಿ ಸಂಗಣ್ಣ, ಕಾಂಗ್ರೆಸ್‌ನ ಬಸವರಾಜ್ ಹಿಟ್ನಾಳ್ ಹಾಗೂ ಜೆಡಿಎಸ್‌ನ ಪ್ರದೀಪ್ ಗೌಡ ಮಾಲಿ ಪಾಟೀಲ್ ಸೇರಿದಂತೆ ಪಕ್ಷೇತರರು ಸ್ಪರ್ಧಿಸಿದ್ದರು. ಮೂರು ಪಕ್ಷದ ಮುಖಂಡರು ತಮ್ಮ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ನಡೆಸಿದ್ದರು.

ಸೋಮವಾರ ನಡೆದ ಚುನಾವಣೆಯಲ್ಲಿ ಶೇ.71.49ರಷ್ಟು ಮತದಾನವಾಗಿತ್ತು. ಕೊಪ್ಪಳ ಮತದಾನದ ಚಿತ್ರಣ ಗಮನಿಸಿದರೆ ನಗರಕ್ಕಿಂತಲೂ ಗ್ರಾಮೀಣ ಪ್ರದೇಶದಲ್ಲಿಯೇ ಉತ್ತಮ ಮತದಾನ ಆಗಿದೆ. ಹಳ್ಳಿಗಳಲ್ಲಿ ಶೇ.60ಕ್ಕಿಂತಲೂ ಹೆಚ್ಚಿನ ಮತದಾನವಾಗಿದೆ. ಕ್ಷೇತ್ರದಲ್ಲಿ ಒಟ್ಟು 1,87,464 ಮತದಾರರಲ್ಲಿ 95,091 ಪುರುಷರು, 92,373 ಮಹಿಳಾ ಮತದಾರರು ಇದ್ದಾರೆ.

ಈ ಬಾರಿ ಒಟ್ಟು 1,34,022 ಜನರು ಮತದಾನ ಮಾಡಿದ್ದು, ಇದರಲ್ಲಿ 69,837 ಪುರುಷರು, 64,185 ಮಹಿಳೆಯರು ಸೇರಿದ್ದಾರೆ. ಒಟ್ಟಾರೆ ಶೇ.73.44ರಷ್ಟು ಪುರುಷರು ಮತ ಚಲಾಯಿಸಿದ್ದು, ಶೇ.69.48ರಷ್ಟು ಮಹಿಳೆಯರು ತಮ್ಮ ಹಕ್ಕು ಚಲಾಯಿಸಿದ್ದಾರೆ.

ಜೆಡಿಎಸ್ ಮತಗಳೇ ನಿರ್ಣಾಯಕ!:
ಫಲಿತಾಂಶ ಪ್ರಕಟಕ್ಕೆ ಕ್ಷಣಗಣನೆ ಆರಂಭವಾಗಿದ್ದ ಬೆನ್ನಲ್ಲೇ, ಇದೀಗ ಸೋಲು ಗೆಲುವಿನ ಲೆಕ್ಕಚಾರವೂ ಭರ್ಜರಿಯಾಗಿಯೇ ನಡೆಯುತ್ತಿದೆ. ಯಾರು ಏನೇ ಲೆಕ್ಕಚಾರ ಹಾಕಿದರೂ, ಹಣ ಹಂಚಿದರೂ ಇಲ್ಲಿ ಜೆಡಿಎಸ್ ಎಷ್ಟು ಮತಗಳನ್ನು ಪಡೆಯಲಿದೆ ಎಂಬುದೇ ಪ್ರಮುಖ ಅಂಶ. ಮೂರು ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಪಾಲಿಗೆ ಇದುವೇ ನಿರ್ಣಾಯಕ.

ಕಳೆದ ಸಲ ಜೆಡಿಎಸ್‌ನಿಂದ ಸ್ಪರ್ಧಿಸಿ ಗೆದ್ದ ಸಂಗಣ್ಣ ಕರಡಿ ಪಡೆದಿದ್ದ ಮತ 48,372 ಆದರೆ ಈ ಸಲ ಅವರು ಬಿಜೆಪಿಯಿಂದ ಸ್ಪರ್ಧಿಸಿದ್ದಾರೆ. ಇವರ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ್ ಹಿಟ್ನಾಳ್ ಅವರು 38,072 ಮತಗಳನ್ನು ಪಡೆದು ಹತ್ತು ಸಾವಿರಕ್ಕೂ ಹೆಚ್ಚು ಮತಗಳಿಂದ ಸೋತಿದ್ದರು. ಮೂರನೇ ಸ್ಥಾನದಲ್ಲಿದ್ದ ಬಿಜೆಪಿ 22,857 ಮತಗಳನ್ನಷ್ಟೇ ಪಡೆದಿತ್ತು. ಈ ಬಾರಿ ಇಬ್ಬರ (ಜೆಡಿಎಸ್-ಬಿಜೆಪಿ) ಜಗಳ ಮೂರನೇಯವರಿಗೆ ಲಾಭ ಎಂಬಂತೆ ಕಾಂಗ್ರೆಸ್‌ಗೆ ವರದಾನವಾಗಲಿದೆಯೇ ಎಂಬುದು ಕಾದುನೋಡಬೇಕಾಗಿದೆ.

ಒಟ್ಟಾರೆ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಗೆಲುವಿಗಾಗಿ ರಣತಂತ್ರ ರೂಪಿಸಿವೆ. ಆದರೆ ಮತದಾರ ಪ್ರಭು ಯಾರಿಗೆ ಒಲಿದಿದ್ದಾನೆ ಎಂಬುದು ಗುರುವಾರ ಮಧ್ಯಾಹ್ನ ಅಧಿಕೃತವಾಗಿ ಬಹಿರಂಗವಾಗಲಿದೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಕೊಪ್ಪಳ ಉಪಚುನಾವಣೆ, ಬಿಜೆಪಿ, ಜೆಡಿಎಸ್, ಕಾಂಗ್ರೆಸ್, ಕುಮಾರಸ್ವಾಮಿ, ಸಂಗಣ್ಣ ಕರಡಿ, ಕನ್ನಡ ಸುದ್ದಿ, ಕರ್ನಾಟಕ ಸುದ್ದಿ, ಬ್ರೇಕಿಂಗ್ ನ್ಯೂಸ್, ತಾಜಾ ಕನ್ನಡ ಸುದ್ದಿ, ರಾಜಕೀಯ, ಬೆಂಗಳೂರು ಸುದ್ದಿ, ಕರ್ನಾಟಕ ರಾಜಕೀಯ, ಕನ್ನಡ ಆನ್ಲೈನ್ ನ್ಯೂಸ